

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CRPF) ಯೋಧರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ದಿಢೀರ್ ಗುಂಡಿನ ದಾಳಿಯ ( Kulgam terror attack ) ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯವು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪರಿಸ್ಥಿತಿಯ ಪರಾಮರ್ಶೆಗಾಗಿ ತುರ್ತು ಉನ್ನತ ಮಟ್ಟದ ಸಭೆಯನ್ನು ಕರೆದಿದೆ.
ಬುಧವಾರ ಮಧ್ಯಾಹ್ನ ಕುಲ್ಗಾಮ್‌ನ ಭದ್ರತಾ ತಪಾಷಣಾ ಚೌಕಿ (Check Post) ಬಳಿ ನಡೆದ ಈ ದಾಳಿಯಲ್ಲಿ ಮೂವರು ಸಿಆರ್‌ಪಿಎಫ್ ಯೋಧರು ತೀವ್ರವಾಗಿ ಗಾಯಗೊಂಡಿದ್ದು, ಘಟನೆಯ ಗಂಭೀರತೆಯನ್ನು ಪರಿಗಣಿಸಿ ಗೃಹ ಸಚಿವಾಲಯವು ಭದ್ರತಾ ಪಡೆಗಳ ಮುಂದಿನ ಕ್ರಮ ಹಾಗೂ ಕಣಿವೆಯ ಭದ್ರತಾ ವ್ಯವಸ್ಥೆಯ ಕುರಿತು ಸುದೀರ್ಘ ಚರ್ಚೆ ನಡೆಸಲು ಮುಂದಾಗಿದೆ.
ಬುಧವಾರ ಮಧ್ಯಾಹ್ನ ಸುಮಾರು 2:45 ರ ವೇಳೆಗೆ ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಯ ಮೇಲೆ ಏಕಾಏಕಿ ಗುಂಡಿನ ಮಳೆಗರೆದು ತಕ್ಷಣವೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಈ ಭೀಕರ ದಾಳಿಯಲ್ಲಿ ರಾಕೇಶ್ ದಾಸ್, ಸಂತೋಷ್ ಚಂದ್ರು ಮತ್ತು ಸೋಮ್‌ವೀರ್ ಸಿಂಗ್ ಎಂಬ ಮೂವರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಅನಂತ್‌ನಾಗ್ ಹುದ್ದೆಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಯೋಧರಲ್ಲಿ ಒಬ್ಬರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಈ ಆಘಾತಕಾರಿ ದಾಳಿಯ ಬೆನ್ನಲ್ಲೇ ಇಡೀ ಕುಲ್ಗಾಮ್ ಪ್ರದೇಶದಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ.
ದಾಳಿ ನಡೆಸಿ ಪರಾರಿಯಾಗಿರುವ ಭಯೋತ್ಪಾದಕರಿಗಾಗಿ ಗಡಿಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಈ ಉನ್ನತ ಮಟ್ಟದ ಸಭೆಯು ಕಣಿವೆಯಲ್ಲಿ ಉಗ್ರರ ಮಟ್ಟಹಾಕಲು ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸೂಚನೆ ನೀಡಿದೆ, (ಏಜೆನ್ಸೀಸ್).