ಗೀತೆ ಸಾರ್ವಕಾಲಿಕವೆಂದು ಸ್ವಯಂ ಕೃಷ್ಣನೇ ನಾಲ್ಕನೇ ಅಧ್ಯಾಯದಲ್ಲಿ ಹೇಳುತ್ತಾನೆ. ಸೃಷ್ಟಿಯ ಪ್ರಾರಂಭದಲ್ಲೇ ಇದನ್ನು ಸೂರ್ಯ, ಮನು, ಇಕ್ಷ್ವಾಕು ಇವರಿಗೆಲ್ಲ ಹೇಳಿದ್ದೆ. ಅವರು ತಮ್ಮ ಪರಂಪರೆಯ ರಾಜರ್ಷಿಗಳಿಗೆ ಹೇಳಿದ್ದರು. ಕಾಲನ ಮಹಿಮೆಯಿಂದ ಅದು ಭ್ರಷ್ಟವಾಯಿತು ಎನ್ನುತ್ತಾನೆ. ಮಹತ್ತರ ಜವಾಬ್ದಾರಿಗಳನ್ನು ಹೊಂದಿದವರಿಗೆ, ಬಹಳಷ್ಟು ಸವಾಲನ್ನು ಪ್ರತಿನಿತ್ಯ ಎದುರಿಸಬೇಕಾದವನಿಗೆ ಸಂಪೂರ್ಣ, ದೋಷರಹಿತ, ಪ್ರಬುದ್ಧ ಚಿಂತನೆಯ ಮಾರ್ಗದರ್ಶನ ಅನಿವಾರ್ಯ. ಪೂರ್ಣಪ್ರಜ್ಞನಾದ ತಪಸ್ವಿಯೊಬ್ಬ ಗುರುತರ ಸಂದರ್ಭಗಳಲ್ಲಿ ರಾಜನಿಗೆ ಯೋಗ್ಯ ಮಾರ್ಗದರ್ಶನ ಕೊಡಲೇಬೇಕು. ಈ ಎಲ್ಲ ಮಾರ್ಗದರ್ಶಕ ಸೂತ್ರಗಳನ್ನು ಒಟ್ಟಿಗೆ ಸೇರಿಸಿಯೇ ರಾಜಧರ್ಮ ಎಂದು ಕರೆಯಲಾಗುತ್ತದೆ. ಸೂರ್ಯ, ಮೊಟ್ಟ ಮೊದಲ ಮನುಷ್ಯ ಮನು, ಶ್ರೀರಾಮನು ಹುಟ್ಟಿದ, ರಾಜರ್ಷಿಗಳ ಪರಂಪರೆಯನ್ನೇ ನಿರ್ವಿುಸಿದ ಮಹಾಕುಲದ ಮುಕುಟಮಣಿ ಎನಿಸಿದ ಇಕ್ಷ್ವಾಕು ಇವರೆಲ್ಲರಿಗೂ ಯೋಗ್ಯ ಉದಾಹರಣೆಗಳನ್ನು ನಿರ್ವಿುಸುವ ಜವಾಬ್ದಾರಿಯಿತ್ತು. ಜವಾಬ್ದಾರಿ ಸ್ಥಾನಗಳಲ್ಲಿ ಕುಳಿತಿರುವ ಪ್ರತಿಯೊಬ್ಬರಿಗೂ ಈ ಹೊಣೆಗಾರಿಕೆ ಇರುತ್ತದೆ.