

ಚೀನಾ ಸರ್ಕಾರದ ಬೆಂಬಲದೊಂದಿಗೆ ಸೈಬರ್ ದಾಳಿಕೋರರು ಅಭಿವೃದ್ಧಿಪಡಿಸಿರುವ ‘ಲೈಟ್ಸ್ಪೈ’ ಎಂಬ ಅತ್ಯಂತ ಅಪಾಯಕಾರಿ ಸ್ಪೈವೇರ್, ಈಗ ಭಾರತ, ಅಮೆರಿಕ ಸೇರಿದಂತೆ ಜಗತ್ತಿನ 13ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿದೆ. ಬಳಕೆದಾರರ ಲೊಕೇಶನ್, ಆಡಿಯೊ, ಚಾಟ್, ಸ್ಕ್ರೀನ್ ಚಟುವಟಿಕೆಯ ಎಲ್ಲ ದಾಖಲೆಗಳನ್ನು ಕದಿಯುವುದು ಮಾತ್ರವಲ್ಲದೆ ಮೊಬೈಲ್ ಸಾಧನಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಈ ಮಾಲ್ವೇರ್ ಹೊಂದಿದೆ. ಈ ಜಾಲದ ಅಪಾಯಗಳು, ಭಾರತದ ಮೇಲಿನ ಅದರ ಪರಿಣಾಮ ಮತ್ತು ರಕ್ಷಣೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತ ಮಾಹಿತಿ ಇಲ್ಲಿದೆ.
ಲೈಟ್ಸ್ಪೈ ಎನ್ನುವುದು ಐಒಎಸ್, ಆಂಡ್ರಾಯ್್ಡ ಸೇರಿದಂತೆ ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್ ಸಾಧನದೊಳಗೆ ಆಳವಾಗಿ ನುಸುಳಿ, ಅದರಲ್ಲಿರುವ ಸಂಪೂರ್ಣ ಮಾಹಿತಿ ಕದಿಯಬಲ್ಲ ಒಂದು ಮಾಡ್ಯುಲರ್ ಬೇಹುಗಾರಿಕಾ ಫ್ರೇಮ್ರ್ಕ್. ಇದು ಮೊದಲ ಬಾರಿಗೆ 2020ರಲ್ಲಿ ಹಾಂಕಾಂಗ್ನ ಪ್ರಜಾಪ್ರಭುತ್ವಪರ ಹೋರಾಟಗಾರರು ಮತ್ತು ಸರ್ಕಾರದ ವಿರುದ್ಧ ಧ್ವನಿ ಎತ್ತಿದವರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದಾಗ ಬೆಳಕಿಗೆ ಬಂದಿತ್ತು. ಆರಂಭದಲ್ಲಿ ಪ್ರಸಿದ್ಧ ನ್ಯೂಸ್ ವೆಬ್ಸೈಟ್ಗಳ ನಕಲಿ ಲಿಂಕ್ಗಳನ್ನು ಬಳಸಿ ಐಫೋನ್ ಬಳಕೆದಾರರನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ಕಾಲಕ್ರಮೇಣ ಈ ತಂತ್ರಜ್ಞಾನವನ್ನು ಆಂಡ್ರಾಯ್ಡ್ ಮತ್ತು ಮ್ಯಾಕ್ ಸಾಧನಗಳಿಗೂ ವಿಸ್ತರಿಸ ಲಾಗಿದ್ದು, ಅತ್ಯಂತ ಆಕ್ರಮಣಕಾರಿ ಪ್ಲಗಿನ್ಗಳನ್ನು ಇದಕ್ಕೆ ಸೇರಿಸಲಾಗಿದೆ.
ಸೈಬರ್ ರಕ್ಷಣಾ ಸಂಸ್ಥೆಗಳಾದ ಆರ್ಕ್ಟಿಕ್ ವುಲ್ಪ್ ಮತ್ತು ಸೆಂಟಿನೆಲ್ ಒನ್ ನಡೆಸಿರುವ ಅಧ್ಯಯನಗಳ ಪ್ರಕಾರ, ಲೈಟ್ಸ್ಪೈನ ಪ್ರಮುಖ ಗುರಿಗಳಲ್ಲಿ ಭಾರತವೂ ಒಂದು. ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದಗಳು, ದಕ್ಷಿಣ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ, ಭಾರತದ ಪ್ರಮುಖ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳು, ರಕ್ಷಣಾ ತಜ್ಞರು, ಪತ್ರಕರ್ತರು ಮತ್ತು ರಾಜಕೀಯ ಮುಖಂಡರ ಮೊಬೈಲ್, ಕಂಪ್ಯೂಟರ್ಗಳೇ ಇದಕ್ಕೆ ಟಾರ್ಗೆಟ್. ಭಾರತದಲ್ಲಿ ಬಳಕೆಯಲ್ಲಿರುವ ಆಪಲ್ ಮ್ಯಾಕ್ಬುಕ್ ಹಾಗೂ ಮ್ಯಾಕ್ ಕಂಪ್ಯೂಟರ್ಗಳನ್ನು ಗುರಿಯಾಗಿಸಿಕೊಂಡು ಲೈಟ್ಸ್ಪೈ ದಾಳಿಗಳನ್ನು ನಡೆಸಿರುವುದು ಪತ್ತೆಯಾಗಿದೆ.
ಸಾಧಾರಣ ಸೈಬರ್ ವೈರಸ್ಗಳು ಕೇವಲ ಪಾಸ್ವರ್ಡ್ ಅಥವಾ ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತವೆ. ಲೈಟ್ಸ್ಪೈ ಹಾಗಲ್ಲ. ಎಲೆಕ್ಟ್ರಾನಿಕ್ ಉಪಕರಣದ ಮೇಲೆ ಸಂಪೂರ್ಣ ನಿಯಂತ್ರಣ ಪಡೆದುಕೊಳ್ಳುತ್ತದೆ. ಬಳಕೆದಾರರು ಎಲ್ಲಿದ್ದಾರೆ ಎಂಬುದನ್ನು ಜಿಪಿಎಸ್, ಹತ್ತಿರ ವೈಫೈ ಮೂಲಕ ನಿಖರವಾಗಿ ಪತ್ತೆ ಹಚ್ಚುತ್ತದೆ. ಸಾಧಾರಣ ಫೋನ್ ಕರೆಗಳು ಮಾತ್ರವಲ್ಲದೆ, ಟೆಲಿಗ್ರಾಂ, ವಾಟ್ಸ್ಆಪ್, ವಿಚಾಟ್ನಂತಹ ಸುರಕ್ಷಿತ ಮೆಸೇಜಿಂಗ್ ಆಪ್ಗಳ ಮೂಲಕ ನಡೆಯುವ ವಾಯ್ಸ್ ಕರೆಗಳು ಮತ್ತು ಆಡಿಯೊ ಸಂದೇಶಗಳನ್ನು ಗುಟ್ಟಾಗಿ ರೆಕಾರ್ಡ್ ಮಾಡಿ ಹ್ಯಾಕರ್ಗಳ ಸರ್ವರ್ಗೆ ರವಾನಿಸುತ್ತದೆ. ಮೊಬೈಲ್ ಅಥವಾ ಕಂಪ್ಯೂಟರ್ನ ಕ್ಯಾಮೆರಾವನ್ನು ರಹಸ್ಯವಾಗಿ ಆನ್ ಮಾಡಿ ವಿಡಿಯೊ ಚಿತ್ರಿಸುವುದು, ಸ್ಕ್ರೀನ್ಶಾಟ್ ತೆಗೆಯುವುದು ಹಾಗೂ ಸಾಧನದ ಸ್ಕ್ರೀನ್ನಲ್ಲಿ ನಡೆಯುವ ಚಟುವಟಿಕೆಯನ್ನು ರೆಕಾರ್ಡ್ ಮಾಡುವ ಪ್ಲಗಿನ್ಗಳನ್ನು ಇದು ಹೊಂದಿದೆ! ಸಾಧನದಲ್ಲಿರುವ ಕಾಂಟ್ಯಾಕ್ಟ್ಗಳು, ಎಸ್ಸೆಮ್ಮೆಸ್, ಬ್ರೌಸರ್ ಹಿಸ್ಟರಿ, ಗ್ಯಾಲರಿಯಲ್ಲಿರುವ ಫೋಟೋಗಳು, ಪೇಮೆಂಟ್ ಆಪ್ಗಳ ಡೇಟಾವನ್ನೂ ಕದಿಯುತ್ತದೆ. ಇತ್ತೀಚಿನ ಆವೃತ್ತಿಗಳಲ್ಲಿ ಲೈಟ್ಸ್ಪೈಗೆ ಸೇರಿಸಿರುವ ಅತ್ಯಂತ ಅಪಾಯಕಾರಿ ಪ್ಲಗಿನ್ ಎಂದರೆ ‘ಬೂಟ್ ಡೆಸ್ಟ್ರಾಯ್’. ಇದರ ಮೂಲಕ ಸಾಧನದಲ್ಲಿರುವ ಸಂಪೂರ್ಣ ಡೇಟಾವನ್ನು ಅಳಿಸಿಹಾಕಬಹುದು ಅಥವಾ ಫೋನ್/ಕಂಪ್ಯೂಟರ್ ರೀಬೂಟ್ ಆಗದಂತೆ ಮಾಡಿ, ಅವುಗಳನ್ನು ಸಂಪೂರ್ಣವಾಗಿ ನಿರುಪಯುಕ್ತ ಮಾಡಬಹುದು.
ಚೀನಾದಲ್ಲಿದ್ದ ಒಬ್ಬ ಹ್ಯಾಕರ್ ತಾನು ಬಳಸುತ್ತಿದ್ದ ಬಿಲ್ಲಿಂಗ್ ಸಿಸ್ಟಮ್ ಮೂಲಕ ಕೆಎಫ್ಸಿ ಚಿಕನ್ ಆರ್ಡರ್ ಮಾಡುವಾಗ ತಪ್ಪಾಗಿ ತನ್ನ ನಿಜವಾದ ಹೆಸರು ಮತ್ತು ಆಫೀಸ್ ವಿಳಾಸವನ್ನು ಕೋಡ್ನಲ್ಲಿ ಬಿಟ್ಟುಹೋಗಿದ್ದರಿಂದ, ಸೈಬರ್ ತಜ್ಞರಿಗೆ ಈ ಜಾಲದ ಮೂಲ ಚೀನಾದಲ್ಲಿದೆ ಎಂಬ ಬಲವಾದ ಸಾಕ್ಷ್ಯ ದೊರೆತಿತ್ತು. ಪ್ರಸ್ತುತ ಈ ಸಂಸ್ಥೆಯು ಯುರೋಪ್, ಆಫ್ರಿಕಾ ಮತ್ತು ಏಷ್ಯಾದಾದ್ಯಂತ 117ಕ್ಕೂ ಹೆಚ್ಚು ಕಮಾಂಡ್ ಆಂಡ್ ಕಂಟ್ರೋಲ್ (ಸಿ2) ಸರ್ವರ್ಗಳನ್ನು ಹೊಂದಿದ್ದು, ನೆಟ್ವರ್ಕ್ ರೂಟರ್ಗಳ ಮೂಲಕ ಮಾಹಿತಿ ರವಾನಿಸುತ್ತಿದೆ. ಇದರರ್ಥ, ಸರ್ಕಾರಗಳು ಮಾತ್ರವಲ್ಲದೆ, ಹಣ ಪಾವತಿಸಲು ಸಿದ್ಧರಿರುವ ಯಾವುದೇ ಸೈಬರ್ ಅಪರಾಧಿಗಳು ಅಥವಾ ಸಂಘಟನೆಗಳು ಈ ಗೂಢಚರ್ಯು ಸಾಧನವನ್ನು ಖರೀದಿಸಿ, ತಮಗೆ ಬೇಕಾದವರ ಮೇಲೆ ಕಣ್ಗಾವಲು ಇಡಲು ಸಾಧ್ಯವಾಗಿದೆ.
ಬಳಕೆದಾರರು ವಹಿಸಬೇಕಾದ ಮುನ್ನೆಚ್ಚರಿಕೆ
ನಿಮ್ಮ ಫೋನ್ ಮತ್ತು ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ಳನ್ನು ಯಾವಾಗಲೂ ಅಪ್ಡೇಟ್ನಲ್ಲಿಡಿ. ಹ್ಯಾಕರ್ಗಳು ಹಳೆಯ ವರ್ಷನ್ಗಳಲ್ಲಿರುವ ದೋಷಗಳನ್ನು ಬಳಸಿ ಸಾಧನ ದೊಳಗೆ ನುಸುಳುತ್ತಾರೆ. ವಾಟ್ಸ್ಆಪ್, ಟೆಲಿಗ್ರಾಂ ಅಥವಾ ಎಸ್ಸೆಮ್ಮೆಸ್ ಮೂಲಕ ಬರುವ ಅಪರಿಚಿತ ಅಥವಾ ಆಶ್ಚರ್ಯಕರ ಸುದ್ದಿಗಳ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ. ಅನಧಿಕೃತ ಆಪ್ಗಳನ್ನು ಡೌನ್ಲೋಡ್ ಮಾಡಬೇಡಿ. ಮನೆ, ಕಚೇರಿಯ ವೈಫೈ ರೂಟರ್ಗಳ ಡಿಫಾಲ್ಟ್ ಪಾಸ್ವರ್ಡ್ ಬದಲಾಯಿಸಿ. ಅವುಗಳ ಫಮರ್್ವೇರ್ ಅಪ್ಡೇಟ್ ಆಗಿದೆಯೇ ಖಚಿತಪಡಿಸಿಕೊಳ್ಳಿ.