ಸರ್ಕಾರದ ವೈಖರಿ ನೋಡಿದ್ರೆ, ಮೂರು ತಿಂಗಳು ಸಹ ಉಳಿಯುವುದಿಲ್ಲ: ಸಿಎಂ ವಿಜಯ್ ವಿರುದ್ಧ ಎಂ.ಕೆ.ಸ್ಟಾಲಿನ್ ವಾಗ್ದಾಳಿ | M K Stalin

ಸಿಎಂ ವಿಜಯ್ ಮತ್ತು ಎಂ.ಕೆ.ಸ್ಟಾಲಿನ್
ಸಿಎಂ ವಿಜಯ್ ಮತ್ತು ಎಂ.ಕೆ.ಸ್ಟಾಲಿನ್
Published on
ಚೆನ್ನೈ: ಸಿಎಂ ಸಿ.ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರದ ವೈಖರಿ ನೋಡಿದ್ರೆ, ಅದು ಆರಲ್ಲ, ಮೂರು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಭಾನುವಾರ(ಜೂ. 07) ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್(M K Stalin) ವಾಗ್ದಾಳಿ ನಡೆಸಿದ್ದಾರೆ.
ಚೆನ್ನೈನ ಡಿಎಂಕೆ ಪ್ರಧಾನ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ವಿಸಿಕೆ ಮಾಜಿ ಶಾಸಕ ಪನೈಯೂರ್ ಬಾಬು ಮತ್ತು ಅವರ ಬೆಂಬಲಿಗರು ಡಿಎಂಕೆ ಸೇರಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರದಲ್ಲಿ ಸ್ಥಿರತೆಯಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರದ ಬಗ್ಗೆ ನಾನು ಹೆಚ್ಚು ಹೇಳಬೇಕಾಗಿಲ್ಲ. ಅದು ಅಧಿಕಾರ ವಹಿಸಿಕೊಂಡಾಗ, ಆರು ತಿಂಗಳ ಕಾಲ ನಾನು ಹೊಸ ಸರ್ಕಾರವನ್ನು ಟೀಕಿಸುವುದಿಲ್ಲ ಎಂದು ಹೇಳಿದ್ದೆ. ಆದರೆ, ಸಂದರ್ಭಗಳು ನನ್ನನ್ನು ಬೇಗ ಮಾತನಾಡುವಂತೆ ಒತ್ತಾಯಿಸುತ್ತಿವೆ ಎಂದು ತಿಳಿಸಿದ್ದಾರೆ.
ಅನೇಕ ಜನ ಈಗಾಗಲೇ ಸರ್ಕಾರದ ಕಾರ್ಯವೈಖರಿ ಬಗ್ಗೆ ಮಾತನಾಡುತ್ತಿದ್ದಾರೆ. ಮತ್ತು ಹೆಚ್ಚಾಗಿ ಟೀಕೆ ಮಾಡುತ್ತಿದ್ದಾರೆ. ಇದು ಆರು ತಿಂಗಳು, ಐದು ತಿಂಗಳು ಅಥವಾ ನಾಲ್ಕು ತಿಂಗಳುಗಳ ಪ್ರಶ್ನೆಯಲ್ಲ. ಈ ಸರ್ಕಾರ ಮೂರು ತಿಂಗಳುಗಳಾದರೂ ಇರುತ್ತದೆಯೇ ಎಂಬುದು ಈಗ ಪ್ರಶ್ನೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ನಿನ್ನೆಯೂ ಟಿವಿಕೆ ಸರ್ಕಾರದ ವಿರುದ್ಧ ಮಾತನಾಡಿದ್ದ ಅವರು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುವುದನ್ನು ತಡೆಯಲು ನಮ್ಮ ಮಿತ್ರ ಪಕ್ಷಗಳು ಸರ್ಕಾರ ರಚನೆಗೆ ಬೆಂಬಲ ನೀಡಿದವು. ನಮ್ಮ ದಯೆಯಿಂದ ಇಂದು ಟಿವಿಕೆ ಸರ್ಕಾರ ರಚನೆಯಾಗಿದೆ, ಮುಂದಿನ ಚುನಾವಣೆಯಲ್ಲಿ ಅದನ್ನು ಕಿತ್ತೊಗೆಯಲು ಎಲ್ಲರೂ ಪ್ರತಿಜ್ಞೆ ಮಾಡುವಂತೆ ಕರೆ ನೀಡಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net