ಅತ್ಯಾಚಾರ ಹಾಗೂ ಹತ್ಯೆಯ ಅಪರಾಧಕ್ಕಾಗಿ 2025ರ ಜನವರಿಯಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಸಂಜಯ್ ರಾಯ್, ದುಷ್ಕೃತ್ಯ ನಡೆಸಿದ್ದು ‘ಮೇಲಿನವರು’, ತಾನು ನಿರಪರಾಧಿ, ತನ್ನನ್ನು ಬಲಿಪಶುವಾಗಿಸಲಾಗಿದೆ ಎಂದು ಮತ್ತೆಮತ್ತೆ ಹೇಳುತ್ತಿದ್ದಾರೆ. ದುಷ್ಕೃತ್ಯವನ್ನು ವಿರೋಧಿಸುವ ನೆಪದಲ್ಲಿ ಜಮಾಯಿಸಿದ ಜನ ಅತ್ಯಾಚಾರ ಮತ್ತು ಕೊಲೆಯ ಸಾಕ್ಷ್ಯಗಳನ್ನು ಹಾಳುಗೆಡವಿದ್ದು, ಕಾಲೇಜಿನ ಆಡಳಿತಮಂಡಳಿ ಅದಕ್ಕೆ ಅವಕಾಶ ನೀಡಿದ್ದಲ್ಲದೇ ದುಷ್ಕೃತ್ಯ ನಡೆದ ಸೆಮಿನಾರ್ ಹಾಲ್‌ನಲ್ಲಿ ಆತುರಾತುರವಾಗಿ ದುರಸ್ತಿ ಕಾರ್ಯ ಕೈಗೊಂಡದ್ದು ಇಡೀ ಪ್ರಕರಣ ಏನೋ ಮುಚ್ಚಿಹಾಕುವ ವ್ಯವಸ್ಥಿತ ಪ್ರಯತ್ನದಂತೆ ಕಾಣುತ್ತದೆ. ಹಣದ ಜತೆ ಇನ್ನಿತರ ಅವ್ಯವಹಾರಗಳು ಆ ಕಾಲೇಜಿನಲ್ಲಿ ನಡೆಯುತ್ತಿದ್ದವು, ಅವುಗಳ ಸುಳಿವು ಹೊರಬೀಳದಂತೆ ತಡೆಯುವ ಒಂದು ಪ್ರಯತ್ನವೇ ಮಹಿಳಾ ಟ್ರೈನಿ ಡಾಕ್ಟರ್ ಮೇಲಿನ ದುಷ್ಕೃತ್ಯಕ್ಕೆ ಕಾರಣ ಎಂಬ ಮಾತುಗಳು ಅಂದಿನಿಂದಲೂ ಕೇಳಿಬರುತ್ತಿವೆ. ಬಲಿಯಾದ ಮಹಿಳೆಯ ತಾಯಿಯನ್ನು ಮೌನವಾಗಿಸಲು 10 ಲಕ್ಷ ರೂ.ಗಳ ಆಮಿಷ ಒಡ್ಡಲಾಗಿತ್ತು ಎಂಬ ವಿಷಯ ವ್ಯವಸ್ಥೆ ಕುಸಿದಿದ್ದ ಕೆಳಮಟ್ಟಕ್ಕೆ ಸಾಕ್ಷಿ. ‘ನನಗೆ ಆ 10 ಲಕ್ಷ ಬೇಡ, ಬದಲಿಗೆ ನಾನೇ 20 ಲಕ್ಷ ಕೊಡುತ್ತೇನೆ, ನನಗೆ ನನ್ನ ಮಗಳನ್ನು ಕೊಡಿ’ ಎಂದು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಹೇಳಿದ ರತ್ನಾ ದೇವನಾಥ್ ಈಗ ಆ ಕ್ಷೇತ್ರದ ಬಿಜೆಪಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಮೆಡಿಕಲ್ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಡಾ. ಸಂದೀಪ್ ಘೋಷ್ ಅವರ ಮೇಲಿನ ಹಣದ ದುರ್ವ್ಯವಹಾರಗಳ ಕುರಿತಾದ ಆಪಾದನೆಗಳನ್ನು ತನಿಖೆ ಮಾಡಲು ಮಮತಾ ಬ್ಯಾನರ್ಜಿ ಮೀನಮೇಷ ಎಣಿಸುತ್ತಿದ್ದರು. ಆ ತನಿಖೆಯನ್ನು ನಡೆಸಲು ಸುವೇಂದು ಅಧಿಕಾರಿ ಸರ್ಕಾರ ಇದೇ ಮೇ 18ರಂದು ಎನ್‌ಫೋರ್ಸ್‌ಮೆಂಟ್ ಡೈರೆಕ್ಟೊರೇಟ್ (ಇಡಿ) ಗೆ ಅನುಮತಿ ನೀಡಿದೆ. ಇದೆಲ್ಲವೂ ಸಮರ್ಪಕವಾಗಿ ನಡೆದು ಅಪರಾಧಿಗಳಿಗೆ ಶಿಕ್ಷೆಯಾದರೆ ಬಿಜೆಪಿ ಸರ್ಕಾರದ ಮೇಲೆ ಜನರ ವಿಶ್ವಾಸ ಉಳಿಯುತ್ತದೆ. ಜನವಿರೋಧಿಗಳು, ಅಪರಾಧಿಗಳು, ಅವ್ಯವಹಾರಿಗಳು ಮತ್ತೆ ಅಧಿಕಾರಕ್ಕೆ ಬಾರದಿರುವಂತಾಗುತ್ತದೆ.