ಮಿಯಾ ಮುಸ್ಲಿಂ’ ವಿವಾದಕ್ಕೆ ಕಾನೂನು ಟ್ವಿಸ್ಟ್: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾಗೆ ದೆಹಲಿ ಕೋರ್ಟ್ ನೋಟಿಸ್! Himanta Biswa Sarma

ಮಿಯಾ ಮುಸ್ಲಿಂ’ ವಿವಾದಕ್ಕೆ ಕಾನೂನು ಟ್ವಿಸ್ಟ್: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾಗೆ ದೆಹಲಿ ಕೋರ್ಟ್ ನೋಟಿಸ್!
ಮಿಯಾ ಮುಸ್ಲಿಂ’ ವಿವಾದಕ್ಕೆ ಕಾನೂನು ಟ್ವಿಸ್ಟ್: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾಗೆ ದೆಹಲಿ ಕೋರ್ಟ್ ನೋಟಿಸ್!
Published on
ನವದೆಹಲಿ: ದೇಶದ ಅತ್ಯಂತ ಪ್ರಭಾವಿ ಹಾಗೂ ಪ್ರಖರ ಹಿಂದುತ್ವವಾದಿ ನಾಯಕ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ(Himanta Biswa Sarma) ಅವರಿಗೆ ದೇಶದ ರಾಜಧಾನಿ ದೆಹಲಿಯ ನ್ಯಾಯಾಲಯವೊಂದು ಭಾರಿ ಕಾನೂನು ಸಂಕಷ್ಟ ತಂದೊಡ್ಡಿದೆ. ಅಸ್ಸಾಂನಲ್ಲಿ ನೆಲೆಸಿರುವ ಮಿಯಾ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಾತ್ಮಕ ಹಾಗೂ ಕೋಮು ಭಾವನೆ ಕೆರಳಿಸುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾದ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್ (FIR) ದಾಖಲಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪುರಸ್ಕರಿಸಿರುವ ದೆಹಲಿ ನ್ಯಾಯಾಲಯವು ಮುಖ್ಯಮಂತ್ರಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ.
ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸೋನು ಅಗ್ನಿಹೋತ್ರಿ ಅವರು ಈ ಹೈ-ವೋಲ್ಟೇಜ್ ಆದೇಶವನ್ನು ಹೊರಡಿಸಿದ್ದು, ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಅಲ್ಲದೆ, ಪ್ರಮುಖ ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದರ್ ಅವರು ಸಲ್ಲಿಸಿದ್ದ ಕ್ರಿಮಿನಲ್ ರಿವಿಷನ್ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಈ ಕಠಿಣ ನಿರ್ಧಾರ ಕೈಗೊಂಡಿದೆ.

ಮೆಜಿಸ್ಟ್ರೇಟ್ ಕೋರ್ಟ್ ತೀರ್ಪಿಗೆ ಸವಾಲು; ದೆಹಲಿಯಲ್ಲಿ ದೂರು ಹೂಡಿದ್ದೇಕೆ?

ಈ ಹಿಂದೆ ಪ್ರಚೋದನಾತ್ಮಕ ಭಾಷಣದ ಆರೋಪದ ಮೇಲೆ ಸಿಎಂ ಹಿಮಂತ ಬಿಸ್ವ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಹರ್ಷ್ ಮಂದರ್ ಕೆಳಹಂತದ ಮೆಜಿಸ್ಟ್ರೇಟ್ ನ್ಯಾಯಾಲಯದ ಕದ ತಟ್ಟಿದ್ದರು. ಆದರೆ, ಕಳೆದ ಏಪ್ರಿಲ್ 20 ರಂದು ಮೆಜಿಸ್ಟ್ರೇಟ್ ನ್ಯಾಯಾಲಯವು ಮುಖ್ಯಮಂತ್ರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ತೀವ್ರವಾಗಿ ಆಕ್ಷೇಪಿಸಿ ಹರ್ಷ್ ಮಂದರ್ ದೆಹಲಿಯ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ಕೇಂದ್ರ ಗೃಹ ಸಚಿವಾಲಯದ (MHA) ಅತ್ಯಂತ ಕಟ್ಟುನಿಟ್ಟಿನ ನಿಯಮಾವಳಿಯಾದ 'ಜೀರೋ ಎಫ್‌ಐಆರ್' ಮತ್ತು 'ಇ-ಎಫ್‌ಐಆರ್​ನ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಅನ್ನು ಉಲ್ಲೇಖಿಸಿ ಸುದೀರ್ಘ ವಾದ ಮಂಡಿಸಿದರು. ದೇಶದ ಯಾವುದೇ ಭಾಗದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಭಾಷಣಗಳು ನಡೆದರೂ, ತಕ್ಷಣವೇ ಜೀರೋ ಎಫ್‌ಐಆರ್ ದಾಖಲಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ವಾದಿಸಿದರು. ಈ ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶ ಸೋನು ಅಗ್ನಿಹೋತ್ರಿ ಅವರು, ಸಿಎಂ ಹಿಮಂತ ಬಿಸ್ವ ಶರ್ಮಾ ಹಾಗೂ ಸಂಬಂಧಿತ ಪ್ರತಿವಾದಿಗಳಿಗೆ ಜುಲೈ 15 ರೊಳಗೆ ಸೂಕ್ತ ಲಿಖಿತ ಉತ್ತರ ನೀಡುವಂತೆ ಗಡುವು ವಿಧಿಸಿ ನೋಟಿಸ್ ಹೊರಡಿಸಿದ್ದಾರೆ.

ಏನಿದು ‘ಮಿಯಾ ಮುಸ್ಲಿಂ’ ವಿವಾದ?; ಅಸ್ಸಾಂ ರಾಜಕಾರಣದ ಬಿರುಗಾಳಿ!

ಅಸ್ಸಾಂ ರಾಜ್ಯದ ಜನಸಂಖ್ಯಾ ಸ್ವರೂಪ ಮತ್ತು ರಾಜಕಾರಣದಲ್ಲಿ 'ಮಿಯಾ' ಎಂಬ ಪದ ಅತ್ಯಂತ ಸೂಕ್ಷ್ಮ ಹಾಗೂ ಸ್ಫೋಟಕ ವಿಷಯವಾಗಿದೆ. ಅಸ್ಸಾಂನಲ್ಲಿ ನೆಲೆಸಿರುವ ಬಂಗಾಳಿ ಮೂಲದ ಮುಸ್ಲಿಂ ವಲಸಿಗರನ್ನು ಕರೆಯಲು ಈ ಪದವನ್ನು ಬಳಸಲಾಗುತ್ತದೆ. ಅಸ್ಸಾಂನ ಸ್ಥಳೀಯ ನಾಗರಿಕರ ಅಸ್ಮಿತೆ, ಅಕ್ರಮ ಬಾಂಗ್ಲಾದೇಶಿ ವಲಸೆ ಮತ್ತು ಪೌರತ್ವದ ಭೀಕರ ಚರ್ಚೆಗಳ ಮಧ್ಯೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಈ ಸಮುದಾಯವನ್ನು ಗುರಿಯಾಗಿಸಿಕೊಂಡು ಹಲವು ಬಾರಿ ಕಟು ವಾಗ್ದಾಳಿ ನಡೆಸಿದ್ದರು.
ಮಿಯಾ ಮುಸ್ಲಿಮರು ಅಸ್ಸಾಂನ ಸಂಸ್ಕೃತಿಯನ್ನು ನುಂಗಿ ಹಾಕುತ್ತಿದ್ದಾರೆ ಮತ್ತು ಇವರ ಜನಸಂಖ್ಯಾ ಸ್ಫೋಟದಿಂದಾಗಿ ಸ್ಥಳೀಯ ಅಸ್ಸಾಮಿಗಳು ತಮ್ಮದೇ ನೆಲದಲ್ಲಿ ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂದು ಶರ್ಮಾ ಈ ಹಿಂದೆ ಬಹಿರಂಗ ಸಭೆಗಳಲ್ಲಿ ಆಕ್ರೋಶ ಹೊರಹಾಕಿದ್ದರು. ಈ ಹೇಳಿಕೆಗಳು ಉಗ್ರ ಪ್ರಚೋದನೆಯಿಂದ ಕೂಡಿದ್ದು, ಕ್ರಿಮಿನಲ್ ಕಾನೂನಿನ ಅಡಿ ಕ್ರಮಕ್ಕೆ ಅರ್ಹವಾಗಿವೆ ಎಂದು ಅರ್ಜಿದಾರರು ಕೋರ್ಟ್‌ನಲ್ಲಿ ವಾದಿಸಿದ್ದಾರೆ.

ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ಹೆಚ್ಚಿದ ಕಾನೂನು ಸಮರ!

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗಷ್ಟೇ ಭರ್ಜರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದು ಅಕ್ರಮ ವಲಸಿಗರ ವಿರುದ್ಧ ಬಿಗಿ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ, ಈಶಾನ್ಯ ರಾಜ್ಯವಾದ ಅಸ್ಸಾಂನ ಸಿಎಂಗೆ ದೆಹಲಿ ಕೋರ್ಟ್ ನೋಟಿಸ್ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಭ್ರಷ್ಟಾಚಾರ ಮತ್ತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ವಲಸಿಗರನ್ನು ಸಾಕುತ್ತಿರುವ ಶಕ್ತಿಗಳೇ ನಮ್ಮ ಮುಖ್ಯಮಂತ್ರಿಗಳ ರಾಷ್ಟ್ರೀಯ ವರ್ಚಸ್ಸನ್ನು ಕುಗ್ಗಿಸಲು ಸುಳ್ಳು ದೂರುಗಳ ಮೂಲಕ ಈ ಪಿತೂರಿ ನಡೆಸಿವೆ. ನಮ್ಮ ಕಾನೂನು ತಂಡ ನ್ಯಾಯಾಲಯದಲ್ಲಿ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಅಸ್ಸಾಂ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾ ಗಡಿ ಬೇಲಿ ಬಿಗಿಗೊಳಿಸುವಿಕೆ ಹಾಗೂ ಅಕ್ರಮ ವಲಸಿಗರ ಪತ್ತೆ ಕಾರ್ಯ ದೇಶಾದ್ಯಂತ ಬಿರುಸಿನಿಂದ ಸಾಗುತ್ತಿರುವ ಈ ಸಂದರ್ಭದಲ್ಲಿ, ಅಸ್ಸಾಂ ಮುಖ್ಯಮಂತ್ರಿಗಳ ವಿರುದ್ಧದ ಈ ದೆಹಲಿ ಕೋರ್ಟ್ ಸಮನ್ಸ್ ರಾಜಕೀಯವಾಗಿ ಭಾರಿ ಸಂಚಲನ ಮೂಡಿಸಿದ್ದು, ಜುಲೈ 15 ರಂದು ನಡೆಯಲಿರುವ ಮುಂದಿನ ವಿಚಾರಣೆಯ ಮೇಲೆ ಇಡೀ ದೇಶದ ಕಣ್ಣು ನೆಟ್ಟಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net