ಪ್ರಸ್ತುತ, ಪರಮಾಣು ಯುಗದಲ್ಲಿದ್ದೇವೆ. ಒಂದು ಸಣ್ಣ ತಪ್ಪು ಇಡೀ ಜಗತ್ತನ್ನೇ ನಾಶ ಮಾಡುವ ಸಾಧ್ಯತೆ ಹೊಂದಿದೆ. ಯುದ್ಧವು ಯಾರು ಸರಿ ಎಂಬುದನ್ನು ನಿರ್ಧರಿಸುವುದಿಲ್ಲ, ಬದಲಿಗೆ ಯಾರು ‘ಉಳಿದಿದ್ದಾರೆ’ ಎಂಬುದನ್ನು ಮಾತ್ರ ನಿರ್ಧರಿಸುತ್ತದೆ. ಶಾಂತಿ ಎಂದರೆ ಕೇವಲ ಯುದ್ಧದ ಅನುಪಸ್ಥಿತಿಯಲ್ಲ; ಅದು ನ್ಯಾಯ, ಸಮಾನತೆ ಮತ್ತು ಅಭಿವೃದ್ಧಿಯ ಉಪಸ್ಥಿತಿ. ಸ್ಥಿರತೆ ಇದ್ದಾಗ ಮಾತ್ರ ಮುಂದಿನ ಪೀಳಿಗೆಗೆ ನಾವು ಸುಭದ್ರವಾದ ಭೂಮಿಯನ್ನು ಹಸ್ತಾಂತರಿಸಲು ಸಾಧ್ಯ. ಈ ನಿಟ್ಟಿನಲ್ಲಿ, ಇರಾನ್-ಅಮೆರಿಕ ನಡುವೆ ಏರ್ಪಟ್ಟಿರುವ ಕದನ ವಿರಾಮ ಮಹತ್ವದ್ದು. ಆದರೆ, ಎರಡು ವಾರಗಳಲ್ಲಿ ಈ ರಾಷ್ಟ್ರಗಳು ಮಾತುಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆ ಹೊರತು ಮತ್ತೆ ಸಂಘರ್ಷದ ದಾರಿ ತುಳಿಯಬಾರದು. ಸಂಘರ್ಷವು ಭರಿಸಲು ಆಗದಷ್ಟು ನಷ್ಟವನ್ನೇ ಸೃಷ್ಟಿಸುವ ಜತೆಗೆ ದೇಶಗಳ ನಡುವಿನ ವೈಷಮ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕಳೆದ 40 ದಿನಗಳ ಯುದ್ಧವು ಇಂಥ ಹಲವು ಘಟನೆಗಳಿಗೆ ನಿದರ್ಶನವಾಗಿದ್ದು, ಜಾಗತಿಕ ನಾಯಕರೆನಿಸಿಕೊಂಡವರು ಇನ್ನಾದರೂ ವಿವೇಚನೆಯಿಂದ ನಡೆದುಕೊಳ್ಳಬೇಕು. ಇತರ ದೇಶಗಳು ಕೂಡ ಇದರಿಂದ ಪಾಠ ಕಲಿತು, ಭವಿಷ್ಯದಲ್ಲಿ ಪ್ರಮಾದ ಎಸಗದಂತೆ ಜಾಗ್ರತೆ ವಹಿಸಬೇಕು.