Assam handover to Pak | ಅಸ್ಸಾಂನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲು ಪ್ಲಾನ್​ ಆಗಿದ್ದು ನಿಜ, ಆದರೆ.....ಶಾಕಿಂಗ್​ ವಿಷಯ ಬಹಿರಂಗಪಡಿಸಿದ ಕಾಂಗ್ರೆಸ್​ ಸಂಸದ

 ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on
Assam handover to Pak: ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ಸಾಂ ರಾಜ್ಯವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲು ಕಾಂಗ್ರೆಸ್ ಪಿತೂರಿ ನಡೆಸಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಕಾಂಗ್ರೆಸ್ ಭಾನುವಾರ ತಿರುಗೇಟು ನೀಡಿದೆ.
ಶನಿವಾರ ಗುವಾಹಟಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು, ಅಸ್ಸಾಂ ಹಿಂದಿನ ಪೂರ್ವ ಪಾಕಿಸ್ತಾನದ ಭಾಗವಾಗಿಸಲು ಮುಸ್ಲಿಂ ಲೀಗ್ ಮತ್ತು ಬ್ರಿಟಿಷರೊಂದಿಗೆ ಕೈಜೋಡಿಸಲು ಸಿದ್ಧತೆ ನಡೆಸುವ ಮೂಲಕ ಕಾಂಗ್ರೆಸ್ ಪಾಪ ಮಾಡಿದೆ ಎಂದು ಆರೋಪಿಸಿದರು. ಮುಸ್ಲಿಂ ಲೀಗ್ ಮತ್ತು ಬ್ರಿಟಿಷರು ಒಟ್ಟಾಗಿ ವಿಭಜನೆಗೆ ಸಿದ್ಧವಾಗುತ್ತಿದ್ದಾಗ, ಅಸ್ಸಾಂನ್ನು ಅವಿಭಜಿತ ಬಂಗಾಳ, ಪೂರ್ವ ಪಾಕಿಸ್ತಾನದ ಭಾಗವಾಗಿಸಲು ಒಂದು ಯೋಜನೆಯನ್ನು ರೂಪಿಸಲಾಯಿತು. ಕಾಂಗ್ರೆಸ್ ಈ ಪಿತೂರಿಯ ಭಾಗವಾಗಿದೆ ಎಂದು ಹೇಳಿದರು.

ಕಾಂಗ್ರೆಸ್​ ತಿರುಗೇಟು...

ಪ್ರಧಾನಿ ಮೋದಿಯವರ ಈ ಹೇಳಿಕೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ ಸಂಸದ ಮಾಣಿಕಂ ಟ್ಯಾಗೋರ್, ಇದು ಐತಿಹಾಸಿಕವಾಗಿ ಸುಳ್ಳು ಮತ್ತು ರಾಜಕೀಯ ಪ್ರೇರಿತ ಹೇಳಿಕೆ ಎಂದು ಕರೆದರು. ಅಸ್ಸಾಂನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವ ಯಾವುದೇ ಪ್ರಸ್ತಾಪವಿರಲಿಲ್ಲ ಎಂದಿರುವ ಟ್ಯಾಗೋರ್, ರಾಜ್ಯವು ಹಿಂದೂ ಬಹುಸಂಖ್ಯಾತ ಪ್ರಾಂತ್ಯವಾಗಿತ್ತು ಮತ್ತು ವಿಭಜನಾ ಯೋಜನೆಯಡಿಯಲ್ಲಿ ಪಾಕಿಸ್ತಾನಕ್ಕೆ ಎಂದಿಗೂ ಗೊತ್ತುಪಡಿಸಲಾಗಿಲ್ಲ. ಪ್ರಶ್ನೆಯಲ್ಲಿರುವ ಏಕೈಕ ಪ್ರದೇಶವೆಂದರೆ ಅಸ್ಸಾಂನ ಸಿಲ್ಹೆಟ್ ಜಿಲ್ಲೆ ಇದು ಮುಸ್ಲಿಂ ಬಹುಸಂಖ್ಯಾತ ಪ್ರದೇಶ ಎಂದರು.
ಇತಿಹಾಸ ಬೇರೆಯದೇ ಕಥೆಯನ್ನು ಹೇಳುತ್ತದೆ, 1947 ರಲ್ಲಿ ಬ್ರಿಟಿಷ್ ಅಧಿಕಾರದ ಅಡಿಯಲ್ಲಿ, ಸಿಲ್ಹೆಟ್‌ನಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಯಿತು, ಅದು ನಂತರ ಪೂರ್ವ ಬಂಗಾಳವನ್ನು, ನಂತರ ಪೂರ್ವ ಪಾಕಿಸ್ತಾನವನ್ನು ಸೇರಲು ಮತ ಚಲಾಯಿಸಿತು ಎಂದು ಉಲ್ಲೇಖಿಸಿದ ಟ್ಯಾಗೋರ್, ಇದು ಕಾಂಗ್ರೆಸ್ ನಿರ್ಧಾರವಲ್ಲ, ಗೋಪಿನಾಥ್ ಬೊರ್ಡೊಲೋಯ್ ಅವರ ಪ್ರಯತ್ನದಿಂದಾಗಿಯೇ ನಾವು ಕರೀಂಗಂಜ್ ಉಪವಿಭಾಗವನ್ನು ಭಾರತದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದರು.
ಕಾಂಗ್ರೆಸ್ ಒಂದು ಪಕ್ಷವಾಗಿ ಅಸ್ಸಾಂನ್ನು ಪಾಕಿಸ್ತಾನಕ್ಕೆ ನೀಡಲು ಸಂಚು ರೂಪಿಸಿತ್ತು ಎಂಬುದಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ, ಬ್ರಿಟಿಷರ ಆತುರ ಮತ್ತು ಮುಸ್ಲಿಂ ಲೀಗ್‌ನ ಬೇಡಿಕೆಯಿಂದ ವಿಭಜನೆ ಸಂಭವಿಸಿದೆ ಎಂದಿರುವ ಕಾಂಗ್ರೆಸ್ ಸಂಸದ, ಪ್ರಧಾನಿ ಮೋದಿ ದುರಂತ ಇತಿಹಾಸವನ್ನು ಚುನಾವಣಾ ಪ್ರಚಾರದ ಘೋಷಣೆಯನ್ನಾಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿದರು, ಮತ್ತು ಸುಳ್ಳುಗಳನ್ನು ಹರಡುವ ಮೂಲಕ ಬದುಕುವ ತರಬೇತಿ ಪಡೆದ ಆರ್‌ಎಸ್‌ಎಸ್ ವ್ಯಕ್ತಿ ಎಂದು ಕರೆದರು.
ಸ್ವಾತಂತ್ರ್ಯಾನಂತರದ ಅಸ್ಸಾಂನ ಮೊದಲ ಮುಖ್ಯಮಂತ್ರಿ ಗೋಪಿನಾಥ್ ಬೋರ್ಡೊಲೊಯ್ ಅವರ ಹೆಸರಿಡಲಾದ ಭಾರತದ ಮೊದಲ ಪ್ರಕೃತಿ ಆಧಾರಿತ ವಿಮಾನ ನಿಲ್ದಾಣವನ್ನು ಗುವಾಹಟಿಯಲ್ಲಿ ಉದ್ಘಾಟಿಸಿದ ಬಳಿಕ ಪ್ರಧಾನಿ ಮೋದಿ ಈ ಹೇಳಿಕೆಗಳನ್ನು ನೀಡಿದರು. ಅಸ್ಸಾಂ ರಾಜ್ಯವನ್ನು ರಕ್ಷಿಸಲು ಬೋರ್ಡೊಲೊಯ್ ಕಾಂಗ್ರೆಸ್ ಪಕ್ಷವನ್ನೇ ಧಿಕ್ಕರಿಸಿದ್ದಾರೆ, ಆ ಪ್ರದೇಶದ ಗುರುತನ್ನು ನಾಶಮಾಡುವ ಈ ಪಿತೂರಿಯನ್ನು ಅವರು ವಿರೋಧಿಸಿದರು ಮತ್ತು ದೇಶದಿಂದ ಬೇರ್ಪಡಿಸದಂತೆ ಉಳಿಸಿದರು ಎಂದು ಪ್ರಧಾನಿ ಮೋದಿ ಹೇಳಿದ್ದರು(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net