GOAT ಇಂಡಿಯಾ ಟೂರ್-2025ರ ಕೊನೆಯಲ್ಲಿ ಅಂಬಾನಿ ಸ್ಪೆಷಲ್ ಸ್ಪಾಟ್‌ಗೆ ಮೆಸ್ಸಿ!

GOAT India Tour
GOAT India Tour
Published on

ಪ್ರಮುಖ ಮುಖ್ಯಾಂಶಗಳು

  • ಭಾರತ ಪ್ರವಾಸದ ಕೊನೆಯ ವೇಳೆ ಅನಿರೀಕ್ಷಿತವಾಗಿ ವಿಶೇಷ ಸ್ಥಳ ಸಂದರ್ಶಿಸಿದ ಮೆಸ್ಸಿ
  • ಅನಂತ್ ಅಂಬಾನಿಯವರ ಸ್ಥಾಪಿಸಿದ ವಂತಾರಾಕ್ಕೆ ಭೇಟಿ ಕೊಟ್ಟ ಗೋಟ್​
  • ಈ ಭೇಟಿಯು ಮೆಸ್ಸಿ ಅವರ ಭಾರತ ಪ್ರವಾಸಕ್ಕೆ ಒಂದು ವಿಶೇಷ ಅಂತ್ಯ ನೀಡಿದೆ
ನವದೆಹಲಿ: ಫುಟ್ಬಾಲ್ ದಂತಕತೆ, ತಮ್ಮ ವೃತ್ತಿಜೀವನದ 48ನೇ ಟ್ರೋಫಿಯನ್ನು ಗೆದ್ದ ಅರ್ಜೆಂಟೀನಾದ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi) GOAT ಇಂಡಿಯಾ ಟೂರ್-2025 ಭಾಗವಾಗಿ ಮೂರು ದಿನಗಳ ಭಾರತ ಪ್ರವಾಸ ಸುಖಾಂತ್ಯ ಕಂಡಿದೆ. ಅಲ್ಲದೆ, ಭಾರತ ಪ್ರವಾಸದ ಕೊನೆಯ ವೇಳೆ ಅನಿರೀಕ್ಷಿತವಾಗಿ ಅನಂತ್​ ಅಂಬಾನಿ ಅವರ ಆಹ್ವಾನದ ಮೇರೆಗೆ ವಿಶೇಷ ಸ್ಥಳವನ್ನು ಸಂದರ್ಶನ ಮಾಡಿದ್ದಾರೆ.
ಹೌದು, ಮೆಸ್ಸಿ ಅವರು ತಮ್ಮ GOAT India Tour 2025ರ ಅಂತಿಮ ಹಂತದಲ್ಲಿ ಗುಜರಾತ್‌ನ ಜಾಮ್‌ನಗರಕ್ಕೆ ಆಗಮಿಸಿ, ಅನಂತ್ ಅಂಬಾನಿಯವರ ಸ್ಥಾಪಿಸಿದ ವಂತಾರಾ (Vantara) ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದರು.
ಡಿಸೆಂಬರ್ 15ರ ಸಂಜೆ ಸೋಮವಾರ ಸಂಜೆ ಮೆಸ್ಸಿ ಅವರು ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಜೊತೆಗೆ ಜಾಮ್‌ನಗರಕ್ಕೆ ತಲುಪಿದರು. ಅನಂತ್ ಅಂಬಾನಿಯವರು ವೈಯಕ್ತಿಕವಾಗಿ ಅತಿಥೇಯರಾಗಿ ಸ್ವಾಗತಿಸಿ, ರಾತ್ರಿ ವಾಸ್ತವ್ಯಕ್ಕೆ ಆಯೋಜನೆ ಮಾಡಿದ್ದರು ಎಂದು ವರದಿ ಉಲ್ಲೇಖಿಸಿದೆ. ಮಂಗಳವಾರ (ಡಿಸೆಂಬರ್ 16) ಬೆಳಗ್ಗೆ ಮೆಸ್ಸಿ ಅವರು ಜಾಮ್‌ನಗರ್ ವಿಮಾನ ನಿಲ್ದಾಣದಿಂದ ಹೊರಟುಹೋದರು. ಈ ಭೇಟಿಯು ಮೆಸ್ಸಿ ಅವರ ಭಾರತ ಪ್ರವಾಸಕ್ಕೆ ಒಂದು ವಿಶೇಷ ಅಂತ್ಯ ನೀಡಿದ್ದು, ವನ್ಯಜೀವಿ ಸಂರಕ್ಷಣೆಗೆ ಜಾಗತಿಕ ಗಮನ ಸೆಳೆದಿದೆ.
ಏನಿದು ವಂತಾರಾ?
ರಿಲಯನ್ಸ್​ ಇಂಡಸ್ಟ್ರೀಸ್​ ನಿರ್ದೇಶಕ ಅನಂತ್​ ಅಂಬಾನಿ ಅವರು ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರವನ್ನು ತೆರೆಯುವ ತಮ್ಮ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್​ ಅನ್ನು 2024ರ ಫೆ.26ರಂದು ಘೋಷಣೆ ಮಾಡಿದರು. ಈ ಪ್ರಾಜೆಕ್ಟ್​ ಹೆಸರು ವಂತಾರಾ. ಇದರ ಅರ್ಥ ಕಾಡಿನ ನಕ್ಷತ್ರ. ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಪೋಷಣೆ ಮತ್ತು ಗಾಯಗೊಂಡ ಪ್ರಾಣಿಗಳ ಪುನರ್ವಸತಿ, ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಈ ಯೋಜನೆಯ ಪ್ರಮುಖ ಗುರಿಯಾಗಿದ್ದು, ದೇಶ ಮತ್ತು ವಿದೇಶ ಎರಡರಲ್ಲೂ ಕಾರ್ಯನಿರ್ವಹಿಸಲಿದೆ.
ಗುಜರಾತಿನ ರಿಲಯನ್ಸ್​ನ ಜಾಮ್‌ನಗರ ರಿಫೈನರಿ ಕಾಂಪ್ಲೆಕ್ಸ್‌ನ ಗ್ರೀನ್ ಬೆಲ್ಟ್‌ನಲ್ಲಿ 3000 ಎಕರೆಗಳಷ್ಟು ವಿಶಾಲ ಪ್ರದೇಶವಿದ್ದು, ವಂತಾರಾ ಕಾರ್ಯಕ್ರಮದ ಅಡಿಯಲ್ಲಿ ಈ ಜಾಗವನ್ನು ಕಾಡಿನಂತಹ ಪರಿಸರಕ್ಕೆ ಪರಿವರ್ತಿಸಲಾಗಿದೆ. ಸಂರಕ್ಷಿಸಲ್ಪಟ್ಟ ಪ್ರಾಣಿಗಳ ಪಾಲನೆಗಾಗಿ ನೈಸರ್ಗಿಕ, ಸಮೃದ್ಧ ಮತ್ತು ಹಸಿರು ಆವಾಸಸ್ಥಾನವನ್ನು ಹೊಂದಿದೆ. ಜಾಗತಿಕವಾಗಿ ಪ್ರಾಣಿ ಸಂರಕ್ಷಣಾ ಪ್ರಯತ್ನಗಳಿಗೆ ಪ್ರಮುಖ ಕೊಡುಗೆ ನೀಡುವವರಲ್ಲಿ ಮೂಂಚೂಣಿ ಸ್ಥಾನದಲ್ಲಿ ನಿಲ್ಲುವ ಗುರಿಯನ್ನು ವಂತಾರಾ ಗುರಿ ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ವಂತಾರಾ ಪ್ರಾಜೆಕ್ಟ್​ ಗುಜರಾತಿನ ಜಾಮ್‌ನಗರದಲ್ಲಿ ರಿಲಯನ್ಸ್‌ನ ನವೀಕರಿಸಬಹುದಾದ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿರುವ ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​ ಮತ್ತು ರಿಲಯನ್ಸ್ ಫೌಂಡೇಶನ್ ಮಂಡಳಿಗಳ ನಿರ್ದೇಶಕರಾದ ಅನಂತ್​ ಅಂಬಾನಿ ಅವರ ಪರಿಕಲ್ಪನೆಯಾಗಿದೆ ಮತ್ತು ಕನಸಿನ ಯೋಜನೆಯೂ ಆಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net