ಬಂಕ್‌ಗಳ ಮುಂದೆ ಕಿಲೋಮೀಟರ್ ಉದ್ದದ ಸಾಲು; ಕುಕ್ಕರ್, ಪಾತ್ರೆಗಳಲ್ಲೂ ಪೆಟ್ರೋಲ್ ಸಂಗ್ರಹಕ್ಕೆ ಮುಗಿಬಿದ್ದ ಜನ! | Petrol

Petrol
Petrol
Published on
ನವದೆಹಲಿ: ದೇಶಾದ್ಯಂತ ಈಗ ಇಂಧನ(Petrol) ಕೊರತೆಯ ಭೀತಿ ಆವರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಒಂದೇ ಒಂದು ಸಣ್ಣ ವದಂತಿ ಜನಸಾಮಾನ್ಯರಲ್ಲಿ ಎಂತಹ ಆತಂಕ ಸೃಷ್ಟಿಸಿದೆ ಎಂದರೆ, ಜನರು ಪೆಟ್ರೋಲ್ ಮತ್ತು ಡೀಸೆಲ್ ಪಡೆಯಲು ಪೆಟ್ರೋಲ್ ಬಂಕ್‌ಗಳ ಮುಂದೆ ಮುಗಿಬೀಳುತ್ತಿದ್ದಾರೆ. ಕೇವಲ ವಾಹನಗಳ ಟ್ಯಾಂಕ್ ತುಂಬಿಸುವುದಷ್ಟೇ ಅಲ್ಲದೆ, ಕೈಗೆ ಸಿಕ್ಕ ಪಾತ್ರೆ-ಪಗಡೆಗಳಿಗೂ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿವೆ.

ಕುಕ್ಕರ್, ಬಕೆಟ್‌ಗಳಲ್ಲೂ ಪೆಟ್ರೋಲ್ ಸಂಗ್ರಹ!

ಗುಜರಾತ್‌ನಿಂದ ಆರಂಭವಾದ ಈ ವದಂತಿಯ ಕಿಡಿ ಈಗ ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಿಗೂ ಹಬ್ಬಿದೆ. ವೈರಲ್ ಆಗಿರುವ ವಿಡಿಯೋಗಳಲ್ಲಿ ಜನರು ತಮ್ಮ ವಾಹನಗಳನ್ನಷ್ಟೇ ಅಲ್ಲದೆ, ಮನೆಯಲ್ಲಿರುವ ಪ್ರೆಶರ್ ಕುಕ್ಕರ್, ಬಕೆಟ್, ನೀರಿನ ಟ್ಯಾಂಕ್, ಹಾಲಿನ ಕ್ಯಾನ್ ಹಾಗೂ ಪ್ಲಾಸ್ಟಿಕ್ ಡ್ರಮ್‌ಗಳನ್ನು ಹಿಡಿದುಕೊಂಡು ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಇದು ಪರಿಸ್ಥಿತಿಯ ಗಂಭೀರತೆ ಮತ್ತು ಜನರ ನಡುವೆ ಮನೆಮಾಡಿರುವ ಭೀತಿಯನ್ನು ಎತ್ತಿ ತೋರಿಸುತ್ತಿದೆ.
ವದಂತಿಯ ಮೂಲ ಮತ್ತು ಸಂಚಾರ ದಟ್ಟಣೆ
'ಎಕ್ಸ್' (ಟ್ವಿಟರ್) ನಂತಹ ವೇದಿಕೆಗಳಲ್ಲಿ ಹರಡಿದ ವಿಡಿಯೋಗಳು ಜನರಲ್ಲಿ ಪೆಟ್ರೋಲ್ ಖಾಲಿಯಾಗಲಿದೆ ಎಂಬ ತಪ್ಪು ಸಂದೇಶ ರವಾನಿಸಿವೆ. ಇದರಿಂದಾಗಿ ಪ್ರಮುಖ ನಗರಗಳ ಪೆಟ್ರೋಲ್ ಬಂಕ್‌ಗಳ ಮುಂದೆ ಗಂಟೆಗಟ್ಟಲೆ ಕಾಯುವಂತಾಗಿದ್ದು, ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ (Traffic Jam) ಉಂಟಾಗಿದೆ. ಅನೇಕ ಕಡೆಗಳಲ್ಲಿ ಸಾಮಾನ್ಯ ಪ್ರಯಾಣಿಕರು ಪೆಟ್ರೋಲ್ ಸಿಗದೆ ಪರದಾಡುವಂತಾಗಿದೆ.
ಸರ್ಕಾರ ಮತ್ತು ತೈಲ ಕಂಪನಿಗಳ ಸ್ಪಷ್ಟನೆ
ಈ ಗೊಂದಲಕ್ಕೆ ತೆರೆ ಎಳೆಯಲು ಮುಂದಾಗಿರುವ ಕೇಂದ್ರ ಸರ್ಕಾರ ಮತ್ತು ಭಾರತ್ ಪೆಟ್ರೋಲಿಯಂ (BPCL) ನಂತಹ ಸಂಸ್ಥೆಗಳು ಮಹತ್ವದ ಸ್ಪಷ್ಟನೆ ನೀಡಿವೆ.ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಯಾವುದೇ ಕೊರತೆಯಿಲ್ಲ.ಇಂಧನ ಪೂರೈಕೆ ಸರಪಳಿ (Supply Chain) ಸಂಪೂರ್ಣವಾಗಿ ಸುಗಮವಾಗಿದೆ ಎಂದಿರುವ ಸರ್ಕಾರ ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಮತ್ತು ಭಯಭೀತರಾಗಬಾರದು ಎಂದು ಮನವಿ ಮಾಡಲಾಗಿದೆ.

ಮನೆಯಲ್ಲಿ ಇಂಧನ ಸಂಗ್ರಹ ಮೃತ್ಯುಪಾಶ!

ತೆರೆದ ಪಾತ್ರೆಗಳಲ್ಲಿ ಅಥವಾ ಕುಕ್ಕರ್‌ಗಳಲ್ಲಿ ಪೆಟ್ರೋಲ್ ಸಂಗ್ರಹಿಸುವುದು ಅತ್ಯಂತ ಅಪಾಯಕಾರಿ ಎಂದು ಸುರಕ್ಷಾ ತಜ್ಞರು ಎಚ್ಚರಿಸಿದ್ದಾರೆ. ಪೆಟ್ರೋಲ್ ಸುಲಭವಾಗಿ ಆವಿಯಾಗುವ (Volatile) ಗುಣ ಹೊಂದಿದ್ದು, ಸಣ್ಣ ಕಿಡಿ ತಗುಲಿದರೂ ಭಾರಿ ಸ್ಫೋಟ ಸಂಭವಿಸಬಹುದು. ಮನೆಯಲ್ಲಿ ಇಂತಹ ವಸ್ತುಗಳನ್ನು ಸಂಗ್ರಹಿಸುವುದು ಇಡೀ ಕುಟುಂಬದ ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂದು ಅಧಿಕಾರಿಗಳು ಜನರನ್ನು ಒತ್ತಾಯಿಸಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ್ದ ಹಾರ್ಮುಜ್ ಜಲಸಂಧಿಯ (Strait of Hormuz) ದಿಗ್ಬಂಧನವನ್ನು ಇರಾನ್ ಭಾಗಶಃ ಸಡಿಲಿಸಿದೆ. ಭಾರತ ಸೇರಿದಂತೆ ತನಗೆ ಆಪ್ತವಾಗಿರುವ 'ಮಿತ್ರ ರಾಷ್ಟ್ರಗಳ' ಸರಕು ಸಾಗಣೆ ಹಡಗುಗಳಿಗೆ ಈ ಆಯಕಟ್ಟಿನ ಮಾರ್ಗದಲ್ಲಿ ಸಂಚರಿಸಲು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಗುರುವಾರ ಹಸಿರು ನಿಶಾನೆ ತೋರಿಸಿದ್ದಾರೆ. 
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಕಳಕಳಿಯ ಮನವಿಯ ಬೆನ್ನಲ್ಲೇ ಇರಾನ್ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

ಯಾವ ರಾಷ್ಟ್ರಗಳಿಗೆ ಅನುಮತಿ?

ಮುಂಬೈನಲ್ಲಿರುವ ಇರಾನ್ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, "ಚೀನಾ, ರಷ್ಯಾ, ಭಾರತ, ಇರಾಕ್ ಮತ್ತು ಪಾಕಿಸ್ತಾನದಂತಹ ಸ್ನೇಹಿ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ನಾವು ಅನುಮತಿ ನೀಡಿದ್ದೇವೆ" ಎಂದು ಇರಾನ್ ವಿದೇಶಾಂಗ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net