ರಾತ್ರಿ 1 ಗಂಟೆಗಾದರೂ ಹೆಣ್ಣುಮಕ್ಕಳು ರಸ್ತೆಗೆ ಬರಲಿ, ಗೂಂಡಾಗಳು ಕಣ್ಣೆತ್ತಿ ನೋಡಲ್ಲ! ಬಂಗಾಳದಲ್ಲಿ ಅಮಿತ್ ಷಾ ನೀಡಿದ ಆ 'ಡೆಡ್ಲಿ' ಪ್ರಾಮಿಸ್ ಏನು? Amit Shah

ರಾತ್ರಿ 1 ಗಂಟೆಗಾದರೂ ಹೆಣ್ಣುಮಕ್ಕಳು ರಸ್ತೆಗೆ ಬರಲಿ, ಗೂಂಡಾಗಳು ಕಣ್ಣೆತ್ತಿ ನೋಡಲ್ಲ! ಬಂಗಾಳದಲ್ಲಿ ಅಮಿತ್ ಷಾ ನೀಡಿದ ಆ 'ಡೆಡ್ಲಿ' ಪ್ರಾಮಿಸ್ ಏನು?
ರಾತ್ರಿ 1 ಗಂಟೆಗಾದರೂ ಹೆಣ್ಣುಮಕ್ಕಳು ರಸ್ತೆಗೆ ಬರಲಿ, ಗೂಂಡಾಗಳು ಕಣ್ಣೆತ್ತಿ ನೋಡಲ್ಲ! ಬಂಗಾಳದಲ್ಲಿ ಅಮಿತ್ ಷಾ ನೀಡಿದ ಆ 'ಡೆಡ್ಲಿ' ಪ್ರಾಮಿಸ್ ಏನು?
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ಜಮಾಲ್‌ಪುರದಲ್ಲಿ ನಡೆದ ಬೃಹತ್ ಚುನಾವಣಾ ಱಲಿಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah), ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಹಿಳಾ ಸುರಕ್ಷತೆಯ ವಿಷಯವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಆರೋಪಿಸಿದ ಷಾ, ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದ ಚಿತ್ರಣವೇ ಬದಲಾಗಲಿದೆ ಎಂದು ಭರವಸೆ ನೀಡಿದ್ದಾರೆ.

ಮಹಿಳಾ ಸುರಕ್ಷತೆ: ಮಮತಾ ಸರ್ಕಾರಕ್ಕೆ ಮುಖಭಂಗ

ಕಳೆದ 15 ವರ್ಷಗಳ ಮಮತಾ ಆಡಳಿತದಲ್ಲಿ ಅತಿ ಹೆಚ್ಚು ಸಂಕಷ್ಟ ಅನುಭವಿಸಿರುವುದು ಮಹಿಳೆಯರೇ ಎಂದು ಷಾ ಗುಡುಗಿದ್ದಾರೆ. ಆರ್‌ಜಿ ಕರ್ ಆಸ್ಪತ್ರೆ ಪ್ರಕರಣ, ಸಂದೇಶಖಾಲಿ ಘಟನೆ, ಕಲ್ಕತ್ತಾ ಲಾ ಕಾಲೇಜು ಮತ್ತು ದುರ್ಗಾಪುರ ಕಾಲೇಜುಗಳಲ್ಲಿ ನಡೆದ ಘಟನೆಗಳು ಸಾಕ್ಷಿಯಾಗಿವೆ. ಅಲ್ಲದೆ, ಮಹಿಳೆಯರ ಮೇಲೆ ಎಲ್ಲೆಡೆ ದೌರ್ಜನ್ಯ ನಡೆಯುತ್ತಿದೆ. ಆದರೆ ದೀದಿ ಮಾತ್ರ ಮಹಿಳೆಯರು ಸಂಜೆ 7 ಗಂಟೆಯ ನಂತರ ಮನೆಯಿಂದ ಹೊರಗೆ ಬರಬೇಡಿ ಎನ್ನುತ್ತಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.
ನಾನು ನಿಮಗೆ ಮಾತು ಕೊಡುತ್ತಿದ್ದೇನೆ, ಮೇ 5ರಂದು ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ, ಒಬ್ಬ ಚಿಕ್ಕ ಹುಡುಗಿಯೂ ಸಹ ಮಧ್ಯರಾತ್ರಿ 1 ಗಂಟೆಗೆ ರಸ್ತೆಯಲ್ಲಿ ನಿರ್ಭಯವಾಗಿ ಓಡಾಡಬಹುದು. ಯಾವನೇ ಒಬ್ಬ ಗೂಂಡಾ ಅವಳತ್ತ ಕಣ್ಣೆತ್ತಿ ನೋಡುವ ಧೈರ್ಯವನ್ನೂ ಮಾಡುವುದಿಲ್ಲ. ಅಂತಹ ಶಕ್ತಿಶಾಲಿ ಕಾನೂನು ಸುವ್ಯವಸ್ಥೆಯನ್ನು ನಾವು ತರುತ್ತೇವೆ ಎಂದು ಅಮಿತ್ ಷಾ ಘೋಷಿಸಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯಗಳ ಉದಾಹರಣೆ
ಯಾವುದೇ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಮಹಿಳೆಯರಿಗೆ ಮನೆಯಿಂದ ಹೊರಬರಬೇಡಿ ಎಂದು ಹೇಳಿಲ್ಲ. ಒಬ್ಬ ಮಹಿಳಾ ಮುಖ್ಯಮಂತ್ರಿಯಾಗಿ ಬ್ಯಾನರ್ಜಿ ಮಹಿಳೆಯರ ರಕ್ಷಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ನಮ್ಮ ಸರ್ಕಾರ ಬಂದರೆ ಅಕ್ಕ-ತಂಗಿಯರತ್ತ ಕೆಟ್ಟ ದೃಷ್ಟಿ ಬೀರುವವರನ್ನು ಜೈಲಿಗಟ್ಟುತ್ತೇವೆ ಎಂದು ಕೇಂದ್ರ ಗೃಹ ಸಚಿವರು ಎಚ್ಚರಿಸಿದ್ದಾರೆ.

ಮೊದಲ ಹಂತದಲ್ಲೇ 110 ಸ್ಥಾನಗಳ ಗೆಲುವಿನ ವಿಶ್ವಾಸ

ಮೊದಲ ಹಂತದ ಚುನಾವಣಾ ಮತದಾನದ ಪ್ರಮಾಣವನ್ನು ವಿಶ್ಲೇಷಿಸಿದ ಅಮಿತ್ ಷಾ, ಬಿಜೆಪಿಯ ಜಯಭೇರಿ ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.
ದಾಖಲೆ ಮತದಾನ: 16 ಜಿಲ್ಲೆಗಳ 52 ಕ್ಷೇತ್ರಗಳಲ್ಲಿ ಶೇ. 92.98 ರಷ್ಟು ಮತದಾನವಾಗಿರುವುದು ಮಮತಾ ಬ್ಯಾನರ್ಜಿ ಅವರ ನಿರ್ಗಮನದ ಮುನ್ಸೂಚನೆ ಎಂದು ಷಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಖ್ಯೆಗಳ ಲೆಕ್ಕಾಚಾರ: ನನ್ನ ಸಮಿತಿ ಸದಸ್ಯರೊಂದಿಗೆ ಸಮಾಲೋಚಿಸಿದ ನಂತರ, ಮೊದಲ 152 ಸ್ಥಾನಗಳಲ್ಲಿ ಬಿಜೆಪಿ ಕನಿಷ್ಠ 110 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ನನಗಿದೆ. ಅಂದರೆ ಎರಡನೇ ಹಂತದ ವೇಳೆಗೆ ನಾವು ಸರ್ಕಾರ ರಚನೆಗೆ ಅಗತ್ಯವಾದ ಹಾದಿಯನ್ನು ಸುಗಮಗೊಳಿಸಿಕೊಂಡಿರುತ್ತೇವೆ ಎಂದು ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.

ಮತುವಾ ಸಮುದಾಯಕ್ಕೆ ಸಿಎಎ ಭರವಸೆ

ಬಾಂಗ್ಲಾದೇಶದಿಂದ ವಲಸೆ ಬಂದಿರುವ ಮತ್ತು ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ಮತುವಾ ಸಮುದಾಯದ ಹಿತರಕ್ಷಣೆಯ ಬಗ್ಗೆಯೂ ಷಾ ಮಾತನಾಡಿದ್ದಾರೆ. ಅಲ್ಲದೆ, ದೀದಿ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಜಾರಿಗೆ ಬಿಡುತ್ತಿಲ್ಲ. ಆದರೆ ಮೇ 5 ರ ನಂತರ ಕಮಲದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಮತುವಾ ಸಮುದಾಯದ ಪ್ರತಿಯೊಬ್ಬರಿಗೂ ಪೌರತ್ವ ನೀಡುವುದನ್ನು ನಾವು ಖಚಿತಪಡಿಸುತ್ತೇವೆ. ಇನ್ನು ಮುಂದೆ ನೀವು ಭಯದಲ್ಲಿ ಬದುಕುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ಅಮಿತ್ ಷಾ ಅವರ ಈ ಭಾಷಣವು ಮಹಿಳಾ ಮತದಾರರನ್ನು ಮತ್ತು ನಿರಾಶ್ರಿತ ಸಮುದಾಯಗಳನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಭಯ ಮುಕ್ತ ಬಂಗಾಳ ಮತ್ತು ಸಿಎಎ ಜಾರಿ ಬಿಜೆಪಿಯ ಪ್ರಮುಖ ಅಸ್ತ್ರಗಳಾಗಿ ಮಾರ್ಪಟ್ಟಿವೆ. ಮೇ 5 ರ ಫಲಿತಾಂಶವು ಬಂಗಾಳದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿದೆಯೇ ಎಂಬುದು ಇಡೀ ದೇಶದ ಕುತೂಹಲವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net