ಬಾವಿಗೆ ಬಿದ್ದ ಮೇಕೆ ಮರಿ: ಪ್ರಾಣದ ಹಂಗು ತೊರೆದು ಕಾಪಾಡಿದ ಪುಟ್ಟ ಬಾಲಕ; ವಿಡಿಯೋ ವೈರಲ್​ | Viral Video

ಬಾವಿಯಿಂದ ಮೇಕೆ ಮರಿಯನ್ನು ಹಿಡಿದು ತಂದ ಬಾಲಕ
ಬಾವಿಯಿಂದ ಮೇಕೆ ಮರಿಯನ್ನು ಹಿಡಿದು ತಂದ ಬಾಲಕ
Published on

ಪ್ರಮುಖ ಮುಖ್ಯಾಂಶಗಳು

  • ಆಟವಾಡುವಾಗ ಬಾವಿಗೆ ಬಿದ್ದ ಮೇಕೆ ಮರಿ
  • ಆಳವಾದ ಬಾವಿಗೆ ಇಳಿದು ಮೇಕೆಯ ರಕ್ಷಣೆ ಮಾಡಿದ ಪುಟ್ಟ ಬಾಲಕ
  • ಬಾಲಕನ ಧೈರ್ಯಕ್ಕೆ ಸಲ್ಯೂಟ್​ ಹೊಡೆದ ನೆಟ್ಟಿಗರು
ಮೋತಿಹಾರಿ: ಇಂದಿನ ಕಾಲದಲ್ಲಿ ಮನುಷ್ಯ ಮನುಷ್ಯನನ್ನೇ ನಂಬದ ಸ್ಥಿತಿ ಇದೆ. ಆದರೆ ಬಿಹಾರದ ಮೋತಿಹಾರಿ ಜಿಲ್ಲೆಯ ಪಹಾರ್‌ಪುರ ಎಂಬ ಹಳ್ಳಿಯಲ್ಲಿ ನಡೆದ ಘಟನೆ ನೋಡಿದರೆ, ಮಾನವೀಯತೆ ಇನ್ನೂ ಸಂಪೂರ್ಣವಾಗಿ ಸತ್ತಿಲ್ಲ ಎಂಬ ಭರವಸೆ ಮೂಡುತ್ತದೆ. ಕೇವಲ ಒಂದು ಪುಟ್ಟ ಮೇಕೆ ಮರಿಯ ಪ್ರಾಣ ಉಳಿಸಲು ಬಾಲಕನೊಬ್ಬ ತನ್ನ ಜೀವವನ್ನೇ ಪಣಕ್ಕಿಟ್ಟ ಸಾಹಸದ ಕಥೆ ಈಗ ಸಾಮಾಜಿಕ ಮಾಧ್ಯಮದಾದ್ಯಂತ ಸಖತ್​ ವೈರಲ್ (Viral Video)​ ಆಗುತ್ತಿದೆ.

ಆಟವಾಡುತ್ತಿದ್ದಾಗ ಸಂಭವಿಸಿದ ಅನಾಹುತ

ಪಹಾರ್‌ಪುರ ಹಳ್ಳಿಯ ಹೊರವಲಯದಲ್ಲಿರುವ ಆಳವಾದ ಬಾವಿಯ ಬಳಿ ಮೇಕೆ ಮರಿಯೊಂದು ಆಟವಾಡುತ್ತಿತ್ತು. ಆಕಸ್ಮಿಕವಾಗಿ ಕಾಲು ಜಾರಿ ಅದು ಆಳವಾದ ಬಾವಿಯೊಳಗೆ ಬಿದ್ದಿದೆ. ಬಾವಿಯ ಆಳ ಎಷ್ಟಿತ್ತೆಂದರೆ, ಒಳಗಿನಿಂದ ಮೇಕೆ ಮರಿ ಕಿರುಚುವ ಸದ್ದು ಕೇಳುತ್ತಿತ್ತೇ ಹೊರತು ಅದು ಎಲ್ಲಿದೆ ಎಂದು ಸರಿಯಾಗಿ ಕಾಣಿಸುತ್ತಿರಲಿಲ್ಲ. ಮರಿಯ ಚೀರಾಟ ಕೇಳಿ ಗ್ರಾಮಸ್ಥರು ಓಡಿ ಬಂದಿದ್ದಾರೆ, ಆದರೆ ಬಾವಿಯ ಆಳ ನೋಡಿ ಎಲ್ಲರೂ ಯಾರು ಅದರಲ್ಲಿ ಇಳಿಯುವ ಧೈರ್ಯ ಮಾಡಿಲ್ಲ.
ಬಾವಿಗಿಳಿಯಲು ಸಿದ್ಧನಾದ ಚೋಟಾ ಚಾಂಪಿಯನ್​!
ಯಾರು ಬಾವಿಗೆ ಇಳಿಯಲು ಧೈರ್ಯ ಮಾಡದೇ ಇದ್ದಾಗ, ಒಬ್ಬ ಪುಟ್ಟ ಬಾಲಕ ಮುಂದೆ ಬಂದಿದ್ದಾನೆ. ಇದು ಅತ್ಯಂತ ಅಪಾಯಕಾರಿ ಕೆಲಸ ಎಂದು ತಿಳಿದಿದ್ದರೂ, ಮೇಕೆ ಮರಿಯನ್ನು ಉಳಿಸಲು ತಾನು ಬಾವಿಗೆ ಇಳಿಯಲು ಸಿದ್ಧನಿರುವುದಾಗಿ ಹುಡುಗ ಹೇಳಿದ್ದಾನೆ.
ಬಾಲಕನ ಸೊಂಟಕ್ಕೆ ಭದ್ರವಾಗಿ ಹಗ್ಗವನ್ನು ಕಟ್ಟಿ, ಹಳ್ಳಿಯ ಹತ್ತಾರು ಜನರು ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಂಡರು. ಬಾಲಕನನ್ನು ನಿಧಾನವಾಗಿ ಆ ಕತ್ತಲೆ ಬಾವಿಯೊಳಗೆ ಇಳಿಸಲಾಯಿತು. ಒಂದು ಸಣ್ಣ ತಪ್ಪು ನಡೆದರೂ ಹುಡುಗನ ಪ್ರಾಣಕ್ಕೆ ಅಪಾಯವಿತ್ತು. ಆದರೆ ಆ ಬಾಲಕ ಕಿಂಚಿತ್ತೂ ಭಯಪಡದೆ ಕೆಳಕ್ಕಿಳಿದು, ಭಯದಿಂದ ನಡುಗುತ್ತಿದ್ದ ಮೇಕೆ ಮರಿಯನ್ನು ತನ್ನ ಕೈಗಳಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ.

ಹಳ್ಳಿಯಲ್ಲೀಗ ಹಬ್ಬದ ವಾತಾವರಣ

ಮೇಲೆ ಹಗ್ಗ ಹಿಡಿದಿದ್ದ ಜನರು ಬಾಲಕ ಮತ್ತು ಮೇಕೆ ಮರಿಯನ್ನು ಸುರಕ್ಷಿತವಾಗಿ ಮೇಲೆತ್ತಿದರು. ಬಾಲಕ ಮತ್ತು ಮರಿ ಇಬ್ಬರೂ ಸುರಕ್ಷಿತವಾಗಿ ಹೊರಬಂದಾಗ ಹಳ್ಳಿಯ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ. ಬಾಲಕನ ಧೈರ್ಯವನ್ನು ಕಂಡ ಜನರು ಅವನ ಮೇಲೆ ಹಾರೈಕೆಗಳ ಮಳೆ ಸುರಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಈ ಸಾಹಸದ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ಜೀವ ಯಾವುದಾದರೇನು, ಜೀವ ಜೀವವೇ ಎಂದು ಬಾಲಕನ ಸಾಹಸಕ್ಕೆ ನೆಟ್ಟಿಗರು ಸಲ್ಯೂಟ್ ಹೊಡೆಯುತ್ತಿದ್ದಾರೆ. ಕೇವಲ ಒಂದು ಮೇಕೆ ಮರಿಗಾಗಿ ಇಷ್ಟೊಂದು ದೊಡ್ಡ ಸಾಹಸ ಮಾಡಿದ ಬಾಲಕ ಈಗ ಹಳ್ಳಿಯ ರಿಯಲ್ ಹೀರೋ ಆಗಿದ್ದಾನೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net