ಉದ್ಧವ್ ಬಣದಲ್ಲಿ ಅಸಮಾಧಾನದ ಸ್ಫೋಟ!...ಆದಿತ್ಯ ಠಾಕ್ರೆಯ ಆ ವರ್ತನೆ ಈ ಬಂಡಾಯಕ್ಕೆ ಕಾರಣನಾ..? | Shiv Sena Crisis

 Shiv Sena Crisis
Shiv Sena Crisis
Published on
Shiv Sena Crisis: ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ 2022ರ ರಾಜಕೀಯ ಬೆಳವಣಿಗೆಗಳು ಮತ್ತೆ ಕಣ್ಣೆದುರು ಬಂದು ನಿಂತಂತಿವೆ. ನಾಲ್ಕು ವರ್ಷಗಳ ಹಿಂದೆ ಏಕನಾಥ್ ಶಿಂಧೆ ನೇತೃತ್ವದಲ್ಲಿ ನಡೆದ ಬಂಡಾಯದಿಂದಾಗಿ ಮಹಾ ವಿಕಾಸ್ ಅಘಾಡಿ (MVA) ಸರ್ಕಾರ ಪತನಗೊಂಡು ಉದ್ಧವ್ ಅಧಿಕಾರ ಕಳೆದುಕೊಂಡಿದ್ದರು. ಈಗ ಅದೇ ಮಾದರಿಯ ಶಿವಸೇನೆ ಬಂಡಾಯ 2.0 ಆರಂಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಶಿವಸೇನಾ (ಯುಬಿಟಿ) ಪಕ್ಷದ ಕನಿಷ್ಠ ಆರು ಲೋಕಸಭಾ ಸದಸ್ಯರು ದಿಢೀರ್ ನಾಪತ್ತೆಯಾಗಿದ್ದು, ಅವರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿವೆ ಎಂದು ಮೂಲಗಳು ತಿಳಿಸಿವೆ. ಈ ಸಂಸದರು ಇಂದು ದೆಹಲಿಯಲ್ಲಿ ಡಿಸಿಎಂ ಏಕನಾಥ್ ಶಿಂಧೆ ಹಾಗೂ ಅವರ ಪುತ್ರ ಶ್ರೀಕಾಂತ್ ಶಿಂಧೆ ಅವರನ್ನು ಭೇಟಿಯಾಗಲಿದ್ದು, ಬಳಿಕ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಗುಂಪು ಎಂದು ಪರಿಗಣಿಸುವಂತೆ ಮನವಿ ಮಾಡುವ ಸಾಧ್ಯತೆಯಿದೆ.
ಬಂಡಾಯದ ಮುಂಚೂಣಿಯಲ್ಲಿರುವ ಸಂಸದರಾದ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶ್‌ಮುಖ್, ನಾಗೇಶ್ ಪಾಟೀಲ್ ಅಷ್ಟೀಕರ್, ಓಮ್ರಾಜೆ ನಿಂಬಾಳ್ಕರ್, ಭಾವುಸಾಹೇಬ್ ವಾಕಚೌರೆ ಮತ್ತು ಸಂಜಯ್ ಜಾಧವ್ ಅವರ ಫೋನ್‌ಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಇವರ ಜೊತೆಗೆ ಮತ್ತೊಬ್ಬ ಸಂಸದ ರಾಜಾಭಾವಿ ವಾಜೆ ಕೂಡ ಕೈಜೋಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇವರೆಲ್ಲರೂ ಮೊದಲು ಪ್ರತ್ಯೇಕ ಬಣ ರಚಿಸಿಕೊಂಡು, ಬಳಿಕ ಶಿಂಧೆ ನೇತೃತ್ವದ ಅಸಲಿ ಶಿವಸೇನೆ ಜೊತೆ ವಿಲೀನಗೊಳ್ಳುವ ಆಲೋಚನೆಯಲ್ಲಿದ್ದಾರೆ.

ಉದ್ಧವ್ ವಿರುದ್ಧ ಸಂಸದರ ಅಸಮಾಧಾನವೇಕೆ..?

ಮೂಲಗಳ ಪ್ರಕಾರ, ಈ ರೆಬೆಲ್ ಸಂಸದರು ಕಳೆದ ಕೆಲವು ಸಮಯದಿಂದ ಉದ್ಧವ್ ಠಾಕ್ರೆ ಅವರ ನಾಯಕತ್ವದ ಶೈಲಿಯ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ರಾಜಕೀಯ ಸವಾಲುಗಳಿದ್ದರೂ ಉದ್ಧವ್ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಬೆಂಬಲ ನೀಡಲಿಲ್ಲ ಎಂಬುದು ಸಂಸದರ ದೂರು. ಉದ್ಧವ್​ ಪುತ್ರ, ಪಕ್ಷದ ಯುವ ನಾಯಕ ಆದಿತ್ಯ ಠಾಕ್ರೆ ಅವರನ್ನು ಭೇಟಿ ಮಾಡಲು ಹಲವು ಬಾರಿ ಪ್ರಯತ್ನಿಸಿದರೂ ಸಮಯ ಸಿಗುತ್ತಿರಲಿಲ್ಲ ಎಂದು ಈ ಭಿನ್ನಮತಿಯರು ಆರೋಪಿಸಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಪದೇ ಪದೇ ವಿನಂತಿಸಿದರೂ ಪಕ್ಷದಿಂದ ಯಾವುದೇ ಆರ್ಥಿಕ ಅಥವಾ ಸಾಂಸ್ಥಿಕ ಬೆಂಬಲ ಸಿಕ್ಕಿರಲಿಲ್ಲ ಎಂದು ಸಂಸದರು ಆಕ್ರೋಶಗೊಂಡಿದ್ದಾರೆ.

ಉದ್ಧವ್ ಕ್ಯಾಂಪ್‌ನಿಂದ ಕಾನೂನು ಹೋರಾಟದ ಸಿದ್ಧತೆ

ಪಕ್ಷವನ್ನು ಉಳಿಸಿಕೊಳ್ಳಲು ಉದ್ಧವ್ ನಿಷ್ಠಾವಂತರಾದ ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ಸಂಜಯ್ ರಾವತ್ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಸದ್ಯಕ್ಕೆ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂದು ರಾವತ್ ಬಿಂಬಿಸುತ್ತಿದ್ದರೂ, ಒಳಗೊಳಗೆ ರೆಬೆಲ್ ಸಂಸದರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲು ಉದ್ಧವ್ ಬಣ ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪಕ್ಷದ ಸಂಸದರ ತುರ್ತು ಸಭೆಯನ್ನೂ ಕರೆಯಲಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net