ಸಂಸತ್ ಚಲೋ ಹಿಂಸಾಚಾರ: ಸ್ವತಂತ್ರ ತನಿಖೆಗೆ ಸುಪ್ರೀಂ ಅಸ್ತು, ತಪ್ಪಿತಸ್ಥರಿಗೆ ರಕ್ಷಣೆ ಇಲ್ಲ ಎಂದ ಸಿಜೆಐ | Supreme Court

Supreme Court | ಸಂಸತ್ ಚಲೋ ಹಿಂಸಾಚಾರ; ತಪ್ಪಿತಸ್ಥರಿಗೆ ರಕ್ಷಣೆ ಇಲ್ಲ ಎಂದ ಸಿಜೆಐ
Supreme Court | ಸಂಸತ್ ಚಲೋ ಹಿಂಸಾಚಾರ; ತಪ್ಪಿತಸ್ಥರಿಗೆ ರಕ್ಷಣೆ ಇಲ್ಲ ಎಂದ ಸಿಜೆಐ
Published on
ನವದೆಹಲಿ: ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಪೆಲೆಟ್ ಗನ್, ಲಾಠಿ ಪ್ರಹಾರದಂತಹ ಭೀಕರ ದೌರ್ಜನ್ಯಗಳ ವಿರುದ್ಧ ಸುಪ್ರೀಂ ಕೋರ್ಟ್ (Supreme Court) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್ ನೇತೃತ್ವದ ಪೀಠ, ನಿರಪರಾಧಿಗಳ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಖಚಿತ. ತಪ್ಪಿತಸ್ಥರಿಗೆ ಶಿಕ್ಷೆಯಾಗದ ಹೊರತು ತನಿಖೆಗೆ ಯಾವುದೇ ಅರ್ಥವಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು, ಈ ವಿಷಯದ ಕುರಿತು ಕೂಲಂಕಷ ತನಿಖೆ ನಡೆಯಬೇಕು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ತನಿಖೆಯು ಸ್ವತಂತ್ರ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿರಬೇಕು ಮತ್ತು ಅದರ ತನಿಖಾ ತಂಡದ ರಚನೆಯನ್ನು ನಾವು ನಂತರ ಘೋಷಿಸುತ್ತೇವೆ ಎಂದು ಹೇಳಿದರು.
ಜುಲೈ 20 ರ ಸಂಸತ್ ಚಲೋ ವೇಳೆ ನಡೆದ ಪೊಲೀಸ್ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ಸುದೀರ್ಘ ವಿಚಾರಣೆಯನ್ನು ಸಿಜೆಐ ಸೂರ್ಯ ಕಾಂತ್, ಜಸ್ಟಿಸ್ ಜೋಯ್‌ಮಾಲ್ಯ ಬಾಗ್ಚಿ ಹಾಗೂ ಜಸ್ಟಿಸ್ ವಿ. ಮೋಹನ ಅವರಿದ್ದ ಸುಪ್ರೀಂ ಪೀಠ ಕೈಗೆತ್ತಿಕೊಂಡಿತು. ಇನ್ನು ಅರ್ಜಿದಾರರ ಪರ ವಕೀಲರು, ಅತಿಯಾದ ಬಲಪ್ರಯೋಗ ಮಾಡಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ದೇಶವ್ಯಾಪಿ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ದಾಳಿ!..

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಪೊಲೀಸರ ವಿರುದ್ಧ ಅತ್ಯಂತ ಗಂಭೀರ ಆರೋಪಗಳನ್ನು ಮಾಡಲಾಗಿದೆ ಎಂದರು. ಪ್ರಕರಣದ ತೀವ್ರತೆಯನ್ನು ಗಮನಿಸಿದರೆ, ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಸಿದ್ದರಿಂದ 19 ವರ್ಷದ ಯುವಕನೊಬ್ಬ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ. ಎಲೆಕ್ಟ್ರಿಕ್ ಲಾಠಿ ಪ್ರಹಾರದಿಂದ ತೀವ್ರವಾಗಿ ಗಾಯಗೊಂಡ ಯುವತಿಯೊಬ್ಬರು ಐಸಿಯು ಸೇರಿದ್ದಾರೆ. ಇಷ್ಟೇ ಅಲ್ಲದೆ, ಮೊಳೆ ಜಡಿದ ಲಾಠಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ದೂರುಗಳೂ ಇವೆ ಎಂದು ಸಿಜೆಐ ಕಳವಳ ವ್ಯಕ್ತಪಡಿಸಿದರು.
ಪತ್ರಕರ್ತನೊಬ್ಬನ ಮೇಲೆಯೂ ಕ್ರೂರವಾಗಿ ಹಲ್ಲೆ ನಡೆಸಲಾಗಿದ್ದು, ಸಿವಿಲ್ ಸಮವಸ್ತ್ರದಲ್ಲಿದ್ದ ಪೊಲೀಸರೇ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಮತ್ತೊಂದೆಡೆ, ಯಾವುದೇ ಪ್ರಚೋದನೆಯಿಲ್ಲದೆ ಅಧಿಕಾರಿಯೊಬ್ಬರು ಯುವತಿಗೆ ಕಪಾಳಮೋಕ್ಷ ಮಾಡಿದ ಘಟನೆಯೂ ವರದಿಯಾಗಿದೆ. ಪೊಲೀಸರ ಇಂತಹ ಅತಿಯಾದ ಬಲಪ್ರಯೋಗವನ್ನು ಪ್ರಶ್ನಿಸಿ ಇಂದು ಮತ್ತೊಂದು ಪ್ರತ್ಯೇಕ ಅರ್ಜಿ ಸಲ್ಲಿಕೆಯಾಗಿದೆ ಎಂದು ತಿಳಿಸಿದರು.

ಇದು ಶಾಂತಿಯುತ ಪ್ರತಿಭಟನೆಯಾಗಿತ್ತು ಎಂದು ಸಿಜೆಐ

ಇದು ವಿದ್ಯಾರ್ಥಿಗಳು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ನಡೆಸಿದ ಸಂಪೂರ್ಣ ಶಾಂತಿಯುತ ಪ್ರತಿಭಟನೆಯಾಗಿತ್ತು. ಹೀಗಾಗಿ ಸುದೀರ್ಘ ವಾದ-ವಿವಾದಗಳ ಅಗತ್ಯವಿಲ್ಲ. ಸಂವಿಧಾನದ ಚೌಕಟ್ಟಿನಲ್ಲೇ ಪ್ರತಿಭಟನೆ ನಡೆದಿದೆ. ಆದರೆ, ಇಂತಹ ಶಾಂತಿಯುತ ಪ್ರತಿಭಟನೆಗಳಿಗೆ ಆಹ್ವಾನವಿಲ್ಲದ ಕೆಲವು ವ್ಯಕ್ತಿಗಳು ತಮ್ಮದೇ ಆದ ಅಜೆಂಡಾಗಳೊಂದಿಗೆ ಬಂದು ಪ್ರತಿಭಟನೆಯನ್ನೇ ಕೈವಶ ಮಾಡಿಕೊಳ್ಳುತ್ತಾರೆ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ. ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸಿದರೂ ತಮ್ಮನ್ನು ಈ ರೀತಿ ನಡೆಸಿಕೊಳ್ಳಲಾಗಿದೆ ಎಂದು ಅವರು ನೋವು ತೋಡಿಕೊಂಡಿರುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.
ಮುಂದುವರಿದು ಮಾತನಾಡಿದ ಸಿಜೆಐ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳು ಒಂದು ಭಾಗ. ಪ್ರತಿಯೊಬ್ಬ ಭಾಗಿದಾರರೂ ರಚನಾತ್ಮಕ ಸಲಹೆಗಳೊಂದಿಗೆ ಮುಂದೆ ಬರಬೇಕು. ಈ ಹಿಂದೆ ನ್ಯಾಯಾಲಯ ನೀಡಿದ್ದ ಸೂಚನೆಗಳು ಹಾಗೂ ಪ್ರೋಟೋಕಾಲ್‌ಗಳಿಗೆ ಕಾಲಕ್ರಮೇಣ ಹೊಸ ಸವಾಲುಗಳು ಎದುರಾಗುತ್ತಿವೆ. ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಅಥವಾ ಇತರ ಕ್ರಮಗಳನ್ನು ಬಳಸಬೇಕು..? ಅವುಗಳ ಬಳಕೆಗೆ ಅನುಮತಿ ನೀಡಬೇಕೇ..? ಎಂಬುದನ್ನು ನಾವು ನಿರ್ಧರಿಸಬೇಕಿದೆ ಎಂದರು.
ಈ ವೇಳೆ ವಕೀಲ ಗೋಪಾಲ ಶಂಕರನಾರಾಯಣನ್, ಒಬ್ಬ ಎಎಸ್​ಐ ಕಾರಿನ ಗಾಜುಗಳನ್ನು ಸ್ವತಃ ಒಡೆದುಹಾಕುತ್ತಿರುವ ವಿಡಿಯೋ ಸಾಕ್ಷಿಯಿದೆ ಎಂದು ಪೀಠದ ಗಮನಕ್ಕೆ ತಂದರು. ಈ ಅಧಿಕಾರಿಗಳು ಯಾವುದೇ ಭಯವಿಲ್ಲದೆ ಮನಸೋಇಚ್ಛೆ ವರ್ತಿಸಿದ್ದಾರೆ. ಸುಪ್ರೀಂ ಕೋರ್ಟ್ ಉನ್ನತ ಮಟ್ಟದಲ್ಲಿ ಜವಾಬ್ದಾರಿಯನ್ನು ನಿಗದಿಪಡಿಸದಿದ್ದರೆ, ತಾವು ಏನೇ ಮಾಡಿದರೂ ನುಣುಚಿಕೊಳ್ಳಬಹುದು ಎಂಬ ಭಾವನೆ ಪೊಲೀಸರಲ್ಲಿ ಮುಂದುವರಿಯುತ್ತದೆ ಎಂದು ವಾದಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net