ವ್ಯಾಪಾರ ಒಪ್ಪಂದದ ಗುಟ್ಟನ್ನು ದೇಶದ ಮುಂದೆ ರಟ್ಟು ಮಾಡಿ...ಟ್ರಂಪ್​ ಜೊತೆಗಿನ ಚರ್ಚೆಯ ಪೂರ್ಣ ವಿವರಕ್ಕೆ ಪಟ್ಟು ಹಿಡಿದ ಕಾಂಗ್ರೆಸ್ | Congress Slams Centre

Congress Slams Centre | ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್​ ಟ್ರಂಪ್​
Congress Slams Centre | ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್​ ಟ್ರಂಪ್​
Published on
ದೆಹಲಿ: ಹೊಸದಾಗಿ ಘೋಷಿಸಲಾದ ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಬಗ್ಗೆ ವಿರೋಧ ಪಕ್ಷ ಕಾಂಗ್ರೆಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಹೇಳಿದೆ.
ಕಾಂಗ್ರೆಸ್​​ ಪಕ್ಷದ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಈ ಒಪ್ಪಂದವು ದೇಶದ ರೈತರು, ವ್ಯಾಪಾರಿಗಳು ಮತ್ತು ಉದ್ಯಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನವುದನ್ನು ವಿವರಿಸುವಂತೆ ತಾಕೀತು ಮಾಡಿದೆ.
ಉಭಯ ದೇಶಗಳ ವ್ಯಾಪಾರ ಒಪ್ಪಂದವನ್ನು ಮೊದಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ವೇದಿಕೆಯಾದ ಟ್ರೂತ್ ಸೋಷಿಯಲ್‌ನಲ್ಲಿ ಘೋಷಿಸಿದರು. ಅದರಲ್ಲಿ ಟ್ರಂಪ್​, ಮೋದಿಯವರ ಕೋರಿಕೆಯ ಮೇರೆಗೆ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ರೀತಿಯ ಮಹತ್ವದ ವ್ಯಾಪಾರ ನಿರ್ಧಾರವನ್ನು ಭಾರತ ಸರ್ಕಾರಕ್ಕೆ ಬದಲಾಗಿ ಅಮೆರಿಕದ ಅಧ್ಯಕ್ಷರು ಏಕಪಕ್ಷೀಯವಾಗಿ ಏಕೆ ಘೋಷಿಸಿದರು ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.
ಭಾರತವು ಅಮೆರಿಕದ ವಿರುದ್ಧದ ಸುಂಕ ಮತ್ತು ಸುಂಕೇತರ ಅಡೆತಡೆಗಳನ್ನು ಶೂನ್ಯಕ್ಕೆ ಇಳಿಸುತ್ತದೆ ಎಂಬ ಟ್ರಂಪ್ ಹೇಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್, ಟ್ರಂಪ್​ ಮಾತಿನ ಅರ್ಥ ಭಾರತವು ತನ್ನ ಮಾರುಕಟ್ಟೆಯನ್ನು ಅಮೆರಿಕದ ಉತ್ಪನ್ನಗಳಿಗೆ ಸಂಪೂರ್ಣವಾಗಿ ತೆರೆಯಲು ತಯಾರಿ ನಡೆಸುತ್ತಿದೆ, ಇದು ಸ್ಥಳೀಯ ವ್ಯವಹಾರಗಳಿಗೆ ಹಾನಿಯನ್ನುಂಟುಮಾಡಬಹುದು ಎನ್ನುವುದು ಕೈ ಪಾಳಯದ ವಾದ.
ಭಾರತದ ಕೃಷಿ ಕ್ಷೇತ್ರವನ್ನು ಅಮೆರಿಕಕ್ಕೆ ತೆರೆಯುವ ಬಗ್ಗೆಯೂ ಉಲ್ಲೇಖವಿದೆ, ಒಂದು ವೇಳೆ ಹಾಗಾದರೆ ಅಂತಹ ವ್ಯವಸ್ಥೆಯಡಿಯಲ್ಲಿ ಭಾರತೀಯ ರೈತರ ಹಿತಾಸಕ್ತಿ ಮತ್ತು ಭದ್ರತೆಯನ್ನು ರಕ್ಷಿಸಲು ಸರ್ಕಾರ ಹೇಗೆ ಯೋಜಿಸಿದೆ ಎನ್ನುವುದು ಕಾಂಗ್ರೆಸ್​ ಎತ್ತಿರುವ ಪ್ರಮುಖ ಪ್ರಶ್ನೆ.
ಮೋದಿ ಸರ್ಕಾರ ರಷ್ಯಾದಿಂದ ತೈಲ ಖರೀದಿಸುವುದಿಲ್ಲ, ಬದಲಾಗಿ ಅಮೆರಿಕ ಮತ್ತು ವೆನೆಜುವೆಲಾದಿಂದ ಖರೀದಿಸುತ್ತದೆ ಎಂದು ಹೇಳಲಾಗಿದೆ. ಈ ಷರತ್ತಿಗೆ ಮೋದಿ ಸರ್ಕಾರ ಒಪ್ಪಿಕೊಂಡಿದೆಯೇ? ಎನ್ನುವುದು ಬಹಿರಂಗವಾಗಬೇಕು.
ಭಾರತವು ಅಮೆರಿಕದಿಂದ ಹೆಚ್ಚಿನ ಸರಕುಗಳನ್ನು ಖರೀದಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ, ಹಾಗಾದರೇ ಸರ್ಕಾರದ "ಮೇಕ್ ಇನ್ ಇಂಡಿಯಾ" ಅಭಿಯಾನದ ಅರ್ಥವೇನು ಎಂದು ಕಾಂಗ್ರೆಸ್​​ ಪಕ್ಷ ಪ್ರಶ್ನಿಸಿದ್ದು, ವ್ಯಾಪಾರ ಒಪ್ಪಂದದ ವಿವರಗಳನ್ನು ತಿಳಿದುಕೊಳ್ಳುವ ಹಕ್ಕು ಭಾರತಕ್ಕೆ ಇದೆ. ಮೋದಿ ಸರ್ಕಾರ ಸಂಸತ್ತು ಮತ್ತು ಇಡೀ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ವಿವರಗಳನ್ನು ಹಂಚಿಕೊಳ್ಳಬೇಕೆಂದು ಕೈ ನಾಯಕರು ಒತ್ತಾಯಿಸಿದ್ದಾರೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ

ಭಾರತ ಮತ್ತು ಅಮೆರಿಕ ಸೋಮವಾರ ಒಂದು ಮಹತ್ವದ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸಿದ್ದು, ಒಂದು ವರ್ಷ ಪೂರ್ತಿ ನಡೆದ ಬಿಸಿ ಸುಂಕ ವಿವಾದವನ್ನು ಕೊನೆಗೊಳಿಸಿದೆ. ಸೋಮವಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ರಫ್ತುಗಳ ಮೇಲಿನ ಪರಸ್ಪರ ಸುಂಕಗಳನ್ನು ಹಿಂದಿನ 25% ರಿಂದ 18% ಕ್ಕೆ ಇಳಿಸುವುದಾಗಿ ಘೋಷಿಸಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net