ಭಾರತ-ಯುರೋಪ್ ನಡುವೆ 'ಮದರ್ ಆಫ್ ಆಲ್ ಡೀಲ್ಸ್'..ಸ್ಥಿರತೆಯ ಮಂತ್ರ ಜಪಿಸಿದ ಪ್ರಧಾನಿ ಮೋದಿ | India-EU FTA

India-EU FTA | ಭಾರತ-ಯುರೋಪ್ ಒಕ್ಕೂಟದ ವ್ಯಾಪಾರ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
India-EU FTA | ಭಾರತ-ಯುರೋಪ್ ಒಕ್ಕೂಟದ ವ್ಯಾಪಾರ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
Published on
ದೆಹಲಿ: ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಮಂಗಳವಾರ ಐತಿಹಾಸಿಕ ಮತ್ತು ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದ (FTA)ದ ಕುರಿತು ಮಾತುಕತೆಗಳನ್ನು ಮುಕ್ತಾಯಗೊಳಿಸಿದ್ದು, ಇದು ಎರಡೂ ಕಡೆಯವರು ಸಹಿ ಮಾಡಿದ ಅತಿದೊಡ್ಡ ವ್ಯಾಪಾರ ಒಪ್ಪಂದವಾಗಿದೆ ಎಂದು ವರದಿಯಾಗಿದೆ.
ಜಾಗತಿಕ ಆರ್ಥಿಕತೆಯು ಒತ್ತಡದಲ್ಲಿರುವ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೆಚ್ಚುತ್ತಿರುವ ಸಮಯದಲ್ಲಿನ ಈ ಒಪ್ಪಂದವು ಮುಕ್ತ ಮತ್ತು ನಿಯಮ ಆಧಾರಿತ ಜಾಗತಿಕ ವ್ಯಾಪಾರದಲ್ಲಿ ವಿಶ್ವಾಸದ ಸ್ಪಷ್ಟ ಸಂದೇಶವಾಗಿದೆ.
ಭಾರತ-ಯುರೋಪ್ ಒಕ್ಕೂಟದ ವ್ಯಾಪಾರ ವೇದಿಕೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ಸಂಬಂಧಗಳ ಪ್ರಮಾಣ ಮತ್ತು ಆಳವನ್ನು ಒತ್ತಿ ಹೇಳುತ್ತಾ, ಮುಕ್ತ ವ್ಯಾಪಾರ ಒಪ್ಪಂದವನ್ನು ಮಹತ್ವದ ತಿರುವು ಎಂದು ಕರೆದರು.
ಈ ಪಾಲುದಾರಿಕೆಯನ್ನು ಇಡೀ ಸಮಾಜದ ಪಾಲುದಾರಿಕೆಯಾಗಿ ಪರಿವರ್ತಿಸುವ ಸಮಯ ಬಂದಿದ್ದು, ನಾವು ಇಂದು ಸಮಗ್ರ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದೇವೆ, ಯುರೋಪ್ ಒಕ್ಕೂಟದ ಭಾರತೀಯ ಹೂಡಿಕೆ ಸುಮಾರು 40 ಬಿಲಿಯನ್ ಯುರೋಗಳನ್ನು ತಲುಪಿದೆ, ಆದರೆ ಭಾರತೀಯ ಮತ್ತು ಯುರೋಪಿಯನ್ ಕಂಪನಿಗಳ ನಡುವಿನ ಸಹಕಾರವು ಈಗ ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪಾದನೆ ಮತ್ತು ಸೇವೆಗಳನ್ನು ವ್ಯಾಪಿಸಿದೆ ಎಂದು ಹೇಳಿದರು.

ರೈತರು, ಕಾರ್ಮಿಕರಿಗೆ ಅನುಕೂಲ

ಈ ಒಪ್ಪಂದವು ಭಾರತದ ಕಾರ್ಮಿಕ ವಲಯಗಳಿಗೆ ಯುರೋಪಿಯನ್ ಮಾರುಕಟ್ಟೆಯನ್ನು ಮುಕ್ತವಾಗಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದು, ಜವಳಿ, ರತ್ನಗಳು ಮತ್ತು ಆಭರಣಗಳು, ಆಟೋ ಘಟಕಗಳು ಮತ್ತು ಎಂಜಿನಿಯರಿಂಗ್ ಸರಕುಗಳಂತಹ ಉತ್ಪನ್ನಗಳು ಸುಲಭವಾಗಿ ಪ್ರವೇಶಿಸಲ್ಪಡುತ್ತವೆ. ಹಣ್ಣುಗಳು, ತರಕಾರಿಗಳು, ಸಂಸ್ಕರಿಸಿದ ಆಹಾರಗಳು ಮತ್ತು ಸಮುದ್ರ ಉತ್ಪನ್ನಗಳು ಹೊಸ ಅವಕಾಶಗಳು ಸಿಗುತ್ತವೆ. ನಮ್ಮ ರೈತರು ಮತ್ತು ಮೀನುಗಾರರು ಇದರ ನೇರ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಿದರು.
ಸೇವಾ ವಲಯ, ವಿಶೇಷವಾಗಿ ಐಟಿ, ಶಿಕ್ಷಣ, ಸಾಂಪ್ರದಾಯಿಕ ಔಷಧ ಮತ್ತು ವ್ಯಾಪಾರ ಸೇವೆಗಳ ಲಾಭಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಪ್ರಪಂಚದಾದ್ಯಂತದ ಕಂಪನಿಗಳು ತಮ್ಮ ಕಾರ್ಯತಂತ್ರಗಳನ್ನು ಪುನರ್ವಿಮರ್ಶಿಸುತ್ತಿರುವ ಸಮಯದಲ್ಲಿ, ಎಫ್‌ಟಿಎ ಬಲವಾದ ಸಂಕೇತವನ್ನು ರವಾನಿಸುತ್ತದೆ ಎಂದರು.

ಐತಿಹಾಸಿಕ ಕ್ಷಣ ಎಂದ ಪ್ರಧಾನಿ ಮೋದಿ

ಯುರೋಪಿಯನ್ ಕೌನ್ಸಿಲ್ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷರ ಭೇಟಿ ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದು, ಇದು ಸಾಮಾನ್ಯ ರಾಜತಾಂತ್ರಿಕ ಭೇಟಿಯಲ್ಲ. ಇದು ಭಾರತ-ಯುರೋಪಿಯನ್ ಒಕ್ಕೂಟದ ಸಂಬಂಧಗಳಲ್ಲಿ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ ಎಂದು ಹೇಳಿದರು.
ಈ ಒಪ್ಪಂದವನ್ನು ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಇದು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಆಳವಾದ ಕಾರ್ಯತಂತ್ರದ ಜೋಡಣೆಯನ್ನು ಸಂಕೇತಿಸುತ್ತದೆ ಎಂದರು.
ಭಾರತ-ಯುರೋಪ್ ಒಕ್ಕೂಟದ ನಡುವಿನ ವ್ಯಾಪಾರದ ಪ್ರಮಾಣವನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, ಕಳೆದ 10 ವರ್ಷಗಳಲ್ಲಿ ಭಾರತ-ಯುರೋಪ್ ವ್ಯಾಪಾರವು ದ್ವಿಗುಣಗೊಂಡು 180 ಶತಕೋಟಿ ಯುರೋಗಳನ್ನು ತಲುಪಿದೆ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net