ಬಜೆಟ್​​ಗೂ ಮುನ್ನವೇ ಸಿಲಿಂಡರ್ ಶಾಕ್: ಗ್ಯಾಸ್ ಬೆಲೆ 49 ರೂ ಏರಿಕೆ! | Budget 2026

Budget 2026 | ವಾಣಿಜ್ಯ ಗ್ಯಾಸ್ ಬೆಲೆ 49 ರೂ ಏರಿಕೆ
Budget 2026 | ವಾಣಿಜ್ಯ ಗ್ಯಾಸ್ ಬೆಲೆ 49 ರೂ ಏರಿಕೆ
Published on
Budget 2026: ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ, ತೈಲ ಮಾರುಕಟ್ಟೆ ಕಂಪನಿಗಳು (OMCs) ಫೆಬ್ರವರಿ 1 ರ ಭಾನುವಾರ ಬೆಳ್ಳಂಬೆಳಗ್ಗೆಯೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿವೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 49 ರೂ ಹೆಚ್ಚಿಸಿದ್ದು, ಈ ಏರಿಕೆ ಇಂದಿನಿಂದಲೇ ಜಾರಿಗೆ ಬಂದಿದೆ, ಇದು ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮದ ಮೇಲೆ ನೇರ ಪರಿಣಾಮ ಬೀರಲಿದೆ.

ಹೊಸ ಬೆಲೆ

ಇಂಡಿಯನ್ ಆಯಿಲ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಫೆಬ್ರವರಿ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,740.50 ರೂ, ಮುಂಬೈನಲ್ಲಿ 1,692 ರೂ. ಕೋಲ್ಕತ್ತಾದಲ್ಲಿ 1,844.50 ರೂ.ಗೆ ಏರಿದ್ದರೆ, ಚೆನ್ನೈನಲ್ಲಿ 1,899.50 ರೂ ಆಗಲಿದೆ. 
ಪ್ರತಿ ತಿಂಗಳ 1 ನೇ ತಾರೀಖಿನಂದು ಬೆಲೆಗಳನ್ನು ಪರಿಶೀಲಿಸಲಾಗುತ್ತದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸುತ್ತವೆ. ಜನವರಿಯಲ್ಲಿ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 111 ರೂ. ಹೆಚ್ಚಿಸಲಾಗಿತ್ತು.
 ಜನವರಿ ಮತ್ತು ಫೆಬ್ರವರಿಯಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿದ್ದರೂ, ಕಳೆದ ವರ್ಷ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ, ಬೆಲೆಗಳನ್ನು ಕ್ರಮವಾಗಿ 5 ಮತ್ತು 10 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು. ಅದಕ್ಕೂ ಮೊದಲು, ಅಕ್ಟೋಬರ್ 1 ರಂದು ಬೆಲೆಯಲ್ಲಿ 15.50 ರೂ.ಗಳಷ್ಟು ಅಲ್ಪ ಏರಿಕೆ ಕಂಡುಬಂದಿತ್ತು. 

ಉದ್ಯಮದ ಮೇಲೆ ಬೀರಲಿರುವ ಪರಿಣಾಮಗಳು

  • ವಾಣಿಜ್ಯ ಸಿಲಿಂಡರ್ ದರ ಹೆಚ್ಚಳದಿಂದಾಗಿ ಹೋಟೆಲ್ ಮಾಲೀಕರ ನಿರ್ವಹಣಾ ವೆಚ್ಚ ಹೆಚ್ಚಾಗಲಿದೆ. ಇದು ಅಂತಿಮವಾಗಿ ತಿಂಡಿ-ತಿನಿಸುಗಳ ಬೆಲೆ ಏರಿಕೆಗೂ ಕಾರಣವಾಗಬಹುದು.
  •  ಕೇಟರಿಂಗ್ ಸೇವೆ: ಸಣ್ಣ ಮತ್ತು ಬೃಹತ್ ಕೇಟರಿಂಗ್ ವ್ಯವಹಾರಗಳ ಲಾಭದ ಪ್ರಮಾಣ ತಗ್ಗಲಿದ್ದು, ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಸಾಧ್ಯತೆಯಿದೆ. 
  •  ಜನವರಿ ತಿಂಗಳಲ್ಲೂ ವಾಣಿಜ್ಯ ಸಿಲಿಂಡರ್ ಬೆಲೆ 111 ರೂ ಭಾರಿ ಏರಿಕೆ ಕಂಡಿತ್ತು. ಕೇವಲ 32 ದಿನಗಳ ಅಂತರದಲ್ಲಿ ಒಟ್ಟಾರೆಯಾಗಿ 160 ರೂಗಳಷ್ಟು ಬೆಲೆ ಹೆಚ್ಚಳವಾಗಿರುವುದು ಬಳಕೆದಾರರಲ್ಲಿ ಆತಂಕ ಮೂಡಿಸಿದೆ.

ಗೃಹ ಬಳಕೆಯ ಸಿಲಿಂಡರ್ ಕಥೆ ಏನು..?

ಸಾಮಾನ್ಯ ಜನರಿಗೆ ಇರುವ ಸಮಾಧಾನದ ಅಂಶವೆಂದರೆ, 14.2 ಕೆಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕಳೆದ ವರ್ಷದ ಏಪ್ರಿಲ್‌ನಿಂದಲೂ ಗೃಹ ಬಳಕೆಯ ಗ್ಯಾಸ್ ದರ ಸ್ಥಿರವಾಗಿದ್ದು, ಮಧ್ಯಮ ವರ್ಗದ ಕುಟುಂಬಗಳ ಬಜೆಟ್ ಮೇಲೆ ಈ ತಕ್ಷಣದ ಬೆಲೆ ಏರಿಕೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.
ಗಮನಿಸಿ: ವಾಣಿಜ್ಯ ಅನಿಲ ದರ ಏರಿಕೆಯು ಪರೋಕ್ಷವಾಗಿ ಹಣದುಬ್ಬರಕ್ಕೆ ಕಾರಣವಾಗಬಹುದು. ಹೊರಗಡೆ ಊಟ ಮಾಡುವ ಅಥವಾ ತಿಂಡಿ ಖರೀದಿಸುವ ಸಾಮಾನ್ಯ ಜನರ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net