ಕಾರಿನ ತುಂಬಾ 3400 ಮುತ್ತಿನ ಗುರುತು... ಕಿಸ್​ ಮಾಡಿದ್ದು ಗರ್ಲ್​ಫ್ರೆಂಡ್ ಸಿಕ್ಕಿಬಿದ್ದಿದ್ದು ಬಾಯ್​ಫ್ರೆಂಡ್​! ಕೊನೆಗೆ ಪೊಲೀಸರ ಮುಂದೆ ಕಣ್ಣೀರು...Kissing Car

ಕಾರಿನ ತುಂಬಾ 3400 ಮುತ್ತಿನ ಗುರುತು... ಕಿಸ್​ ಮಾಡಿದ್ದು ಗರ್ಲ್​ಫ್ರೆಂಡ್ ಸಿಕ್ಕಿಬಿದ್ದಿದ್ದು ಬಾಯ್​ಫ್ರೆಂಡ್​! ಕೊನೆಗೆ ಪೊಲೀಸರ ಮುಂದೆ ಕಣ್ಣೀರು...Kissing Car
ಕಾರಿನ ತುಂಬಾ 3400 ಮುತ್ತಿನ ಗುರುತು... ಕಿಸ್​ ಮಾಡಿದ್ದು ಗರ್ಲ್​ಫ್ರೆಂಡ್ ಸಿಕ್ಕಿಬಿದ್ದಿದ್ದು ಬಾಯ್​ಫ್ರೆಂಡ್​! ಕೊನೆಗೆ ಪೊಲೀಸರ ಮುಂದೆ ಕಣ್ಣೀರು...Kissing Car
Published on

ಪ್ರಮುಖ ಮುಖ್ಯಾಂಶಗಳು

  • ಗ್ವಾಲಿಯರ್‌ನಲ್ಲಿ ಗರ್ಲ್​ಫ್ರೆಂಡ್ ಲಿಪ್‌ಸ್ಟಿಕ್ ಮುತ್ತಿನಿಂದ ಕಾರನ್ನು ಸಿಂಗರಿಸಿದ ಯುವಕ
  • ಮೂರೂವರೆ ಗಂಟೆಗಳ ಕಾಲ ಶ್ರಮಪಟ್ಟು ಕಾರಿನ ಮೇಲೆ ಮೂಡಿಸಿದ 3400 ಮುತ್ತುಗಳು
  • ಸಾಮಾಜಿಕ ಜಾಲತಾಣದಲ್ಲಿ 55 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದ ಕಿಸ್ಸಿಂಗ್ ಕಾರ್ ರೀಲ್ಸ್
  • ರೀಲ್ಸ್ ಹುಚ್ಚಾಟದಿಂದ ಸಂಚಾರಿ ಪೊಲೀಸರ ಅತಿಥಿಯಾಗಿ ಭಾರಿ ದಂಡ ತೆತ್ತ ಮಾಲೀಕ
  • ಠಾಣೆ ಆವರಣದಲ್ಲೇ ಸ್ವತಃ ಕಾರಿನ ಮೇಲಿನ ಲಿಪ್‌ಸ್ಟಿಕ್ ಗುರುತುಗಳನ್ನು ಅಳಿಸಿದ ಯುವಕ
ಭೋಪಾಲ್​: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಹುಚ್ಚಿನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ ಮೂಲದ ಯುವಕನೊಬ್ಬ ತನ್ನ ಮಾರುತಿ ಸ್ವಿಫ್ಟ್ ಕಾರಿಗೆ ತನ್ನ ಗರ್ಲ್​ಫ್ರೆಂಡ್​ನಿಂದ ಬರೋಬ್ಬರಿ 3,400 ಮುತ್ತುಗಳನ್ನು ಕೊಡಿಸಿ 'ಕಿಸ್ಸಿಂಗ್ ಕಾರ್' ( Kissing Car ) ಆಗಿ ಬದಲಾಯಿಸಿದ ವಿಚಿತ್ರ ಘಟನೆ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ಆದರೆ, ಯುವಕ ಮಾತ್ರ ತಾನು ಮಾಡಿದ ಯಡವಟ್ಟಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಭಾರಿ ದಂಡ ತೆತ್ತಿದ್ದಾನೆ.
ಮೂರೂವರೆ ಗಂಟೆಗಳ ಕಾಲ ಶ್ರಮಪಟ್ಟು, 800 ರಿಂದ 900 ರೂ. ಮೌಲ್ಯದ ಲಿಪ್‌ಸ್ಟಿಕ್ ಖರ್ಚು ಮಾಡಿ ಸಿದ್ಧಪಡಿಸಿದ ಈ ವಿಚಿತ್ರ ಕಾರಿನ ರೀಲ್ಸ್ 5.5 ಮಿಲಿಯನ್ ವೀಕ್ಷಣೆಗಳನ್ನು ಪಡೆದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್‌ ಮಾಡಿತ್ತು. ಆದರೆ, ಅದೇ ವೈರಲ್​ ವಿಡಿಯೋ ಯುವಕನನನ್ನು ಗ್ವಾಲಿಯರ್​ ಸಂಚಾರಿ ಪೊಲೀಸರ ಬಲೆಗೆ ಬೀಳಿಸಿತು. ವೈರಲ್​ ರೀಲ್ಸ್​ನಿಂದಾಗಿ ಪೊಲೀಸರ ವಶವಾದ ಕಾರಿಗೆ ಬರೋಬ್ಬರಿ 5,500 ರೂ. ದಂಡ ವಿಧಿಸಲಾಗಿದ್ದು, ಸ್ವತಃ ಕಾರಿನ ಮಾಲೀಕನೇ ತನ್ನ ಕೈಯಿಂದಲೇ ಕಾರಿನ ಮೇಲಿದ್ದ ಸಾವಿರಾರು ಲಿಪ್‌ಸ್ಟಿಕ್ ಗುರುತುಗಳನ್ನು ಅಳಿಸಿ ಪಾಠ ಕಲಿತ ಅಚ್ಚರಿಯ ಪ್ರಸಂಗವೂ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಗ್ವಾಲಿಯರ್​ ಸಂಚಾರಿ ಪೊಲೀಸರು ಅಲರ್ಟ್​

ಪ್ರಕರಣದ ವಿವರಣೆಗೆ ಬರುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ರಾತ್ರೋರಾತ್ರಿ ವೈರಲ್ ಆಗಬೇಕೆಂಬ ಹಂಬಲಕ್ಕೆ ಬಿದ್ದ ಯುವಕ, ತನ್ನ ಮಾರುತಿ ಸ್ವಿಫ್ಟ್ ಕಾರಿಗೆ ಲಿಪ್‌ಸ್ಟಿಕ್‌ ಬಳಸಿ, ಗರ್ಲ್​ಫ್ರೆಂಡ್​ ತುಟಿಯಿಂದ ಸಾವಿರಾರು ಮುತ್ತಿನ ಗುರುತುಗಳನ್ನು ಒತ್ತಿಸಿ ನಗರದ ರಸ್ತೆಯಲ್ಲಿ ವೇಗವಾಗಿ ಚಲಾಯಿಸಿದ ವಿಡಿಯೋ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿತು. ಕಾರಿನ ಇಡೀ ಮೈಯನ್ನು ಸಂಪೂರ್ಣವಾಗಿ ಮುತ್ತಿನ ಗುರುತುಗಳಿಂದ ತುಂಬಿಸಿದ್ದ. ಯುವಕನ ಗರ್ಲ್​ಫ್ರೆಂಡ್​ ಸುಮಾರು 3 ಗಂಟೆಗಳ ಕಾಲ ಕಾರಿಗೆ ಚುಂಬಿಸಿದ್ದಳು. ಇಡೀ ಕಾರು ಕೆಂಪು ಮುತ್ತುಗಳಿಂದ ಡಿಸೈನ್​ ಆಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುವ ಮೂಲಕ ನೆಟ್ಟಿಗರ ಗಮನವನ್ನು ಸೆಳೆಯಿತು. ಕೇವಲ ನೆಟ್ಟಿಗರ ಕಣ್ಣಿಗೆ ಮಾತ್ರವಲ್ಲ, ಗ್ವಾಲಿಯರ್​ ಸಂಚಾರಿ ಪೊಲೀಸರ ಕಣ್ಣಿಗೂ ಬಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆ ಕಾರನ್ನು ಪತ್ತೆಹಚ್ಚಲು ವಿಶೇಷ ಕಾರ್ಯಾಚರಣೆ ಆರಂಭಿಸಿ, ವಾಹನದ ಜಾಡನ್ನು ಹಿಡಿದು ಹೊರಟರು.

ವಿಭಿನ್ನ ರೀಲ್ಸ್ ಹುಚ್ಚು​

ಕೊನೆಗೆ ಈ ತನಿಖೆಯು ಗ್ವಾಲಿಯರ್‌ನ ಥಾಟಿಪುರ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಸಂಚಾರಿ ಪೊಲೀಸ್ ತಂಡವು ಆ ವಿಶಿಷ್ಟ ಕಾರನ್ನು ಪತ್ತೆಹಚ್ಚಿ ನೇರವಾಗಿ ಪೊಲೀಸ್ ಠಾಣೆಗೆ ಎಳೆತಂದಿತು. ಈ ವೇಳೆ ಕಾರಿನ ಮಾಲೀಕ ಆದಿತ್ಯ ಸಿಕರ್ವಾರ್ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆಸಲಾಗಿದ್ದು, ಆಗ ಈ ವೈರಲ್ ಸಾಹಸದ ಹಿಂದಿನ ಅಚ್ಚರಿಯ ಕಥೆ ಹೊರಬಿತ್ತು. ತನ್ನ ಗರ್ಲ್​ಫ್ರೆಂಡ್​ ಸಹಾಯದಿಂದ ಕಾರಿನ ಮೇಲೆ ಸುಮಾರು 3,400 ಲಿಪ್‌ಸ್ಟಿಕ್ ಮುತ್ತಿನ ಗುರುತುಗಳನ್ನು ಮೂಡಿಸಲು ಬರೋಬ್ಬರಿ ಮೂರೂವರೆ ಗಂಟೆಗಳ ಕಾಲ ಶ್ರಮಿಸಿರುವುದಾಗಿ ಆದಿತ್ಯ ಬಾಯಿಬಿಟ್ಟರು. ಸಾಮಾಜಿಕ ಜಾಲತಾಣದ ಟ್ರೆಂಡ್ ಅನ್ನು ಅನುಸರಿಸಿ ತುಂಬಾ ವಿಭಿನ್ನವಾಗಿ ರೀಲ್ಸ್​ ಸೃಷ್ಟಿಸಿ ಅದನ್ನು ವೈರಲ್ ಮಾಡುವುದೇ ಈ ಹುಚ್ಚಾಟದ ಏಕೈಕ ಉದ್ದೇಶವಾಗಿತ್ತು ಎಂದು ಆದಿತ್ಯ ಸಿಕರ್ವಾರ್​ ಒಪ್ಪಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂ ಬ್ಲಾಕ್​ ಮಾಡಿ ಎಸ್ಕೇಪ್​

ಪೊಲೀಸರು ಕ್ರಮ ಕೈಗೊಳ್ಳುವಷ್ಟರಲ್ಲಿ ಈ ರೀಲ್ಸ್ ಬರೋಬ್ಬರಿ 55 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿತ್ತು. ಈ ಘಟನೆ ನಡೆದಾಗ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೇವಲ 2,952 ಫಾಲೋವರ್ಸ್​ ಮತ್ತು 64 ಪೋಸ್ಟ್‌ಗಳನ್ನು ಹೊಂದಿದ್ದ ಆದಿತ್ಯ, ಪೊಲೀಸ್ ತನಿಖೆ ಮತ್ತು ಸಂಕಷ್ಟ ಎದುರಾದ ಬೆನ್ನಲ್ಲೇ ತನ್ನ ಆ ಇನ್‌ಸ್ಟಾಗ್ರಾಂ ಖಾತೆಯನ್ನೇ ಬ್ಲಾಕ್ ಮಾಡಿ ನಾಪತ್ತೆಯಾದರು. ಪಟೇಲ್ ನಗರ ಹಾಗೂ ಸಿಟಿ ಸೆಂಟರ್ ಪ್ರದೇಶದಿಂದ ಲಿಪ್‌ಸ್ಟಿಕ್ ಗುರುತುಗಳಿದ್ದ ಸ್ವಿಫ್ಟ್ ಕಾರು ಅತಿವೇಗವಾಗಿ ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಂಚಾರಿ ಪೊಲೀಸ್ ಠಾಣೆಯ ಇನ್‌ಚಾರ್ಜ್ ಅಭಿಷೇಕ್ ರಘುವಂಶಿ ನೇತೃತ್ವದ ತಂಡ ಕಾರ್ಯಾಚರಣೆಗಿಳಿಯಿತು. ವಿಡಿಯೋದ ಜಾಡನ್ನು ಹಿಡಿದು ಹೊರಟ ಪೊಲೀಸರು ತಾಂತ್ರಿಕ ಮಾಹಿತಿ ಕಲೆಹಾಕುವ ಮೂಲಕ ಕೊನೆಗೂ ಥಾಟಿಪುರ ಪ್ರದೇಶದಲ್ಲಿ ಆ ಕಾರನ್ನು ಹಾಗೂ ಚಾಲಕನನ್ನು ಯಶಸ್ವಿಯಾಗಿ ಪತ್ತೆಹಚ್ಚಿದರು.

ದಂಡದ ಜತೆಗೆ ಕಾರು ಕ್ಲೀನ್ ಶಿಕ್ಷೆ​

ಆದಿತ್ಯರವರ ಈ ಹುಚ್ಚಾಟಕ್ಕೆ ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಸುಮಾರು 5,500 ರೂ.ಗಳ ಭಾರಿ ದಂಡವನ್ನು ವಿಧಿಸಲಾಯಿತು. ತಾನು ಮಾಡಿದ ತಪ್ಪಿನ ಅರಿವಾದ ಮೇಲೆ ಪಶ್ಚಾತಾಪಪಟ್ಟ ಆದಿತ್ಯ, ಪೊಲೀಸ್ ಠಾಣೆಯ ಆವರಣದಲ್ಲೇ ಸ್ವತಃ ತಾವೇ ನಿಂತು ಕಾರಿನ ಮೇಲಿದ್ದ ಸಾವಿರಾರು ಲಿಪ್‌ಸ್ಟಿಕ್ ಗುರುತುಗಳನ್ನು ಕಷ್ಟಪಟ್ಟು ಉಜ್ಜಿ ಶುದ್ಧಗೊಳಿಸಿದರು. ಸಾಮಾಜಿಕ ಜಾಲತಾಣದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಬೇಕೆಂಬ ಯುವಕರ ಅತಿರೇಕದ ಆಸೆಗಳಿಗೆ ಹಾಗೂ ಕಾನೂನು ಬಾಹಿರ ರೀಲ್ಸ್ ಹುಚ್ಚಾಟಗಳಿಗೆ ಈ ಕೃತ್ಯವು ಸ್ಪಷ್ಟ ಎಚ್ಚರಿಕೆಯ ಪಾಠವಾಗಿದೆ.

ಗರ್ಲ್​ಫ್ರೆಂಡ್​ ಕಿತಾಪತಿ

ಕಾರಿನ ಮೇಲಿನ ಲಿಪ್‌ಸ್ಟಿಕ್ ಮುತ್ತಿನ ವಿಡಿಯೋ ವೈರಲ್ ಆದ ಬಳಿಕ ಸ್ಪಷ್ಟನೆ ನೀಡಿರುವ ಕಾರಿನ ಮಾಲೀಕ ಆದಿತ್ಯ, ಈ ವಿಚಿತ್ರ ಹಾಗೂ ಕ್ರಿಯೇಟಿವ್​ ಕಲ್ಪನೆಯು ತನ್ನ ಸ್ನೇಹಿತೆಯದ್ದೇ ಹೊರತು ತನ್ನದಲ್ಲ ಎಂದು ಬಹಿರಂಗಪಡಿಸಿದ್ದಾರೆ. ತಾನು ಕಾರನ್ನು ನಿಲ್ಲಿಸಿ ಸ್ವಲ್ಪ ದೂರ ತೆರಳಿದ್ದಾಗ, ನನ್ನ ಗರ್ಲ್​​​ಫ್ರೆಂಡ್​ ಒಬ್ಬಳು ಸ್ವತಃ ಈ ಎಲ್ಲಾ ಮುತ್ತಿನ ಗುರುತುಗಳನ್ನು ಕಾರಿನ ಮೇಲೆ ಮೂಡಿಸಿದ್ದಾಳೆ ಎಂದು ವಿವರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೇಗಾದರೂ ಮಾಡಿ ವಿಡಿಯೋವನ್ನು ವೈರಲ್ ಮಾಡಬೇಕೆಂಬ ಏಕೈಕ ಉದ್ದೇಶದಿಂದಲೇ ನನ್ನ ಗರ್ಲ್​ಫ್ರೆಂಡ್​ ಈ ರೀತಿ ಮಾಡಿದ್ದು, ಬಳಿಕ ನಾನು ಅದನ್ನು ನನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿದೆ ಎಂದು ಆದಿತ್ಯ ತಪ್ಪೊಪ್ಪಿಕೊಂಡಿದ್ದಾರೆ.
ಆನ್‌ಲೈನ್‌ನಲ್ಲಿ ಆಗಾಗ ಹರಿದಾಡುವ ಯಾವುದೋ ಒಂದು ಟ್ರೆಂಡ್ ಅನ್ನು ಅನುಕರಿಸಿ ರೀಲ್ಸ್ ಮಾಡಿಸಿದರೆ ಖಂಡಿತಾ ವೀಕ್ಷಣೆಗಳು ಹೆಚ್ಚಾಗಿ ವಿಡಿಯೋ ವೈರಲ್ ಆಗುತ್ತದೆ ಎಂಬ ಲೆಕ್ಕಾಚಾರವೇ ಇದರ ಹಿಂದೆ ಇತ್ತು ಎಂಬುದನ್ನು ಆದಿತ್ಯಾ ಒಪ್ಪಿಕೊಂಡಿದ್ದಾರೆ. ಅಂತಿಮವಾಗಿ ತಾವು ಮಾಡಿದ ಈ ತಪ್ಪಿಗೆ ಸಂಚಾರಿ ಪೊಲೀಸರು ವಿಧಿಸಿದ್ದ 5,500 ರೂಪಾಯಿಗಳ ದಂಡದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿರುವುದಾಗಿ ಅವರು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ.

ಮತ್ತೆ ಇಂಥಾ ತಪ್ಪು ಮಾಡಲ್ಲ

ಪೊಲೀಸ್ ತನಿಖೆಯ ವೇಳೆ ಆದಿತ್ಯ ಒಬ್ಬ ಇನ್‌ಸ್ಟಾಗ್ರಾಂ ಕಂಟೆಂಟ್ ಕ್ರಿಯೇಟರ್ ಎಂಬ ಅಂಶ ಬೆಳಕಿಗೆ ಬಂದಿದ್ದು, ತನ್ನ ಖಾತೆಯ ರೀಚ್ ಹಾಗೂ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿಯೇ ಈ ವಿಚಿತ್ರ ಸಾಹಸಕ್ಕೆ ಕೈಹಾಕಿರುವುದು ಗೊತ್ತಾಗಿದೆ. ರೀಲ್ಸ್ ಹುಚ್ಚಿನಲ್ಲಿ ಇಂತಹ ಕೃತ್ಯಗಳು ಕಾನೂನು ಉಲ್ಲಂಘನೆಗೆ ಕಾರಣವಾಗಿ ದೊಡ್ಡ ತೊಂದರೆಗೆ ಸಿಲುಕಿಸಬಹುದು ಎಂಬ ಕನಿಷ್ಠ ಅರಿವು ತಮಗಿರಲಿಲ್ಲ ಎಂದು ಪೊಲೀಸರ ಮುಂದೆ ಆದಿತ್ಯ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಎಂದಿಗೂ ಇಂತಹ ಪ್ರಮಾದಗಳನ್ನು ಮರುಕಳಿಸುವುದಿಲ್ಲವೆಂದು ಹಾಗೂ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಅವರು ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net