ಕೃತಿ ಸನನ್ ‘ರಾಖಿ’ ಆ್ಯಡ್‌ಗೆ ಕಂಗನಾ ಕಿಡಿ! ‘ಬಿಕಿನಿ’ ಜಿಬ್‌ಗೆ ಬೆಚ್ಚಿಬಿದ್ದ ಬ್ರ್ಯಾಂಡ್, ಜಾಹೀರಾತೇ ಡೌನ್! | Kriti Sanon Ad controversy

ಕೃತಿ ಸನನ್ ರಕ್ಷಾ ಬಂಧನ್ ಜಾಹೀರಾತಿಗೆ ವಿವಾದ
ಕೃತಿ ಸನನ್ ರಕ್ಷಾ ಬಂಧನ್ ಜಾಹೀರಾತಿಗೆ ವಿವಾದ
Published on

ಪ್ರಮುಖ ಮುಖ್ಯಾಂಶಗಳು

  • ಕೃತಿ ಸನನ್ ರಕ್ಷಾ ಬಂಧನ್ ಜಾಹೀರಾತು ವಿವಾದ
  • ಕೃತಿ ಉಡುಪಿನ ಬಗ್ಗೆ ಕಂಗನಾ ರಣಾವತ್ ಟೀಕೆ
  • ನಟಿ ಕೃತಿ ಸನನ್​ಗೆ ರಾಹುಲ್ ಗಾಂಧಿ ಬೆಂಬಲ
Kriti Sanon Ad controversy: ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಆಭರಣ ಬ್ರ್ಯಾಂಡ್‌ವೊಂದು ಬಿಡುಗಡೆ ಮಾಡಿದ್ದ ನಟಿ ಕೃತಿ ಸನನ್ ಅವರ ಜಾಹೀರಾತು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಕೃತಿ ಧರಿಸಿದ್ದ ಉಡುಪಿನ ಬಗ್ಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ, ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಕೂಡ ಕೃತಿಯನ್ನು ಟೀಕಿಸಿದ್ದರು. ವಿವಾದ ಜೋರಾಗುತ್ತಿದ್ದಂತೆ ಆ ಜಾಹೀರಾತನ್ನು ಬ್ರ್ಯಾಂಡ್ ತೆಗೆದುಹಾಕಿದೆ.
ಇನ್ನು, ಜಾಹೀರಾತಿನಲ್ಲಿ ಕೃತಿ ಸನನ್ ಐವರಿ ಬಣ್ಣದ ಬ್ರಾಲೆಟ್ ಮಾದರಿಯ ಬ್ಲೌಸ್, ಕೇಪ್ ಹಾಗೂ ಡ್ರೇಪ್ ಮಾಡಿದ ಸ್ಕರ್ಟ್ ಧರಿಸಿದ್ದರು. ರಕ್ಷಾ ಬಂಧನ್‌ನಂತಹ ಸಂಪ್ರದಾಯಿಕ ಹಬ್ಬದ ಜಾಹೀರಾತಿಗೆ ಈ ರೀತಿಯ ಸ್ಟೈಲಿಂಗ್ ಯಾಕೆ ಬೇಕಿತ್ತು ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಎತ್ತಿದ್ದರು. ಇನ್ನೊಂದೆಡೆ, ಹಲವರು ಕೃತಿಯ ಫ್ಯಾಷನ್ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.

ಕಂಗನಾ ‘ಬಿಕಿನಿ’ ಕಾಮೆಂಟ್‌ನಿಂದ ಕಿರಿಕ್​ 

ಶುರು

 

ವಿವಾದಕ್ಕೆ ಕಂಗನಾ ರಣಾವತ್ ಎಂಟ್ರಿ ಕೊಟ್ಟಿದ್ದು ಮತ್ತಷ್ಟು ಚರ್ಚೆಗೆ ಕಾರಣವಾಯಿತು. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕೃತಿ ಅವರ ಉಡುಪಿನ ಬಗ್ಗೆ ಪ್ರಶ್ನಿಸಿದ ಕಂಗನಾ, ಸಹೋದರನಿಗೆ ರಾಖಿ ಕಟ್ಟುವ ಸಂದರ್ಭದಲ್ಲಿ ಇಂತಹ ಉಡುಪು ಯಾಕೆ ಎಂದು ಪ್ರಶ್ನಿಸಿದ್ದರು. ಜಾಹೀರಾತನ್ನು ಅವರು ‘ಉದ್ದೇಶಪೂರ್ವಕವಾಗಿಯೇ ವಿಚಿತ್ರವಾಗಿ ಕಾಣುವಂತೆ ಮಾಡಿದ್ದಾರೆ’ ಎಂದೂ ಟೀಕಿಸಿದ್ದರು.

ಹಬ್ಬದ ಸಾರ ಬಟ್ಟೆಯಲ್ಲಿಲ್ಲ

ಇದಕ್ಕೆ ಕೃತಿ ಸನನ್ ಕೂಡ ಖಡಕ್ ಆಗಿಯೇ ಪ್ರತಿಕ್ರಿಯಿಸಿದರು. ಹಬ್ಬದ ಅರ್ಥವನ್ನು ಮಹಿಳೆಯೊಬ್ಬಳ ಬಟ್ಟೆಯ ಮೂಲಕ ಅಳೆಯಬಾರದು ಎಂದ ಅವರು, ಹಬ್ಬದ ನಿಜವಾದ ಸಾರ ಬಟ್ಟೆಯಲ್ಲಿ ಅಲ್ಲ, ಅದರ ಹಿಂದಿರುವ ಭಾವನೆ ಮತ್ತು ಸಂಪ್ರದಾಯದ ಅರ್ಥದಲ್ಲಿದೆ ಎಂದಿದ್ದರು. ‘ಮಹಿಳೆಯರು ಏನು ಧರಿಸಬೇಕು ಎಂದು ಹೇಳುವುದನ್ನು ನಾವು ಯಾವಾಗ ನಿಲ್ಲಿಸುತ್ತೇವೆ?’ ಎಂದು ಪ್ರಶ್ನಿಸಿದ ಕೃತಿ, ಸಂಸ್ಕೃತಿ ಮತ್ತು ಸಂಪ್ರದಾಯ ಹೃದಯದಲ್ಲಿರಬೇಕು, ಮಹಿಳೆಯರ ಉಡುಪಿನಲ್ಲಿ ಅಲ್ಲ ಎಂದಿದ್ದರು.

ಕೃತಿಗೆ ರಾಹುಲ್ ಗಾಂಧಿ ಬೆಂಬಲ

ಕೃತಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಾತ್​ ನೀಡಿದ್ದರು. ಮಹಿಳೆ ಏನು ಧರಿಸಬೇಕು, ಏನು ಮಾಡಬೇಕು ಮತ್ತು ಎಲ್ಲಿಗೆ ಹೋಗಬೇಕು ಎಂಬುದು ಆಕೆಯ ಸ್ವಂತ ಆಯ್ಕೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಕೃತಿಯ ಪೋಸ್ಟ್ ಹಂಚಿಕೊಂಡು, ಮಹಿಳೆಯರು ತಮ್ಮ ಸ್ವಾತಂತ್ರ್ಯವನ್ನು ಬಳಸಿಕೊಂಡಾಗ ಅವರನ್ನು ಟ್ರೋಲ್ ಮಾಡುವುದನ್ನು ನಿಲ್ಲಿಸಬೇಕು ಎಂದರು. ಅಲ್ಲದೆ ಅವರು ಮಹಿಳಾ ಸ್ವಾತಂತ್ರ್ಯ, ಪಿತೃಪ್ರಧಾನ ಮನಸ್ಥಿತಿಯ ಬಗ್ಗೆ ಮಾತಾಡಿದ್ದಾರೆ.

ಮತ್ತೆ ಕಂಗನಾ ಕೌಂಟರ್

ರಾಹುಲ್ ಗಾಂಧಿ ಕೃತಿಗೆ ಬೆಂಬಲ ನೀಡಿದ ಬಳಿಕ ಕಂಗನಾ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಪೋಸ್ಟ್‌ವೊಂದನ್ನು ಹಂಚಿಕೊಂಡು, ರಾಹುಲ್ ಗಾಂಧಿಯವರ ‘ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿ’ ಸಂದೇಶವನ್ನು ಟೀಕಿಸಿದರು. ಈ ಮೂಲಕ ಕೃತಿ ಸನನ್ ಜಾಹೀರಾತಿನ ವಿವಾದಕ್ಕೆ ರಾಜಕೀಯ ಬಣ್ಣವೂ ಜೋರಾಯಿತು.

ಕೊನೆಗೆ ಜಾಹೀರಾತು ವಾಪಸ್

ಸೋಷಿಯಲ್ ಮೀಡಿಯಾದಲ್ಲಿ ವಿವಾದ ತಾರಕಕ್ಕೇರಿದ ಬಳಿಕ ಆಭರಣ ಬ್ರ್ಯಾಂಡ್ ಜಾಹೀರಾತನ್ನು ತೆಗೆದುಹಾಕಿದೆ. ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಹಬ್ಬಗಳ ಬಗ್ಗೆ ತಮಗೆ ಅತ್ಯಂತ ಗೌರವವಿದೆ ಎಂದು ಬ್ರ್ಯಾಂಡ್ ಸ್ಪಷ್ಟಪಡಿಸಿದೆ. ಜಾಹೀರಾತಿನಿಂದ ಸಮಾಜದ ಯಾವುದಾದರೂ ವರ್ಗದ ಭಾವನೆಗಳಿಗೆ ಒಂದು ವೇಳೆ ನೋವಾಗಿದ್ದರೆ, ಅದು ತಮ್ಮ ಉದ್ದೇಶವಲ್ಲ ಎಂದು ಬ್ರ್ಯಾಂಡ್ ಹೇಳಿದೆ.
ಒಟ್ಟಿನಲ್ಲಿ, ಕೃತಿ ಸನನ್ ಅವರ ಒಂದು ರಕ್ಷಾ ಬಂಧನ್ ಜಾಹೀರಾತಿನಿಂದ ಶುರುವಾದ ಈ ವಿವಾದ ಈಗ ಫ್ಯಾಷನ್ ವರ್ಸಸ್ ಸಂಪ್ರದಾಯ, ಮಹಿಳೆಯರ ಉಡುಪು, ವೈಯಕ್ತಿಕ ಸ್ವಾತಂತ್ರ್ಯಕುರಿತ ದೊಡ್ಡ ಚರ್ಚೆಯಾಗಿ ಬದಲಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net