ಒಂದು ಜಿಲ್ಲೆಯನ್ನೇ ನಡುಗಿಸಿದ ಲೇಡಿ ಡಾನ್ ಅರಣಾಗೆ ಮಾಸ್ಟರ್​ ಸ್ಟ್ರೋಕ್​! ಏನಿದು ಪಿಡಿ ಕಾಯ್ದೆ? Lady Don

ಆಂಧ್ರ ಪ್ರದೇಶದ ನೆಲ್ಲೂರಿನ ಲೇಡಿ ಡಾನ್​ ಅರುಣಾ
ಆಂಧ್ರ ಪ್ರದೇಶದ ನೆಲ್ಲೂರಿನ ಲೇಡಿ ಡಾನ್​ ಅರುಣಾ
Published on

ಪ್ರಮುಖ ಮುಖ್ಯಾಂಶಗಳು

  • ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದ್ದ ಲೇಡಿ ಡಾನ್ ಅರುಣಾ
  • ಸರಣಿ ಅಪರಾಧಗಳನ್ನು ಮಾಡುವ ಮೂಲಕ ಜನರಲ್ಲಿ ಭಯಭೀತಿ ಮೂಡಿಸಿದ ಖತರ್ನಾಕ್​ ಲೇಡಿ
  • ಪಿಡಿ ಕಾಯ್ದೆ ದಾಖಲಿಸುವ ಮೂಲಕ ಅರುಣಾಗೆ ಮಾಸ್ಟರ್​ ಸ್ಟ್ರೋಕ್​ ನೀಡಿದ ಆಂಧ್ರ ಪೊಲೀಸರು
ವಿಜಯವಾಡ: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದ್ದ ಲೇಡಿ ಡಾನ್ ಅರುಣಾ ( Lady Don ) ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಸರಣಿ ಅಪರಾಧಗಳನ್ನು ಮಾಡುವ ಮೂಲಕ ಜನರಲ್ಲಿ ಭಯಭೀತಿ ಉಂಟು ಮಾಡಿದ ಆಕೆಯ ವಿರುದ್ಧ ಪೊಲೀಸರು ಪಿಡಿ ಕಾಯ್ದೆ ದಾಖಲಿಸಿದ್ದಾರೆ. ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ನೆಲ್ಲೂರು ಎಸ್ಪಿ ಅಜಿತಾ ಅವರು ಹೊರಡಿಸಿದ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಭಾಗವಾಗಿ ಲೇಡಿ ಡಾನ್​ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಆಂಧ್ರದಲ್ಲಿ ಲೇಡಿ ಡಾನ್​ ಎಂದೇ ಕುಖ್ಯಾತಿಯಾಗಿರುವ ಅರುಣಾ ವಿರುದ್ಧ ಕೋವೂರು, ನವಬುಪೇಟ ಮತ್ತು ವೇದಾಯಪಾಲಂನಂತಹ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆಯೇ ಹಲವಾರು ಪ್ರಕರಣಗಳು ದಾಖಲಾಗಿವೆ. ಆಕೆಯ ಆಟಾಟೋಪ ಒಂದೇ ಠಾಣೆಗೆ ಸೀಮಿತವಾಗಿಲ್ಲ, ವಿವಿಧ ಪೊಲೀಸ್ ಠಾಣೆಗಳಲ್ಲಿ ಆಕೆಯ ಅರಾಜಕತೆಯ ಮೇಲೆ ನಿಗಾ ಇಡಲಾಗಿದೆ. ರೌಡಿ ಶೀಟರ್‌ಗಳ ಚಲನವಲನಗಳ ಮೇಲೆ ತೀವ್ರ ನಿಗಾ ಇಟ್ಟಿರುವ ಜಿಲ್ಲಾಡಳಿತ, ಅರುಣಾಳನ್ನು ಪುನರಾವರ್ತಿತ ಅಪರಾಧಿ ಎಂದು ಗುರುತಿಸಿ ಪಿಡಿ ಕಾಯ್ದೆಯನ್ನು ಜಾರಿಗೊಳಿಸಿದೆ.

ಯಾರು ಈ ಅರುಣಾ?

ಅರುಣಾಳ ಪೂರ್ಣ ಹೆಸರು ನಿಡಿಗುಂಟ ಅರುಣಾ. ಈಕೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ "ಲೇಡಿ ಡಾನ್" ಎಂದು ಕುಖ್ಯಾತಳಾಗಿದ್ದಾಳೆ. ಆಕೆ ಗ್ಯಾಂಗ್‌ಸ್ಟರ್ ಎ. ಶ್ರೀಕಾಂತ್‌ನ ಪ್ರೇಯಸಿ ಹಾಗೂ ಫಿಯಾನ್ಸಿ. ಆಕೆಯ ಮೇಲೆ ವಂಚನೆ, ಬೆದರಿಕೆ, ಭೂ ಸೆಟಲ್‌ಮೆಂಟ್ ದಂಧೆ, ಗಂಜಾ ಕಳ್ಳಸಾಗಾಣೆ ಮತ್ತು ಇತರ ಅಪರಾಧಗಳ ಆರೋಪಗಳಿವೆ. ಸದ್ಯ ಆಕೆಯನ್ನು ಬಂಧಿಸಿರುವ ಪೊಲೀಸರು ಪಿಡಿ ಕಾಯ್ದೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕೆಯ ವಿಡಿಯೋಗಳು ಮತ್ತು ರಾಜಕೀಯ ನಾಯಕರೊಂದಿಗಿನ ಫೋಟೋಗಳು ವೈರಲ್ ಆಗಿ ದೊಡ್ಡ ವಿವಾದಕ್ಕೂ ಕಾರಣವಾಗಿವೆ.

ಪಿಡಿ ಕಾಯ್ದೆ ಯಾವಾಗ ವಿಧಿಸಲಾಗುತ್ತದೆ?

ಸಾಮಾನ್ಯವಾಗಿ, ಎರಡು ವರ್ಷಗಳ ಅವಧಿಯಲ್ಲಿ ಐದಕ್ಕೂ ಹೆಚ್ಚು ಗಂಭೀರ ಅಪರಾಧಗಳನ್ನು ಮಾಡುವ ಆರೋಪಿಗಳಿಗೆ ಪಿಡಿ ಕಾಯ್ದೆಯನ್ನು ಅನ್ವಯಿಸಬಹುದು. ಜನರು ಸಮಾಜಕ್ಕೆ ಅಪಾಯಕಾರಿಯಾಗಿದ್ದಾರೆ ಅಥವಾ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಅಪರಾಧಗಳನ್ನು ಮಾಡುವ ಸಾಧ್ಯತೆಯಿದೆ ಎಂದು ಪೊಲೀಸರಿಗೆ ಅನಿಸಿದಾಗ ಈ ಕಾನೂನನ್ನು ಬಳಸುತ್ತಾರೆ. ಅರುಣಾ ಪ್ರಕರಣದಲ್ಲಿಯೂ ಸಹ ಇದೇ ನಡೆದಿದೆ. ಆಕೆ ಪದೇಪದೆ ಕಾನೂನು ಮತ್ತು ಸುವ್ಯವಸ್ಥೆ ಹಾಳು ಮಾಡುವಂತಹ ಚಟುವಟಿಕೆಯಲ್ಲಿ ತೊಡಗಿರುವುದಿಂದ ಆಕೆಯ ವಿರುದ್ಧ ಕ್ರಮ ಜರುಗಿಸಲಾಗಿದೆ.

ಪಿಡಿ ಕಾಯ್ದೆಯಲ್ಲಿ ಒಂದು ವರ್ಷ ಜಾಮೀನಿಲ್ಲ

ಒಮ್ಮೆ ಪಿಡಿ ಕಾಯ್ದೆ ಜಾರಿಗೆ ಬಂದರೆ ಆರೋಪಿಗಳಿಗೆ ಜಾಮೀನು ಸಿಗುವುದು ಅತ್ಯಂತ ಕಷ್ಟಕರವಾಗುತ್ತದೆ. ಸಾಮಾನ್ಯ ಅಪರಾಧಗಳಂತೆ ಬೇಗ ಹೊರಬರಲು ಸಾಧ್ಯವಾಗುವುದಿಲ್ಲ. ಕನಿಷ್ಠ ಒಂದು ವರ್ಷ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಇರುತ್ತದೆ. ಜಾಮೀನು ಬೇಕಾದರೆ ಆರೋಪಿಗಳು ನೇರವಾಗಿ ಹೈಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಅಲ್ಲಿಯೂ ಸಹ, ಅಪರಾಧದ ಗಂಭೀರತೆಯ ಆಧಾರದ ಮೇಲೆ ನ್ಯಾಯಾಲಯವು ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ಸಾಮಾನ್ಯ ಜಾಮೀನು ಅರ್ಜಿಗಳು ಇಲ್ಲಿ ಕೆಲಸ ಮಾಡುವುದಿಲ್ಲ.
ಅಂದಹಾಗೆ, ಈ ಕಾಯ್ದೆಯಡಿಯಲ್ಲಿ ಬಂಧಿಸಲ್ಪಟ್ಟವರಿಗೆ ಜೈಲಿನಲ್ಲಿ ಸಂದರ್ಶಕರ ಸೌಲಭ್ಯವೂ ತುಂಬಾ ಸೀಮಿತವಾಗಿರುತ್ತದೆ. ಸಾಮಾನ್ಯ ಕೈದಿಗಳಿಗಿಂತ ಭಿನ್ನವಾಗಿ, ಅವರು ಬಯಸಿದ ಯಾರನ್ನೂ ಭೇಟಿಯಾಗಲು ಸಾಧ್ಯವಿಲ್ಲ. ಯಾರಾದರೂ ಭೇಟಿಯಾಗಲು ಬಯಸಿದರೆ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಅಧಿಕಾರಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಜಿಲ್ಲಾ ಎಸ್ಪಿ ಅಜಿತಾ ತೆಗೆದುಕೊಂಡ ಈ ನಿರ್ಧಾರವು ಕ್ರಿಮಿನಲ್ ಪ್ರವೃತ್ತಿಯನ್ನು ಹೊಂದಿರುವ ಜನರಿಗೆ ಖಡಕ್​ ಎಚ್ಚರಿಕೆ ಸಂದೇಶವಾಗಿದೆ. ಲೇಡಿ ಡಾನ್ ಅರುಣಾ ವಿರುದ್ಧ ಪಿಡಿ ಕಾಯ್ದೆಯನ್ನು ದಾಖಲಿಸುವ ಮೂಲಕ, ಜಿಲ್ಲೆಯಲ್ಲಿ ರೌಡಿಸಂಗೆ ಅವಕಾಶವಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಪೊಲೀಸರು ರವಾನಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net