ಮಹಿಳಾ ಪ್ರಾತಿನಿಧ್ಯ ಒದಗಿಸುವಲ್ಲಿನ ಪ್ರತಿಯೊಂದು ವಿಳಂಬವೂ, ವಾಸ್ತವವಾಗಿ ನಮ್ಮ ಪ್ರಜಾಪ್ರಭುತ್ವದ ಗುಣಮಟ್ಟ ಮತ್ತು ಒಳಗೊಳ್ಳುವಿಕೆಯನ್ನು ಬಲಪಡಿಸುವ ಪ್ರಕ್ರಿಯೆಯನ್ನು ವಿಳಂಬಗೊಳಿಸಿದಂತೆ. ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯ ಅಗತ್ಯವನ್ನು ದಶಕಗಳಿಂದಲೂ ಗುರುತಿಸಲಾಗಿದೆ, ರ್ಚಚಿಸಲಾಗಿದೆ ಮತ್ತು ಪುನರುಚ್ಚರಿಸಲಾಗಿದೆ. ಈಗಲೂ ಕ್ರಮ ಕೈಗೊಳ್ಳುವುದನ್ನು ಮುಂದೂಡುವುದೆಂದರೆ, ನಾವು ಈಗಾಗಲೇ ಕಂಡುಕೊಂಡಿರುವ ಮತ್ತು ಸರಿಪಡಿಸುವ ಶಕ್ತಿಯನ್ನು ಹೊಂದಿರುವ ಅಸಮತೋಲನವನ್ನು ನಾವೇ ಮುಂದುವರಿಸಿದಂತಾಗುತ್ತದೆ. ಭಾರತ ಆತ್ಮವಿಶ್ವಾಸ ಮತ್ತು ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಸಾಂಸ್ಥಿಕ ವ್ಯವಸ್ಥೆಯು ಸಮಸ್ತ ನಾಗರಿಕರ, ವಿಶೇಷವಾಗಿ ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವುದು ಅತ್ಯಗತ್ಯ. ಸಕಾಲಿಕ ಕ್ರಮವು ದಶಕಗಳ ಹಳೆಯ ಬದ್ಧತೆಯನ್ನು ಗೌರವಿಸುವುದಷ್ಟೇ ಅಲ್ಲದೆ, ಪ್ರಗತಿಯ ವೇಗ ಕುಂಠಿತವಾಗದಂತೆ ನೋಡಿಕೊಳ್ಳುತ್ತದೆ. ನಮ್ಮ ಪ್ರಜಾಪ್ರಭುತ್ವವನ್ನು ಹೆಚ್ಚು ಪ್ರಾತಿನಿಧಿಕ, ಸ್ಪಂದನಾಶೀಲ ಮತ್ತು ಭವಿಷ್ಯದ ಸವಾಲುಗಳಿಗೆ ಸನ್ನದ್ಧವಾಗಿಸಲು ಇದೊಂದು ಐತಿಹಾಸಿಕ ಅವಕಾಶ.