ಲೇಡಿ ವೀರಪ್ಪನ್​ಗಳು

ಲೇಡಿ ವೀರಪ್ಪನ್​ಗಳು
ಲೇಡಿ ವೀರಪ್ಪನ್​ಗಳು
Published on

ಹಿಮಾಲಯದ ಹಿಮಾಚ್ಛಾದಿತ ಪರ್ವತಗಳ ನಡುವೆ ಅಲೆದಾಡುತ್ತ ಹಲವಾರು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಒಬ್ಬ ಕುಖ್ಯಾತ ಲೇಡಿ ಸ್ಮಗ್ಲರ್ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಆಕೆಯ ಹೆಸರು ಯಾಂಗ್ಚೆನ್ ಲಾಚುಂಗ್ಪಾ. 44 ವರ್ಷ ವಯಸ್ಸಿನ ಈಕೆ ಮೂಲತಃ ಟಿಬೆಟ್​ನವಳು. ವನ್ಯಜೀವಿಗಳ ಕಳ್ಳಸಾಗಣೆಯೇ ಈಕೆಯ ಬಿಜಿನೆಸ್. ‘ಇವಳ ಬೆನ್ನು ಹತ್ತುವ ಕೆಲಸ ಕೊನೆಗೂ ಮುಗಿಯಿತಲ್ಲ’ ಎಂದು ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇಂತಹ ಇನ್ನೂ ಅನೇಕ ‘ಲೇಡಿ ವೀರಪ್ಪನ್’ಗಳು ಇದ್ದಾರೆ. ಯಾರವರು, ಅವರ ಕಾರ್ಯವಿಧಾನ ಏನು, ಅವರಿಂದ ಕಾಡುಪ್ರಾಣಿಗಳಿಗಾದ ಸಂಕಷ್ಟ ಎಂತಹುದು ಎಂಬುದರ ವಿಸõತ ಮಾಹಿತಿ ಇಲ್ಲಿದೆ.

ಯಾಂಗ್ಚೆನ್ ಲಾಚುಂಗ್ಪಾ

ಮೂಲತಃ ಟಿಬೆಟ್​ನವಳಾದರೂ ಭಾರತದ ಹುಲಿ ಸಂತತಿಗೆ ಇವಳೊಂದು ದುಃಸ್ವಪ್ನವಿದ್ದಂತೆ. ಇಲ್ಲಿನ ಹುಲಿಗಳ ಉಗುರು, ಚರ್ಮ, ಮೂಳೆ ಮುಂತಾದವುಗಳನ್ನು ಚೀನಾ, ನೇಪಾಳ, ಟಿಬೆಟ್, ಭೂತಾನ್ ಮಾರುಕಟ್ಟೆಗಳಿಗೆ ನಿರಂತರವಾಗಿ ಪೂರೈಸುತ್ತಿದ್ದವಳು. ಅದರ ಜತೆಗೆ, ಪ್ಯಾಂಗೋಲಿನ್​ಗಳ ಮೈಮೇಲಿನ ಚಿಪ್ಪುಗಳು, ಶಾಹತೂಷ್ ಉಣ್ಣೆ, ರಕ್ತಚಂದನ, ಕಾರ್ಡಿಸೆಪ್ಸ್ ಮುಂತಾದವುಗಳ ಕಳ್ಳಸಾಗಣೆಯಲ್ಲೂ ತೊಡಗಿದ್ದಳು. ಅದಕ್ಕಾಗಿ ಹಿಮಾಲಯದಿಂದ ಹಿಡಿದು ಮಧ್ಯಪ್ರದೇಶದವರೆಗೂ ವ್ಯವಸ್ಥಿತ ಜಾಲವೊಂದನ್ನು ನಿರ್ವಿುಸಿದ್ದಳು. ದೆಹಲಿ, ಕೋಲ್ಕತಾ ಗ್ಯಾಂಗ್ಟಕ್ ಮುಂತಾದೆಡೆ ತನ್ನ ಸಹಚರರ ಮೂಲಕ ವ್ಯವಹಾರ ಕುದುರಿಸುತ್ತಿದ್ದಳು. 

ಸಾತ್ಪುರ ಹುಲಿ ಅಭಯಾರಣ್ಯದಲ್ಲಿ ಮಧ್ಯಪ್ರದೇಶದ ಪೊಲೀಸರು 2015ರ ಜುಲೈನಲ್ಲಿ ಕಾಡುಗಳ್ಳರಿಂದ ಹುಲಿ ಚರ್ಮ, ಮೂಳೆ, ಪ್ಯಾಂಗೋಲಿನ್ ಚಿಪ್ಪುಗಳನ್ನು ವಶಪಡಿಸಿಕೊಂಡಾಗ ಮೊದಲ ಬಾರಿಗೆ ಯಾಂಗ್ಚೆನ್​ಳ ಹೆಸರು ಬಯಲಿಗೆ ಬಂತು. ಆಕೆಯ ಮಾಜಿ ಪತಿ ಜೈ ತಮಾಂಗ್ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಯಾಂಗ್ಚೆನ್​ಳ ಪಾತ್ರವೇನೆಂಬುದನ್ನು ಬಾಯಿಬಿಟ್ಟಿದ್ದ. ಕಾಡುಗಳ್ಳರಿಗೆ ಆಶ್ರಯ ಕೊಡುವುದು, ವನ್ಯಜೀವಿಗಳ ಹತ್ಯೆಗೆ ಪ್ರಚೋದನೆ ನೀಡುವುದು, ಅವುಗಳ ಅಂಗಾಂಗ ಖರೀದಿಸುವುದು, ವಿದೇಶಿ ಕಾಳಸಂತೆಯಲ್ಲಿ ಮಾರುವುದು ಹೀಗೆ ಬಹುತೇಕ ಕೆಲಸಗಳನ್ನು ಆಕೆಯೇ ನೋಡಿಕೊಳ್ಳುತ್ತಿದ್ದಳು. ತಮಾಂಗ್​ನ ಬ್ಯಾಂಕ್ ಖಾತೆಯಿಂದ 65 ಲಕ್ಷ ರೂ. ವಹಿವಾಟು ನಡೆದಿದ್ದು ಪತ್ತೆಯಾಯಿತು. 

2017ರಲ್ಲಿ ಯಾಂಗ್ಚೆನ್​ಳನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದರು. ಆದರೆ ಕೋರ್ಟ್ ಆಕೆಗೆ ಮಧ್ಯಂತರ ಜಾಮೀನು ನೀಡಿತ್ತು. ಆಗ ತಲೆಮರೆಸಿಕೊಂಡ ಆಕೆ ಮತ್ತೆಂದೂ ಪೊಲೀಸರ ಕೈಗೆ ಸಿಕ್ಕಿರಲೇ ಇಲ್ಲ. 2022ರಲ್ಲಿ 31 ಆರೋಪಿಗಳ ಪೈಕಿ 27 ಜನರಿಗೆ ನರ್ಮದಾಪುರಂ ಕೋರ್ಟು ಶಿಕ್ಷೆ ವಿಧಿಸಿದರೂ ಅದರಲ್ಲಿ ಯಾಂಗ್ಚೆನ್ ಇರಲಿಲ್ಲ. 2025ರ ಅಕ್ಟೋಬರ್​ನಲ್ಲಿ ಆಕೆಯ ಬಂಧನಕ್ಕಾಗಿ ಇಂಟರ್​ಪೋಲ್ ರೆಡ್​ಕಾರ್ನರ್ ನೋಟಿಸ್ ಜಾರಿಯಾಗಿತ್ತು. ‘ದೆವ್ವ’ ಎನ್ನುತ್ತಿದ್ದ ಪೊಲೀಸರು: ಹಲವಾರು ವರ್ಷಗಳಿಂದ ಯಾಂಗ್ಚೆನ್ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಳ್ಳುತ್ತಲೇ ಇದ್ದಳು. ಹಿಮಾಲಯದ ಹಿಮಾಚ್ಛಾದಿತ ಪರ್ವತಗಳಲ್ಲಿರುವ ಗ್ರಾಮಗಳಲ್ಲಿ ಬೀಡುಬಿಡುತ್ತಿದ್ದ ಆಕೆ ಸಣ್ಣಪುಟ್ಟ ಸಹಾಯ ಮಾಡುವ ಮೂಲಕ ಅಲ್ಲಿಯ ಜನರ ವಿಶ್ವಾಸವನ್ನೂ ಗಳಿಸಿದ್ದಳು. 

ಇಂಥ ಸ್ಥಳದಲ್ಲಿ ಇದ್ದಾಳೆ ಎಂಬ ಖಚಿತ ಮಾಹಿತಿ ಬರುತ್ತಿದ್ದಂತೆಯೇ ತಕ್ಷಣ ಪೊಲೀಸರು ದಾಳಿ ಮಾಡುತ್ತಿದ್ದರು. ಆದರೆ ಆಕೆ ಕೆಲವೇ ನಿಮಿಷಗಳ ಹಿಂದೆ ಜಾಗ ಖಾಲಿ ಮಾಡಿರುತ್ತಿದ್ದಳು. ಈ ರೀತಿ ನೂರಾರು ಸಲ ಆಗಿದ್ದರಿಂದ ಪೊಲೀಸರು ಆಕೆಗೆ ‘ದೆವ್ವ’ (ಘೊಸ್ಟ್) ಎಂದು ಹೆಸರಿಟ್ಟಿದ್ದರು. ಕೈಕೊಟ್ಟ ಅದೃಷ್ಟ: ಕೊನೆಗೂ ಯಾಂಗ್ಚೆನ್​ಗೆ ಡಿ. 2ರಂದು ಅದೃಷ್ಟ ಕೈಕೊಟ್ಟಿತು. ಅಂದು ಮಧ್ಯರಾತ್ರಿ ಮೈನಸ್ 7 ಡಿಗ್ರಿ ಸೆಂಟಿಗ್ರೇಡ್ ಚಳಿಯಲ್ಲಿ ಸಿಕ್ಕಿಂನ ಲಾಚುಂಗ್ ಗ್ರಾಮಕ್ಕೆ ಪೊಲೀಸರು ದಾಳಿ ಮಾಡಿದ್ದರು. ಯಾಂಗ್ಚೆನ್ ಅಲ್ಲೇ ಇದ್ದರೂ ಬಂಧನಕ್ಕೆ ನೂರಾರು ಗ್ರಾಮಸ್ಥರು ಅಡ್ಡಿಪಡಿಸಿದರು. ತಾವು ಭಾರತದ ಪೊಲೀಸರೆಂದೂ, ಕಳ್ಳಸಾಗಾಣಿಕೆ ಆರೋಪದ ಮೇಲೆ ಯಾಂಗ್ಚೆನ್​ಳನ್ನು ಬಂಧಿಸಲು ಬಂದಿರುವುದಾಗಿಯೂ ವಿವರಿಸಿದರೂ ಗ್ರಾಮಸ್ಥರು ಆಕೆಯನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ಕೊನೆಗೆ ಸ್ಥಳೀಯ ಪಂಚಾಯ್ತಿ ಮುಖ್ಯಸ್ಥರೆದುರು ಪೊಲೀಸರು ತಮ್ಮ ಐಡೆಂಟಿಟಿ ಸಾಬೀತುಪಡಿಸಬೇಕಾಯಿತಲ್ಲದೆ, ಈ ಕೇಸ್​ನಲ್ಲಿ ಅದುವರೆಗೆ ನಡೆದಿದ್ದ ಎಲ್ಲ ಕಾನೂನು ಪ್ರಕ್ರಿಯೆಯ ಹಂತಗಳನ್ನೂ ಸಾದ್ಯಂತವಾಗಿ ಮನವರಿಕೆ ಮಾಡಿಕೊಡಬೇಕಾಯಿತು. 

ಕೊನೆಗೂ ಆಕೆಯನ್ನು ಬಂಧಿಸಿ ಕರೆದೊಯ್ಯುವಲ್ಲಿ ಪೊಲೀಸರು ಯಶಸ್ವಿಯಾದರು. ‘ಆ ಘಟನಾವಳಿಗಳೆಲ್ಲವೂ ಒಂದು ಸಿನಿಮಾ ರೀತಿಯಲ್ಲೇ ಇದ್ದವು’ ಎನ್ನುತ್ತಾರೆ ಅವತ್ತಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳು. ಕೋಡೆಡ್ ಡೈರಿ: ಇಷ್ಟೆಲ್ಲ ನಡೆಯುತ್ತಿರುವಾಗ ಯಾಂಗ್ಚೆನ್ ತನ್ನ ಬಳಿ ಇರುವ ಎಲ್ಲ ಸಾಕ್ಷ್ಯಳನ್ನು ನಾಶಪಡಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಆಕೆಯಿಂದ ಎರಡು ಸೆಲ್​ಫೋನ್​ಗಳು ಮತ್ತು ಕೋಡೆಡ್ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡರು. ಅದರಲ್ಲಿ ಕಳ್ಳಸಾಗಣೆ ನಡೆಯುವ ದೇಶಗಳ ಹೆಸರುಗಳು, ಮಾರ್ಗಗಳು ಮತ್ತು ಹವಾಲಾ ಮೂಲಕ ಹಣ ಸಾಗಿಸಿದ ಉಲ್ಲೇಖಗಳಿವೆ.

ಇತರ ಕ್ವೀನ್​ಪಿನ್​ಗಳು

  • ಲುವೋ ಕ್ಯುಷಾನ್ - ಚೀನಾದವಳು; ಹುಲಿ ಮೂಳೆಯ ವೈನ್ ಕಳ್ಳಸಾಗಣೆ 
  • ಝೌ ಲಿನಾ - ಚೀನಾ ಮೂಲ; ಆನೆದಂತ, ಘೇಂಡಾ ಚಿಪ್ಪು ವ್ಯಾಪಾರ
  • ರಾಯಾ ನುವಾಲ್​ಸುತ್ - ಥಾಯ್ಲೆಂಡ್​ನವಳು; ಹುಲಿ ಚರ್ಮ ಮತ್ತು ಅಂಗಗಳ ಸಾಗಣೆ
  • ಆಗ್ನೇಸ್ ಯು - ಅಮೆರಿಕದವಳು; ಪ್ಯಾಂಗೋಲಿನ್ ಚಿಪ್ಪುಗಳ ಕಳ್ಳಸಾಗಣೆ
  • ಲೀ ಥಿ ಹಾಂಗ್ - ವಿಯೆಟ್ನಾಂ ಮೂಲ; ಘೇಂಡಾಮೃಗಗಳ ಕೊಂಬ್ಬು ಕಳ್ಳಸಾಗಣೆ

ಕಳ್ಳಸಾಗಣೆ ವಸ್ತುಗಳ ಉಪಯೋಗ ಎಲ್ಲೆಲ್ಲಿ?

ಔಷಧಕ್ಕೆ ಬಳಕೆ: ಹುಲಿ ಮೂಳೆ, ಉಗುರು, ಖಡ್ಗಮೃಗದ ಕೊಂಬುಗಳನ್ನು ಏಷ್ಯಾದ ಕೆಲವು ದೇಶಗಳಲ್ಲಿ ಸಾಂಪ್ರದಾಯಿಕ ವೈದ್ಯ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ರೋಗಗಳನ್ನು ಗುಣಪಡಿಸುವ, ಶಕ್ತಿಯನ್ನು ಹೆಚ್ಚಿಸುವ ಅಥವಾ ಇತರ ಆರೋಗ್ಯ ಪ್ರಯೋಜನಗಳಿಗಾಗಿ ಬಳಸುತ್ತಾರೆ ಎನ್ನಲಾಗಿದೆ. ಆಭರಣ, ಅಲಂಕಾರ: ಆನೆ ದಂತವು ಕೆತ್ತನೆಗೆ ಮತ್ತು ಐಷಾರಾಮಿ ಆಭರಣಗಳನ್ನು ತಯಾರಿಸಲು ಅತ್ಯಂತ ಬೇಡಿಕೆ ಹೊಂದಿದೆ.

ಆಹಾರ: ಕಾರ್ಡಿಸೆಪ್ಸ್ ಎಂದರೆ ಒಂದು ವಿಧದ ಶಿಲೀಂಧ್ರ. ಅದನ್ನು ಚೀನಾದಲ್ಲಿ ಟಾನಿಕ್ ಆಗಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಉಸಿರಾಟದ ಕಾಯಿಲೆಗಳಿಗೆ ಬಳಸುತ್ತಾರೆ.

ಟ್ರಾನ್ ಕಿಯು ಟ್ರಾಂಗ್

ವಿಯೆಟ್ನಾಂ ಮೂಲದ, 33 ವರ್ಷದ ಟ್ರಾನ್ ಕಿಯು ಟ್ರಾಂಗ್ 2019ರಲ್ಲಿ ಮೊಜಾಂಬಿಕ್​ಗೆ ತೆರಳಿ ಅಲ್ಲಿ ವನ್ಯಜೀವಿ ಕಳ್ಳಸಾಗಾಣಿಕೆಯ ಜಾಲದಲ್ಲಿ ಸಣ್ಣಪುಟ್ಟ ಪಾತ್ರ ನಿರ್ವಹಿಸುತ್ತಿದ್ದವಳು. ದಿನಗಳೆದಂತೆ, ಅಲ್ಲಿನ ಲಿಂಪೋಪೊ ರಾಷ್ಟ್ರೀಯ ಉದ್ಯಾನ ಮತ್ತು ದಕ್ಷಿಣ ಆಫ್ರಿಕಾದ ಕ್ರುಗರ್ ಅಭಯಾರಣ್ಯದಲ್ಲಿ ಹುಲಿಗಳನ್ನು ಕೊಂದು ಅವುಗಳ ಅಂಗಗಳನ್ನು ತೆಗೆದು ಸಂರಕ್ಷಿಸಿಡುತ್ತಿದ್ದುದನ್ನು ಕಣ್ಣಾರೆ ಕಂಡಳು. ಘೇಂಡಾಮೃಗಗಳ ಕೊಂಬುಗಳಿಗೂ ವಿಯೆಟ್ನಾಂ ಮತ್ತಿತರ ದೇಶಗಳಲ್ಲಿ ಭಾರಿ ಬೇಡಿಕೆ ಇದೆ ಎಂಬುದನ್ನು ಕ್ರಮೇಣ ಅರಿತಳು. ಕೊನೆಗೆ, ತನ್ನದೇ ಒಂದು ಜಾಲ ರೂಪಿಸಿಕೊಂಡು ಕಳ್ಳಸಾಗಣೆ ಮಾಡಲು ಆರಂಭಿಸಿದಳು. 

ಎಷ್ಟೋ ಸಲ ತಾನೇ ತನ್ನ ಲಗೇಜ್​ನಲ್ಲಿ ಇವುಗಳನ್ನು ಇಟ್ಟುಕೊಂಡು ದೇಶದಿಂದ ದೇಶಕ್ಕೆ ಸಾಗಿಸುತ್ತಿದ್ದಳು. 2020ರ ನ. 30ರಂದು ಅದೃಷ್ಟ ಕೈಕೊಟ್ಟಿತು. ಮಾಪುಟೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆಯ ಸಸಾ ಎಂಬ ಹೆಸರಿನ ಬೆಲ್ಜಿಯನ್ ನಾಯಿಯೊಂದು ಆಕೆಯ ಲಗೇಜ್ ಹಿಡಿದು ಎಳೆದಾಡತೊಡಗಿತು. ಅದರಲ್ಲಿದ್ದ ವ್ಯಾಕ್ಯೂಂ ಸೀಲ್ಡ್ ಪ್ಯಾಕೇಜ್​ಗಳಲ್ಲಿ ಐದು ಘೇಂಡಾಮೃಗದ ಕೊಂಬುಗಳಿದ್ದವು. ಅವುಗಳನ್ನು 12 ತುಂಡುಗಳಾಗಿ ಕತ್ತರಿಸಿ ಇಡಲಾಗಿತ್ತು. ಅದಲ್ಲದೆ 127 ಹುಲಿಯುಗುರು, 36 ಹುಲಿ ಹಲ್ಲುಗಳು ಇದ್ದವು. ಕಾಳಸಂತೆಯಲ್ಲಿ ಇವೆಲ್ಲವುಗಳ ಬೆಲೆ ಐದು ಲಕ್ಷ ಡಾಲರ್​ಗಿಂತಲೂ ಹೆಚ್ಚು. 2 ವರ್ಷಗಳ ವಿಚಾರಣೆಯ ಬಳಿಕ ಆಕೆಗೆ 16 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಯಾಂಗ್ ಫೆಂಗ್ಲಾನ್

‘ಐವರಿ ಕ್ವೀನ್’ (ಆನೆದಂತದ ರಾಣಿ) ಎಂದೇ ಕುಖ್ಯಾತಳಾಗಿರುವ ಚೀನಾ ಮೂಲದ ಯಾಂಗ್ ಫೆಂಗ್ಲಾನ್ ಎಪ್ಪತ್ತರ ದಶಕದಲ್ಲಿ ತಾಂಜಾನಿಯಾಕ್ಕೆ ಬಂದು ದಾರ್​ಎಸ್​ಸಲಾಂ ಎಂಬ ರೆಸ್ಟೋರೆಂಟ್ ತೆರೆದಿದ್ದಳು. ಆಫ್ರಿಕಾದಲ್ಲಿ ವ್ಯಾಪಕವಾಗಿರುವ ಆನೆ ಹತ್ಯೆ ಮತ್ತು ದಂತ ಕಳ್ಳಸಾಗಣೆ ಜಾಲದಲ್ಲಿ ಸಕ್ರಿಯಳಾಗಿದ್ದಳು. 2000ದ ವೇಳೆಗೆ ತನ್ನದೇ ಆದ ಜಾಲವೊಂದನ್ನು ಸ್ಥಾಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು. ಹಡಗಿನ ಕಂಟೇನರ್​ಗಳಲ್ಲಿ ಮೀನು ಮತ್ತು ಕಲ್ಲಿನ ಕೆತ್ತನೆಗಳ ಮಧ್ಯೆ ಆನೆದಂತಗಳನ್ನು ಅಡಗಿಸಿಟ್ಟು ಕಳ್ಳಸಾಗಣೆ ಮಾಡುತ್ತಿದ್ದಳು. 2015ರ ಅಕ್ಟೋಬರ್​ನಲ್ಲಿ ಅಮೆರಿಕ ಮತ್ತು ತಾಂಜಾನಿಯಾದ ಪೊಲೀಸರು ಈಕೆಯ ಮನೆಗೆ ದಾಳಿ ನಡೆಸಿದಾಗ ಮೀನು ಸಾಕಣೆಯ ದೊಡ್ಡ ತೊಟ್ಟಿಯಲ್ಲಿ 706 ಆನೆ ದಂತಗಳು ಸಿಕ್ಕವು! 

2019ರಲ್ಲಿ ಆಕೆಗೆ ಸ್ಥಳೀಯ ನ್ಯಾಯಾಲಯ ಎರಡು ಕೇಸುಗಳಲ್ಲಿ ತಲಾ 15 ವರ್ಷಗಳ ಜೈಲುಶಿಕ್ಷೆ ವಿಧಿಸಿತು. ಆದರೆ ಚೀನಾ ಸರ್ಕಾರ ಒತ್ತಡ ಹೇರಿದ್ದರಿಂದ, ಆಕೆಯ ಆರೋಗ್ಯ ಮತ್ತು ವಯಸ್ಸನ್ನು (70 ವರ್ಷ) ಗಮನಿಸಿ, ಕಳೆದ ತಿಂಗಳಷ್ಟೇ ಶಿಕ್ಷೆಯನ್ನು 5 ವರ್ಷಕ್ಕೆ ಇಳಿಸಲಾಗಿದೆ. ಚೀನಾಕ್ಕೆ ಆಕೆಯನ್ನು ಹಸ್ತಾಂತರ ಮಾಡಲಾಗಿದ್ದು, ಫುಜಿಯಾನ್​ನಲ್ಲಿ ಗೃಹಬಂಧನದಲ್ಲಿದ್ದಾಳೆ. ‘ಈ ಮೃದುಧೋರಣೆ ಸರ್ವಥಾ ಸರಿಯಲ್ಲ’ ಎಂಬುದು ವನ್ಯಜೀವಿ ಪರಿಸರಾಸಕ್ತರ ಆಕ್ರೋಶ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net