ಭಾರತವನ್ನು ನೋಡಿ ಕಲಿಯಿರಿ....ಬಾಂಗ್ಲಾ ಗದ್ದಲಕ್ಕೆ ಸಂಸದ ಶಶಿ ತರೂರ್​ ಅಸಮಾಧಾನ | Shashi Tharoor

Shashi Tharoor | ಕಾಂಗ್ರೆಸ್ ಸಂಸದ ಶಶಿ ತರೂರ್
Shashi Tharoor | ಕಾಂಗ್ರೆಸ್ ಸಂಸದ ಶಶಿ ತರೂರ್
Published on
ದೆಹಲಿ: ಬಾಂಗ್ಲಾದೇಶದಲ್ಲಿ ನಡೆದ ದೀಪು ಚಂದ್ರ ದಾಸ್ ಹತ್ಯೆಯನ್ನು ಖಂಡಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಭಾರತದಲ್ಲಿಯೂ ಪ್ರತಿಭಟನೆಗಳು ನಡೆಯುತ್ತವೆ ಆದರೆ ಯಾರ ಮೇಲೂ ಗುಂಡು ಹಾರಿಸಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಎಎನ್​​ಐ ಜೊತೆ ಮಾತನಾಡಿದ ತರೂರ್​, ಹಿಂಸಾಚಾರದಂತಹ ಪ್ರಯತ್ನವನ್ನು ನಮ್ಮ ದೇಶದ ಪೊಲೀಸರು ನಿಭಾಯಿಸುತ್ತಾರೆ, ಬಾಂಗ್ಲಾದೇಶಿಗಳು ಸಹ ಅದೇ ರೀತಿ ಮಾಡಬೇಕೆಂದು ನಾವು ಬಯಸುತ್ತೇವೆ. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಕೂಡ ಈ ಅಶಾಂತಿಯನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳಬೇಕು, ಇದು ಸರ್ಕಾರದ ಬದ್ಧತೆಯಾಗಿದೆ. ಬಾಂಗ್ಲಾದೇಶದಲ್ಲಿ ಮತದಾರರು ಸುರಕ್ಷಿತವಾಗಿಲ್ಲ, ಹಾಗೆಯೇ ಕಾನೂನುಬಾಹಿರತೆ ಮತ್ತು ಬೆದರಿಕೆಯ ವಾತಾವರಣದಲ್ಲಿ ಚುನಾವಣೆಗಳು ನಡೆಯಲು ಸಾಧ್ಯವಿಲ್ಲ ಎಂದು ತರೂರ್ ಹೇಳಿದ್ದಾರೆ.
ಗಡಿಯುದ್ದಕ್ಕೂ ಈ ರೀತಿಯ ಅಸ್ಥಿರ ವಾತಾವರಣವಿದ್ದರೂ, ಭಾರತದಲ್ಲಿಯೂ ಕೆಲವು ಗುಂಪುಗಳು ಪ್ರತಿಯಾಗಿ ಪ್ರತಿಭಟನೆಗಳನ್ನು ಆಯೋಜಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದಿರುವ ತರೂರ್​, ನಮ್ಮ ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕಿದೆ, ಆದರೆ ಅಲ್ಲಿನ ಪ್ರತಿಭಟನೆಗಳು ನಿಯಂತ್ರಣ ತಪ್ಪುತ್ತಿವೆ ಎನ್ನುವ ಅಂಶ ಯಾರ ಕಣ್ಣಿಗೂ ಕಾಣುತ್ತಿಲ್ಲ ಎಂದರು.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಕುರಿತಾದ ಪ್ರಶ್ನೆಗೆ ಉತ್ತರಿಸಿದ ತರೂರ್​, ಭಾರತವು ಸರಿಯಾದ ಮಾನವೀಯ ಮನೋಭಾವದಿಂದ ವರ್ತಿಸಿದೆ, ಹಲವಾರು ವರ್ಷಗಳಿಂದ ಅವರು ನವದೆಹಲಿಯ ಉತ್ತಮ ಸ್ನೇಹಿತರಾಗಿದ್ದಾರೆ, ಸರ್ಕಾರವು ಆ ಎಲ್ಲಾ ವಿಷಯಗಳನ್ನು ಹೆಚ್ಚು ವಿವರವಾಗಿ ಅಧ್ಯಯನ ಮಾಡುವವರೆಗೆ ಹಸೀನಾ ಇಲ್ಲಿ ಸುರಕ್ಷಿತವಾಗಿ ಉಳಿಯಲು ಅವಕಾಶ ನೀಡಬೇಕು ಎಂದು ಅವರು ಹೇಳಿದರು.
ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ವಿದ್ಯಾರ್ಥಿಗಳ ಬೃಹತ್​ ಪ್ರತಿಭಟನೆಯ ಬಳಿಕ ಹಸೀನಾ ಸರ್ಕಾರ ಉರುಳಿತು. ಅದಾದ ನಂತರ ಅವರು ಭಾರತಕ್ಕೆ ಪಲಾಯನ ಮಾಡಿ ಅಂದಿನಿಂದ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.
ಅಕ್ರಮ ಬಾಂಗ್ಲಾದೇಶಿ ವಲಸಿಗರು ಮತ್ತು ರೋಹಿಂಗ್ಯಾಗಳ ವಿಷಯದ ಕುರಿತು ಮಾತನಾಡಿದ ತರೂರ್​, ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಗಡೀಪಾರು ಮಾಡುವ ಹಕ್ಕು ಸರ್ಕಾರಕ್ಕೆ ಇದ್ದು, ಅಧಿಕಾರದಲ್ಲಿರುವವರು ಗಡಿಗಳನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಬೇಕು. ನಮ್ಮ ದೇಶಕ್ಕೆ ಅಕ್ರಮ ವಲಸಿಗರು ಬರುತ್ತಿದ್ದರೆ, ಅದು ನಮ್ಮ ವೈಫಲ್ಯವಲ್ಲವೇ? ನಮ್ಮ ಗಡಿಗಳನ್ನು ನಾವು ಉತ್ತಮವಾಗಿ ನಿಯಂತ್ರಿಸಬೇಕಲ್ಲವೇ? ಎಂದು ತರೂರ್ ಪ್ರಶ್ನಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net