ಕೊನೆಯುಸಿರಲ್ಲೂ ಸಾರ್ಥಕತೆ ಮೆರೆದ ಕೌನ್ಸಿಲರ್​: ಐವರ ಬಾಳಲ್ಲಿ ಬೆಳಕಾದ ಅಜಿತ್​ ಕುಮಾರ್​ | Organ Donation

ಸಾವಿನಲ್ಲೂ ಸಾರ್ಥಕತೆ ಮೆರೆದ ಬಿ. ಅಜಿತ್ ಕುಮಾರ್​
ಸಾವಿನಲ್ಲೂ ಸಾರ್ಥಕತೆ ಮೆರೆದ ಬಿ. ಅಜಿತ್ ಕುಮಾರ್​
Published on

ಪ್ರಮುಖ ಮುಖ್ಯಾಂಶಗಳು

  • ಕೊನೆಯುಸಿರಲ್ಲೂ ಐವರಿಗೆ ಹೊಸ ಬದುಕು ನೀಡಿ ಸಾರ್ಥಕತೆ ಮರೆದ ಅಧಿಕಾರಿ
  • ಕೊಲ್ಲಂ ಕಾರ್ಪೊರೇಷನ್‌ನ ಕೌನ್ಸಿಲರ್ ಬಿ. ಅಜಿತ್ ಕುಮಾರ್ (53) ರಿಯಲ್ ಹೀರೋ
  • ಐವರಿಗೆ ತಮ್ಮ ಅಂಗಾಂಗ ದಾನ ಮಾಡಿದ ಅಜಿತ್​
ಕೊಲ್ಲಂ: ಕೇರಳದಲ್ಲಿ ಮತ್ತೊಂದು ಅಂಗಾಂಗ ದಾನ (Organ Donation) ಪ್ರಕರಣ ಬೆಳಕಿಗೆ ಬಂದಿದ್ದು, ಕೊಲ್ಲಂ ಕಾರ್ಪೊರೇಷನ್‌ನ ಕೌನ್ಸಿಲರ್ ಬಿ. ಅಜಿತ್ ಕುಮಾರ್ (53) ಕೊನೆಯುಸಿರಲ್ಲೂ ಐವರಿಗೆ ಹೊಸ ಬದುಕು ನೀಡಿ ಸಾರ್ಥಕತೆ ಮರೆದಿದ್ದಾರೆ.
ಕೊಲ್ಲಂ ಕಾರ್ಪೊರೇಷನ್‌ನ ಕ್ರೀಡೆ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿದ್ದ ಅಜಿತ್ ಕುಮಾರ್ ಅವರಿಗೆ ಪಾರ್ಶ್ವವಾಯು ಕಾಡಿತ್ತು. ಹೀಗಾಗಿ, ಕೆಲವು ದಿನಗಳಿಂದ ಕೊಲ್ಲಂನ ತಿರುವಾಂಕೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆಗೆ ಒಳಪಟ್ಟಿದ್ದರು. ಐಸಿಯುನಲ್ಲಿದ್ದ ಅವರ ಮಿದುಳು ನಿಷ್ಕ್ರಿಯಗೊಂಡ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಉಸಿರು ಚೆಲ್ಲಿದ್ದಾರೆ.
ಬುಧವಾರ ಮುಂಜಾನೆ ಅವರ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ದೃಢಪಡಿಸಿದರು. ಬಳಿಕ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ ನಂತರ, ಕೇರಳ ಸರ್ಕಾರದ ಮೃತಸಂಜೀವಿನಿ ಅಂಗಾಂಗ ದಾನ ಕಾರ್ಯಕ್ರಮದ ಮೂಲಕ ಸಜಿತ್​ ಅವರ ಬಹುಮುಖ್ಯ ಅಂಗಗಳನ್ನು ದಾನ ಮಾಡಲು ನಿರ್ಧರಿಸಲಾಗಿದೆ. ಅಜಿತ್ ಅವರು ಸಾವಿನ ನಂತರವೂ ತಮ್ಮ ಅಂಗಗಳನ್ನು ದಾನ ಮಾಡುವ ಮೂಲಕ ಐವರು ರೋಗಿಗಳಲ್ಲಿ ಜೀವಿಸುತ್ತಾರೆ ಎಂದು ಕುಟುಂಬಸ್ಥರು ಭಾವುಕರಾಗಿ ನುಡಿದಿದ್ದಾರೆ.
ಅಜಿತ್​ ಅವಿವಾಹಿತರಾಗಿದ್ದರು ಎಂದು ಅವರ ಸಹೋದರರಾದ ಬಿ. ಸುರೇಶ್ ಕುಮಾರ್ ಮತ್ತು ಬಿ. ಅಜಿತಾ ಕುಮಾರಿ ತಿಳಿಸಿದ್ದಾರೆ. ತಿರುವಾಂಕೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಪಡೆದ ಅಂಗಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಕಸಿ ಮಾಡಲಾಗುತ್ತದೆ ಎನ್ನಲಾಗಿದೆ. ಅಜಿತ್​ ಅವರ ಲಿವರ್​ ತಿರುವನಂತಪುರದ ಕಿಮ್ಸ್ ಆಸ್ಪತ್ರೆಗೆ, ಒಂದು ಮೂತ್ರಪಿಂಡ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ, ಇನ್ನೊಂದನ್ನು ಕೊಲ್ಲಂನ ತಿರುವಾಂಕೂರು ಆಸ್ಪತ್ರೆಗೆ ಮತ್ತು ಅವರ ಎರಡು ಕಣ್ಣಿನ ಕಾರ್ನಿಯಾಗಳನ್ನು ಪ್ರಾದೇಶಿಕ ನೇತ್ರಶಾಸ್ತ್ರ ಸಂಸ್ಥೆಗೆ ದಾನ ಮಾಡಲಾಗುತ್ತದೆ ಎಂದು ವರದಿಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net