ಸುಳ್ಳನ್ನು ಹೀಗೂ ಹೇಳಬಹುದಾ? 10 ಕೋಟಿ ರೂ. ಲ್ಯಾಂಬೋರ್ಗಿನಿಯಲ್ಲಿ ಇತ್ತು ಆ ಸಮಸ್ಯೆ! Lamborghini Crash

ಲ್ಯಾಂಬೋರ್ಗಿನಿ ಕಾರು ಅಪಘಾತ ಕೇಸ್​
ಲ್ಯಾಂಬೋರ್ಗಿನಿ ಕಾರು ಅಪಘಾತ ಕೇಸ್​
Published on

ಪ್ರಮುಖ ಮುಖ್ಯಾಂಶಗಳು

  • ಕಾನ್ಪುರದಲ್ಲಿ ಪಾದಚಾರಿಗಳ ಮೇಲೆ ಹರಿದ ಲಕ್ಸುರಿ ಲ್ಯಾಂಬೋರ್ಗಿನಿ ಕಾರು ಘಟನೆ
  • ಮಗನನ್ನು ಬಚಾವ್​ ಮಾಡಲು ಉದ್ಯಮಿ ತಂದೆಯಿಂದ ಸುಳ್ಳುಗಳ ಸರಮಾಲೆ?
  • ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ ಖಾಕಿ ಪಡೆ
ನವದೆಹಲಿ: ಇತ್ತೀಚೆಗಷ್ಟೇ ತಂಬಾಕು ಉದ್ಯಮಿಗೆ ಸೇರಿದ ಲಕ್ಸುರಿ ಲ್ಯಾಂಬೋರ್ಗಿನಿ ಕಾರು (Lamborghini crash) ಉತ್ತರ ಪ್ರದೇಶದ ಕಾನ್ಪುರದಲ್ಲಿ ಪಾದಚಾರಿಗಳ ಮೇಲೆ ಹರಿದ ಘಟನೆ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಉದ್ಯಮಿಯ ಪುತ್ರ ಅಡ್ಡಾದಿಡ್ಡಿ ಚಲಾಯಿಸಿ, ಫುಟ್​ಪಾತ್​ನಲ್ಲಿ ಹೋಗ್ತಿದ್ದ ಜನರ ಮೇಲೆ ಹರಿಸಿದ ಹಿನ್ನೆಲೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಡ್ರೈವರ್​ಗೆ ಶಿಕ್ಷೆ ಆಗಲೇಬೇಕೆಂದು ಸ್ಥಳೀಯರು ಪಟ್ಟುಹಿಡಿದಿದ್ದಾರೆ. ಈ ಮಧ್ಯೆ, ಆರೋಪಿಯ ತಂದೆ ಹೇಳಿರುವ ಹೇಳಿಕೆಗಳು ಸದ್ಯ ಹಲವರನ್ನು ಕೆರಳಿಸಿದೆ. 
ಕಾನ್ಪುರದ ದುಬಾರಿ ಗ್ವಾಲ್ಟೋಲಿ ಪ್ರದೇಶದ ವಿಐಪಿ ರಸ್ತೆಯಲ್ಲಿ ಭಾನುವಾರ (ಫೆ.08) ಮಧ್ಯಾಹ್ನ 3.15ರ ಸಮಯದಲ್ಲಿ, ದೆಹಲಿ ನೋಂದಣಿ ಸಂಖ್ಯೆಯ DL 11 CF 4018 ಕಪ್ಪು ಬಣ್ಣದ ಲ್ಯಾಂಬೋರ್ಘಿನಿ ರೆವೆಲ್ಟೊ ಕಾರು ಭೀಕರ ಅಪಘಾತಕ್ಕೆ ತುತ್ತಾಯಿತು. ವೇಗವಾಗಿ ಬಂದ ಈ ಕಾರು, ಮೊದಲು ಆಟೋಗೆ ಡಿಕ್ಕಿ ಹೊಡೆದಿದ್ದು, ನಂತರ ಬೈಕ್​ ಸೇರಿ ಇತರೆ ವಾಹನಗಳಿಗೆ ಗುದ್ದಿದೆ. ಇದರ ಪರಿಣಾಮ, ಓರ್ವ ಗಂಭೀರವಾಗಿ ಗಾಯಗೊಂಡರೆ, ಇನ್ನೂ ಆರು ಮಂದಿ ಆಸ್ಪತ್ರೆ ಪಾಲಾಗಿದ್ದಾರೆ. 

10 ಕೋಟಿ ರೂ. ಕಾರು

10 ಕೋಟಿ ರೂ. ಬೆಲೆಬಾಳುವ ಈ ಇಟಲಿ ಮೂಲದ ಐಷಾರಾಮಿ ಕಾರನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಜಾಗರೂಕತೆ ಮತ್ತು ಅಡ್ಡಾದಿಡ್ಡಿ ಚಾಲನೆಗಾಗಿ ಕಾರು ಚಾಲಕನ ಮೇಲೆ ಎಫ್​ಐಆರ್​ ದಾಖಲಾಗಿದ್ದು, ಪ್ರಕರಣದ ತನಿಖೆ ಇನ್ನಷ್ಟು ಚುರುಕಾಗಿದೆ. ಈ ಮಧ್ಯೆ, ತನ್ನ ಪುತ್ರ ಶಿವಂ ಮಿಶ್ರನನ್ನು ಕೇಸ್​ನಿಂದ ಬಚಾವ್ ಮಾಡಲು ಮುಂದಾಗಿರುವ ತಂಬಾಕು ಉದ್ಯಮಿ ಕೆಕೆ ಮಿಶ್ರ,  ಕಾರನ್ನು ನನ್ನ ಮಗ ಚಲಾಯಿಸಿಯೇ ಇಲ್ಲ ಎಂದು ವಾದಿಸಿರುವುದು ಆಶ್ಚರ್ಯ ಮೂಡಿಸಿದೆ. 

ಪಾರು ಮಾಡುವ ವಿಧಾನ?

ಕೆಕೆ ಮಿಶ್ರ ಹೇಳಿಕೆಯ ಪ್ರಕಾರ, ಅಪಘಾತದ ವೇಳೆ ನನ್ನ ಮಗ ಕಾರು ಚಲಾಯಿಸಿಲ್ಲ. ಬದಲಿಗೆ ಇಬ್ಬರು ಕಾರಿನೊಳಗಿದ್ದರು. ಪುತ್ರ ಮತ್ತು ಡ್ರೈವರ್​​ ಇಬ್ಬರೂ ಇದ್ದರು. ಈ ವಿಷಯದಲ್ಲಿ ಗೊಂದಲವಿದೆ. ಅಸಲಿಗೆ, ಯಾರು ಕಾರನ್ನು ಓಡಿಸುತ್ತಿದ್ದರು ಎಂಬುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಆ್ಯಕ್ಸಿಡೆಂಟ್​ಗೂ ಮುನ್ನ ಕಾರಿನಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಇತ್ತು. ಮೆಕ್ಯಾನಿಕ್​ಗಳು ಸಮಸ್ಯೆಯನ್ನು ಬಗೆಹರಿಸಿದ್ದಾಗಿ ಹೇಳಿದರು ಎಂದಿದ್ದಾರೆ.
ಮೆಕ್ಯಾನಿಕ್​ಗಳು ಭರವಸೆ ಕೊಟ್ಟ ಮೇಲೆ ಶಿವಂ ಮತ್ತು ಚಾಲಕ ಕಾರನ್ನು ಟೆಸ್ಟಿಂಗ್​ಗೆಂದು ತೆಗೆದುಕೊಂಡು ಹೋದರು. ಮನೆಗೆ ವಾಪಾಸ್​ ಬರುವಾಗ ಸಿವಿಲ್​ ಲೈನ್ಸ್​ ಮಾರ್ಗದಲ್ಲಿ ಮಗ ನಿದ್ರೆಗೆ ಜಾರಿದ್ದಾನೆ. ತಕ್ಷಣವೇ ಚಾಲಕ ಒಂದು ಕೈನಿಂದ ಅವನನ್ನು ಚೆಕ್​ ಮಾಡಲು ಹೋದಾಗ, ಕಾರು ನಿಯಂತ್ರಣ ಕಳೆದುಕೊಂಡು ಆಟೋಗೆ ಡಿಕ್ಕಿ ಹೊಡೆದು ನಂತರದಲ್ಲಿ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net