'ಸಿಯಾ ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾಳೆ' ಎಂದು ತಂದೆಯ ಬಳಿ ನೋವು ತೋಡಿಕೊಂಡಿದ್ದ ಕೇತನ್!
Pune Murder
Published on:
Copied
Follow Us
ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್‌ವಾಲ್ ಕೊಲೆ ಪ್ರಕರಣಕ್ಕೆ(Pune Murder) ಸಂಬಂಧಿಸಿದಂತೆ ಹೊಸ ಮಾಹಿತಿ ಬಹಿರಂಗವಾಗಿದೆ.
ಹೌದು, ನವೆಂಬರ್‌ನಲ್ಲಿ ಮದುವೆಯಾಗಬೇಕಿದ್ದ ತನ್ನ ನಿಶ್ಚಿತಾರ್ಥದ ಯುವತಿ ಸಿಯಾ ಗೋಯಲ್ ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನವನ್ನು ಕೇತನ್ ಕೊಲೆಗೆ ಕೆಲ ದಿನಗಳ ಮುನ್ನವೇ ತನ್ನ ತಂದೆಯ ಬಳಿ ವ್ಯಕ್ತಪಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕೇತನ್ ತನ್ನ ತಂದೆ ವಿಶಾಲ್ ಅಗರ್‌ವಾಲ್ ಅವರಿಗೆ ಸಿಯಾದ ವರ್ತನೆ, ಆಕೆಯ ಫೋನ್ ಯಾವಾಗಲೂ ಬ್ಯುಸಿ ಇರುವುದು ಹಾಗೂ ಮಾತುಕತೆ ವೇಳೆ ಚೇತನ್ ಚೌಧರಿಯ ಹೆಸರನ್ನು ಆಗಾಗ ಉಲ್ಲೇಖಿಸುತ್ತಿದ್ದ ವಿಚಾರವನ್ನು ಹಲವು ಬಾರಿ ಹೇಳಿಕೊಂಡಿದ್ದನು.
ಪೊಲೀಸರ ತನಿಖೆಯ ಪ್ರಕಾರ, ಜೂನ್ 6ರಂದು ಇಂಡೋನೇಷ್ಯಾದ ಬಾಲಿಗೆ ಹೋಗಬೇಕಿದ್ದ ಮದುವೆ ಪೂರ್ವ ಪ್ರವಾಸ ರದ್ದಾದ ನಂತರ ಸಿಯಾ ಸಣ್ಣ-ಪುಟ್ಟ ವಿಚಾರಕ್ಕೂ ಜಗಳ ಮಾಡತೊಡಗಿದ್ದಾಳೆ ಎಂದು ಕೇತನ್ ತನ್ನ ತಂದೆಗೆ ತಿಳಿಸಿದ್ದನು.
ಇದಕ್ಕೆ ಪ್ರತಿಕ್ರಿಯಿಸಿದ್ದ ತಂದೆ, "ಅವಳು ಇನ್ನೂ ಚಿಕ್ಕವಳು. ಮದುವೆ ಸಮೀಪಿಸುತ್ತಿರುವ ಕಾರಣ ಹೀಗೆ ವರ್ತಿಸುತ್ತಿರಬಹುದು. ನಾವು ಮಾತನಾಡಿ ತಿಳಿ ಹೇಳುತ್ತೇವೆ" ಎಂದು ಸಮಾಧಾನಪಡಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
'ಹಿನ್ನೆಲೆ ಪರಿಶೀಲನೆ ಸರಿಯಾಗಿ ನಡೆದಿತ್ತೇ?'
ಜೂನ್ 14ರಂದು ಲೋಹಗಢ ಕೋಟೆಯಿಂದ ಹಿಂದಿರುಗಿದ ಬಳಿಕ ಕೇತನ್ ಮತ್ತೊಮ್ಮೆ ತಂದೆಯೊಂದಿಗೆ ಮಾತನಾಡಿ, ಮದುವೆ ನಿಶ್ಚಯಿಸುವ ಮುನ್ನ ಸಿಯಾ ಕುಟುಂಬದ ಹಿನ್ನೆಲೆ ಬಗ್ಗೆ ಸಮರ್ಪಕ ಪರಿಶೀಲನೆ ನಡೆಸಲಾಗಿತ್ತೇ ಎಂದು ಪ್ರಶ್ನಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಸಿಯಾ ಫೋನ್‌ಗೆ ಕರೆ ಮಾಡಿದಾಗ ಅದು ಹೆಚ್ಚಾಗಿ ಬ್ಯುಸಿ ಬರುತ್ತಿತ್ತು. ಜೊತೆಗೆ ಆಕೆ ಮಾತುಕತೆ ವೇಳೆ ಆಗಾಗ ಚೇತನ್ ಚೌಧರಿಯ ಹೆಸರನ್ನು ಪ್ರಸ್ತಾಪಿಸುತ್ತಿದ್ದಳು. ಇದರಿಂದ ಆಕೆ ಬೇರೆಯವರೊಂದಿಗೆ ಸಂಬಂಧ ಹೊಂದಿರಬಹುದು ಎಂಬ ಅನುಮಾನ ಕೇತನ್‌ಗೆ ಮೂಡಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕುಟುಂಬ ಸಮಾಧಾನಪಡಿಸಿತ್ತು
ಕೇತನ್‌ನ ಅನುಮಾನಗಳ ನಡುವೆಯೂ, ಸಿಯಾ ಕುಟುಂಬ ತಮ್ಮ ಸಂಬಂಧಿಕರ ಮೂಲಕ ಪರಿಚಯವಿದ್ದ ಕಾರಣ ಆತಂಕಪಡುವ ಅಗತ್ಯವಿಲ್ಲ ಎಂದು ಕುಟುಂಬ ಸದಸ್ಯರು ಕೇತನ್‌ಗೆ ಧೈರ್ಯ ತುಂಬಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಬಳಿಕ ನಡೆದ ಬೆಳವಣಿಗೆಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ.
ಪೊಲೀಸರ ಪ್ರಕಾರ, ಜೂನ್ 18ರಂದು ಪುಣೆ ಸಮೀಪದ ಲೋಹಗಢ ಕೋಟೆಗೆ ತೆರಳಿದ್ದ ವೇಳೆ ಕೇತನ್ ಅಗರ್‌ವಾಲ್ ಅವರನ್ನು 20 ವರ್ಷದ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರನೆಂದು ಆರೋಪಿಸಲಾಗಿರುವ 22 ವರ್ಷದ ಚೇತನ್ ಚೌಧರಿ ಕಣಿವೆಗೆ ತಳ್ಳಿ ಕೊಲೆ ಮಾಡಿರುವ ಆರೋಪವಿದೆ.
ಈ ಜೋಡಿಯ ಮದುವೆ ಇದೇ ವರ್ಷದ ನವೆಂಬರ್‌ನಲ್ಲಿ ನಡೆಯಬೇಕಿತ್ತು. ಪ್ರಕರಣ ಸಂಬಂಧ ಇಬ್ಬರನ್ನೂ ಬಂಧಿಸಲಾಗಿದ್ದು, ನ್ಯಾಯಾಲಯವು ಜುಲೈ 3ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).