ವಿದೇಶಿ ಪಾಸ್‌ಪೋರ್ಟ್ ಕಥೆಗಳೆಲ್ಲಾ ಬರೀ ನಗೆಪಾಟಲು!..ಕಾಂಗ್ರೆಸ್ ಆರೋಪಕ್ಕೆ ಅಸ್ಸಾಂ ಸಿಎಂ ಪತ್ನಿ ರಿನಿಕಿ ತಿರುಗೇಟು | Riniki Bhuyan Sarma

Riniki Bhuyan Sarma | ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪತ್ನಿ ರಿನಿಕಿ ಭುಯಾನ್ ಶರ್ಮಾ
Riniki Bhuyan Sarma | ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪತ್ನಿ ರಿನಿಕಿ ಭುಯಾನ್ ಶರ್ಮಾ
Published on
ದಿಸ್ಪೂರ್​​: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪತ್ನಿ ರಿನಿಕಿ ಭುಯಾನ್ ಶರ್ಮಾ (Riniki Bhuyan Sarma) ವಿರುದ್ಧ ಕಾಂಗ್ರೆಸ್ ಮಾಡಿದ್ದ ಆರೋಪಗಳಿಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನೀಡಿರುವ ರಿನಿಕಿ, ಕೈ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ವಿದೇಶಿ ಪಾಸ್‌ಪೋರ್ಟ್‌ಗಳು ಮತ್ತು ದುಬೈನಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ನಗೆಪಾಟಲಿನ ಸಂಗತಿ ಎಂದಿರುವ ರಿನಿಕಿ ಶರ್ಮಾ, ನನಗಾಗಲಿ, ನನ್ನ ಪತಿಗಾಗಲಿ ಅಥವಾ ಮಕ್ಕಳಿಗಾಗಲಿ ದುಬೈ ಸೇರಿದಂತೆ ವಿದೇಶದ ಯಾವುದೇ ಭಾಗದಲ್ಲಿ ಆಸ್ತಿ ಅಥವಾ ವ್ಯಾಪಾರ ಹಿತಾಸಕ್ತಿಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್​ಗೆ ನೇರ ಸವಾಲು ಹಾಕಿದ ರಿನಿಕಿ ಶರ್ಮಾ, ನಿಮ್ಮ ಪತ್ನಿ ಪಾಕಿಸ್ತಾನದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್​ ನಾಯಕರ ಆರೋಪವೇನು..?
ಕಾಂಗ್ರೆಸ್ ನಾಯಕರಾದ ಪವನ್ ಖೇರಾ ಮತ್ತು ಗೌರವ್ ಗೊಗೊಯ್, ರಿನಿಕಿ ಶರ್ಮಾ ಯುಎಇ, ಈಜಿಪ್ಟ್ ಮತ್ತು ಆಂಟಿಗುವಾ-ಬಾರ್ಬುಡಾ ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಹಾಗೂ ಅಮೆರಿಕದ ವ್ಯೋಮಿಂಗ್‌ನಲ್ಲಿ ಕಂಪನಿ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಆಸ್ತಿಗಳನ್ನು ಸಿಎಂ ಶರ್ಮಾ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಮುಚ್ಚಿಟ್ಟಿದ್ದಾರೆ ಎಂದು ದೂರಿದ್ದರು. ಈ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ನಕಲಿ ಮತ್ತು ಮಾರ್ಫ್ ಮಾಡಿದ ದಾಖಲೆಗಳನ್ನು ಆಧರಿಸಿವೆ ಎಂದು ರಿನಿಕಿ ವಿವರಣೆ ನೀಡಿದ್ದಾರೆ. ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಗುಂಪಿನಿಂದ ಪಡೆದ ಚಿತ್ರಗಳನ್ನು ಬಳಸಿ ಪಾಸ್‌ಪೋರ್ಟ್‌ಗಳನ್ನು ಸೃಷ್ಟಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

ರಿನಿಕಿ ಶರ್ಮಾ ತಿಳಿಸಿರುವ ಪ್ರಮುಖ ಅಂಶಗಳು

1. ಯುಎಇ ನೀಡಿರುವ ಗೋಲ್ಡನ್ ವೀಸಾ ಒಂದು ವೀಸಾವೇ ಹೊರತು ಅದು ಪಾಸ್‌ಪೋರ್ಟ್ ಅಲ್ಲ.
2. ಕಾಂಗ್ರೆಸ್ ಬಿಡುಗಡೆ ಮಾಡಿದ ಈಜಿಪ್ಟ್ ಪಾಸ್‌ಪೋರ್ಟ್ ಮತ್ತೊಬ್ಬ ವ್ಯಕ್ತಿಗೆ ಸೇರಿದ್ದು, ಮುಖದ ಲಕ್ಷಣಗಳು ಹೊಂದಿಕೆಯಾಗುವುದಿಲ್ಲ.
3. ಆಂಟಿಗುವಾ-ಬಾರ್ಬುಡಾ ಪಾಸ್‌ಪೋರ್ಟ್‌ನಲ್ಲಿರುವ ದಿನಾಂಕಗಳು ಮತ್ತು ಕೋಡ್‌ಗಳಲ್ಲಿ ತಪ್ಪುಗಳಿದ್ದು, ಅವು ನಕಲಿ ದಾಖಲೆಗಳಾಗಿವೆ.
4. ಅಮೆರಿಕದ ವ್ಯೋಮಿಂಗ್‌ನಲ್ಲಿರುವ ಕಂಪನಿಯ ವಿವರಗಳೂ ಸಹ ಆನ್‌ಲೈನ್‌ನಲ್ಲಿ ಸೃಷ್ಟಿಸಿದ ಸುಳ್ಳು ದಾಖಲೆಗಳಾಗಿವೆ.
ಈ ಎಲ್ಲಾ ತಪ್ಪುಗಳು ಕಾಂಗ್ರೆಸ್‌ನ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಉದ್ದೇಶಪೂರ್ವಕವಾಗಿ ಜನರನ್ನು ದಾರಿತಪ್ಪಿಸುವ ಪ್ರಯತ್ನ ಎಂಬುದನ್ನು ಸಾಬೀತುಪಡಿಸಿವೆ ಎಂದು ರಿನಿಕಿ ಭುಯಾನ್ ಶರ್ಮಾ ವಾದಿಸಿದ್ದಾರೆ. 

ಹಿಮಂತ ಬಿಸ್ವಾ ಶರ್ಮಾ ಹೇಳಿದ್ದೇನು..?

ಈ ಆರೋಪಗಳನ್ನು ತಳ್ಳಿಹಾಕಿರುವ ಮುಖ್ಯಮಂತ್ರಿ ಶರ್ಮಾ, ಕಾಂಗ್ರೆಸ್ ಬಳಸುತ್ತಿರುವ ಮಾಹಿತಿ ಮತ್ತು ದಾಖಲೆಗಳು ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಜಾಲಗಳಿಂದ ಬಂದಿವೆ, ಕಳೆದ ಹತ್ತು ದಿನಗಳಲ್ಲಿ ಪಾಕಿಸ್ತಾನದ ವಿವಿಧ ಟಾಕ್ ಶೋಗಳಲ್ಲಿ ಅಸ್ಸಾಂ ಚುನಾವಣೆ ಮತ್ತು ಕಾಂಗ್ರೆಸ್ ಪರವಾಗಿ ಅಭೂತಪೂರ್ವ ಚರ್ಚೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದು, ಇದು ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಮತ್ತು ಕಾಂಗ್ರೆಸ್ ಪಕ್ಷದ ಸಂಘಟಿತ ಪ್ರಯತ್ನ ಎಂದು ದೂರಿದ್ದಾರೆ.
ವಿದೇಶಗಳಲ್ಲಿ ಕಂಪನಿಗಳನ್ನು ನೋಂದಾಯಿಸುವುದು ಕೇವಲ 199 ಡಾಲರ್ ಪಾವತಿಸುವಷ್ಟು ಸುಲಭದ ಕೆಲಸವಾಗಿದ್ದು, ವಿರೋಧಿಗಳು ತಮ್ಮ ಪತ್ನಿಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿರುವ ಶರ್ಮಾ, ಈ ವಿಚಾರವಾಗಿ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಸುಳ್ಳು ದಾಖಲೆಗಳನ್ನು ಪ್ರದರ್ಶಿಸಿ ಚುನಾವಣೆ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಕಠಿಣ ಸೆಕ್ಷನ್‌ಗಳಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇಂತಹ ಅಪರಾಧಗಳಿಗೆ ಜೀವಾವಧಿ ಶಿಕ್ಷೆಯಾದರು ಅನುಮಾನ ಪಡಬೇಕಿಲ್ಲ ಎಂದು ಅಸ್ಸಾಂ ಸಿಎಂ ತಿಳಿಸಿದ್ದಾರೆ.
ಅಸ್ಸಾಂ ರಾಜಕೀಯದಲ್ಲಿ ಈಗ ಈ ಪಾಸ್‌ಪೋರ್ಟ್ ಮತ್ತು ಆಸ್ತಿ ವಿವಾದವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ಸಂಘರ್ಷಕ್ಕೆ ಕಾರಣವಾಗಿದೆ. ಈಗಾಗಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಅಂತಿಮ ಹಂತ ತಲುಪಿದ್ದು, ಏಪ್ರಿಲ್ 9 ರಂದು ಅಸ್ಸಾಂನಲ್ಲಿ ಮತದಾನ ನಡೆಯಲಿದೆ. ಇದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಎಲ್ಲಾ ಫಲಿತಾಂಶಗಳು ಹೊರಬೀಳಲಿವೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net