ನಮ್ಗೂ ರಕ್ಷಣೆ ಕೊಡಿ!...ಪುರುಷರ ರಾಷ್ಟ್ರೀಯ ಆಯೋಗಕ್ಕಾಗಿ ಬಿಜೆಪಿ ಸಂಸದನ ಆಗ್ರಹ; ಏನೇನಿದೆ ಗೊತ್ತಾ ಆ ಹೊಸ ಬಿಲ್‌ನಲ್ಲಿ..? | Ashok Kumar Mittal

Ashok Kumar Mittal | ರಾಜ್ಯಸಭಾ ಸದಸ್ಯ ಅಶೋಕ್ ಕುಮಾರ್ ಮಿತ್ತಲ್
Ashok Kumar Mittal | ರಾಜ್ಯಸಭಾ ಸದಸ್ಯ ಅಶೋಕ್ ಕುಮಾರ್ ಮಿತ್ತಲ್
Published on
ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಈಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ರಾಜಕೀಯ ವಲಯದಲ್ಲೂ ಹೊಸ ಚರ್ಚೆಗೆ ಕಿಡಿ ಹೊತ್ತಿಸಿದೆ. ಭಾವಿ ಪತ್ನಿ ಸಿಯಾ ಗೋಯಲ್ ತನ್ನ ಪ್ರಿಯಕರನೊಂದಿಗೆ ಸೇರಿ ನಿಶ್ಚಿತಾರ್ಥವಾಗಿದ್ದ ಯುವಕನನ್ನೇ ಭೀಕರವಾಗಿ ಕೊಂದಿರುವ ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯಸಭಾ ಸದಸ್ಯ ಅಶೋಕ್ ಕುಮಾರ್ ಮಿತ್ತಲ್ (Ashok Kumar Mittal), ದೇಶದಲ್ಲಿ ಪುರುಷರ ರಾಷ್ಟ್ರೀಯ ಆಯೋಗ ರಚನೆಯಾಗಲೇಬೇಕು ಎಂದು ಒತ್ತಾಯಿಸಿದ್ದಾರೆ.
ಈ ಘಟನೆಯು ಅತ್ಯಂತ ಆಘಾತಕಾರಿ ಎಂದಿರುವ ಮಿತ್ತಲ್, ತಾವು 2025 ರ ಡಿಸೆಂಬರ್​​ನಲ್ಲಿ ರಾಜ್ಯಸಭೆಯಲ್ಲಿ ಮಂಡಿಸಿದ್ದ ಖಾಸಗಿ ಸದಸ್ಯರ ಮಸೂದೆಯ (Private Member's Bill) ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಂಜಾಬ್‌ನಿಂದ ಎಎಪಿ ಪರವಾಗಿ ಆಯ್ಕೆಯಾಗಿದ್ದ ಮಿತ್ತಲ್​, ಈ ವರ್ಷದ ಏಪ್ರಿಲ್‌ನಲ್ಲಿ ರಾಘವ್ ಚಡ್ಡಾ ನೇತೃತ್ವದ 7 ಸಂಸದರ ಗುಂಪಿನೊಂದಿಗೆ ಬಿಜೆಪಿ ಸೇರಿದ್ದಾರೆ.
ಪುರುಷರು ಕೂಡ ಅಪರಾಧಗಳಿಗೆ ಬಲಿಯಾಗಬಹುದು ಎಂಬುದಕ್ಕೆ ಕೇತನ್ ಕೊಲೆ ಪ್ರಕರಣವೇ ಸಾಕ್ಷಿ ಎಂದು ಬರೆದುಕೊಂಡಿರುವ ಅಶೋಕ್ ಮಿತ್ತಲ್, ಪುರುಷರಿಗೂ ಸಾಂಸ್ಥಿಕ ಬೆಂಬಲ, ಕಾನೂನು ರಕ್ಷಣೆ ಮತ್ತು ಅವರ ಧ್ವನಿಯನ್ನು ಆಲಿಸುವ ವೇದಿಕೆಯ ಅಗತ್ಯವಿದೆ. ಲಿಂಗಭೇದವಿಲ್ಲದೆ ಎಲ್ಲರಿಗೂ ಸಮಾನ ನ್ಯಾಯ ಸಿಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಾಮಾನ್ಯವಾಗಿ ಇಂತಹ ಖಾಸಗಿ ಮಸೂದೆಗಳು ಮತದಾನದ ಹಂತ ತಲುಪುವುದು ತೀರಾ ವಿರಳ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಕೇವಲ 14 ಖಾಸಗಿ ಮಸೂದೆಗಳು ಮಾತ್ರ ಕಾನೂನಾಗಿವೆ. ಅದರಲ್ಲೂ 1970 ರ ನಂತರ ಯಾವುದೇ ಒಂದು ಖಾಸಗಿ ಮಸೂದೆಯೂ ಸಂಸತ್ತಿನ ಉಭಯ ಸದನಗಳಲ್ಲಿ ಯಶಸ್ವಿಯಾಗಿ ಪಾಸ್ ಆಗಿಲ್ಲ ಎನ್ನುವುದು ಗಮನಾರ್ಹ.

ಮಿತ್ತಲ್ ಪ್ರಸ್ತಾಪಿಸಿರುವ ಕರಡು ಕಾನೂನಿನಲ್ಲಿ ಏನಿದೆ..?

ರಾಜ್ಯಸಭೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ರಾಷ್ಟ್ರೀಯ ಪುರುಷರ ಆಯೋಗ ಮಸೂದೆ, 2025 ಕಳೆದ ಡಿಸೆಂಬರ್ 5 ರಂದು ಮಂಡನೆಯಾಗಿದ್ದು, ಈ ಪ್ರಸ್ತಾವಿತ ಕಾನೂನಿನ ಸಂಪೂರ್ಣ ವಿವರಗಳು ಇಲ್ಲಿವೆ.

ಪುರುಷರ ಹಕ್ಕುಗಳು ರಕ್ಷಣೆ

ಪುರುಷರ ಹಕ್ಕುಗಳನ್ನು ರಕ್ಷಿಸಲು ಹಾಗೂ ಅವರ ಕುಂದುಕೊರತೆಗಳನ್ನು ವಿಚಾರಣೆ ಮಾಡಲು ರಾಷ್ಟ್ರೀಯ ಪುರುಷರ ಆಯೋಗವನ್ನು ರಚಿಸಬೇಕು ಎಂದು ಮಸೂದೆ ಪ್ರಸ್ತಾಪಿಸುತ್ತದೆ. ಇದರರ್ಥ ಪುರುಷರ ಮೇಲೆ ಪರಿಣಾಮ ಬೀರುವ ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನೀತಿಗಳನ್ನು ಪರಿಶೀಲಿಸಲು ಶಾಸನಬದ್ಧ ಚೌಕಟ್ಟನ್ನು ಸೃಷ್ಟಿಸುವುದು ಮತ್ತು ಪುರುಷರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.

ಆಯೋಗದ ಸದಸ್ಯರು ಯಾರು..?

ಈ ಆಯೋಗವನ್ನು ಒಬ್ಬರು ಅಧ್ಯಕ್ಷರು ಮತ್ತು ಒಬ್ಬರು ಉಪಾಧ್ಯಕ್ಷರು ಮುನ್ನಡೆಸಲಿದ್ದಾರೆ. ಅವರು ಕಾನೂನು, ಸಾರ್ವಜನಿಕ ಆಡಳಿತ, ಲಿಂಗ ಅಧ್ಯಯನ, ಸಮಾಜಶಾಸ್ತ್ರ, ಮನಃಶಾಸ್ತ್ರ ಅಥವಾ ಸಮಾಜಸೇವೆಯ ಕ್ಷೇತ್ರದಲ್ಲಿ ಕನಿಷ್ಠ 15 ವರ್ಷಗಳ ಸಂಬಂಧಿತ ಅನುಭವ ಹೊಂದಿರುವ ಪ್ರಖ್ಯಾತ ವ್ಯಕ್ತಿಗಳಾಗಿರಬೇಕು. ಅಲ್ಲದೆ, ಆಯೋಗದ ಸದಸ್ಯರಲ್ಲಿ ಕನಿಷ್ಠ ಒಬ್ಬರು ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡಕ್ಕೆ (ST) ಸೇರಿದವರಾಗಿರಬೇಕು ಮತ್ತು ಕನಿಷ್ಠ ಒಬ್ಬರು 40 ವರ್ಷದೊಳಗಿನ ಯುವಕರಾಗಿರಬೇಕು. ಯಾವುದೇ ವಿಷಯದ ವಿಚಾರಣೆ ನಡೆಸುವಾಗ ಈ ಆಯೋಗಕ್ಕೆ ಸಿವಿಲ್ ನ್ಯಾಯಾಲಯದ ಅಧಿಕಾರ ಇರಲಿದೆ ಎಂದು ತಿಳಿದುಬಂದಿದೆ.

ಆಯೋಗದ ಕೆಲಸವೇನು..?

ಸಂವಿಧಾನವು ಖಾತರಿಪಡಿಸಿರುವ ಪುರುಷರ ಹಕ್ಕುಗಳ ಉಲ್ಲಂಘನೆ ಅಥವಾ ವಂಚನೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ತನಿಖೆ ಮಾಡುವುದು ಮತ್ತು ಪರಿಶೀಲಿಸುವುದು ಈ ಆಯೋಗದ ಪ್ರಮುಖ ಕಾರ್ಯವಾಗಿರುತ್ತದೆ. ಇದರೊಂದಿಗೆ, ಪುರುಷರ ಆತ್ಮಹತ್ಯೆ ಪ್ರಮಾಣ, ಆರೋಗ್ಯದ ಅಸಮಾನತೆ, ನಿರುದ್ಯೋಗ, ಪೋಷಕರ ಕಸ್ಟಡಿ ಹಕ್ಕುಗಳು ಮತ್ತು ಕೌಟುಂಬಿಕ ದೌರ್ಜನ್ಯದಂತಹ ಗಂಭೀರ ವಿಷಯಗಳ ಕುರಿತು ಸಂಶೋಧನೆ, ಅಧ್ಯಯನಗಳು ಮತ್ತು ದತ್ತಾಂಶ ಸಂಗ್ರಹಣೆಯನ್ನು ಕೈಗೊಳ್ಳಲು ಆಯೋಗಕ್ಕೆ ಅಧಿಕಾರವಿರುತ್ತದೆ.

ಬೆಂಬಲ ಮತ್ತು ಕೌನ್ಸೆಲಿಂಗ್

ಸಂಕಷ್ಟದಲ್ಲಿರುವ ಪುರುಷರಿಗೆ ಸಹಾಯ ಮಾಡಲು ಆಯೋಗವು ನೇರ ಕಾನೂನು ನೆರವು, ಕೌನ್ಸೆಲಿಂಗ್ ಅಥವಾ ಪುನರ್ವಸತಿ ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಯುವಕರಲ್ಲಿ ಲಿಂಗ ಸೂಕ್ಷ್ಮತೆಯನ್ನು ಬೆಳೆಸುವ, ಆರೋಗ್ಯಕರ ಪುರುಷತ್ವದ ಮೌಲ್ಯಗಳನ್ನು ಉತ್ತೇಜಿಸುವ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಭಾವನಾತ್ಮಕ ಬುದ್ಧಿವಂತಿಕೆ, ಮಾನಸಿಕ ಯೋಗಕ್ಷೇಮ ಹಾಗೂ ಅಹಿಂಸೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ.

ಮಹಿಳೆಯರ ರಕ್ಷಣಾ ಕವಚಕ್ಕೆ ಇಲ್ಲ ಧಕ್ಕೆ

ಈ ಮಸೂದೆಯ ಯಾವುದೇ ನಿಬಂಧನೆಗಳು ಪ್ರಸ್ತುತ ಚಾರಿಯಲ್ಲಿರುವ ಯಾವುದೇ ಕಾನೂನಿನಡಿಯಲ್ಲಿ ಮಹಿಳೆಯರಿಗೆ ನೀಡಲಾಗಿರುವ ಹಕ್ಕುಗಳು ಮತ್ತು ರಕ್ಷಣೆಯನ್ನು ಸೀಮಿತಗೊಳಿಸುವುದಿಲ್ಲ ಅಥವಾ ಬಾಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದಲ್ಲದೆ, ಮಹಿಳೆಯೊಬ್ಬರು ದೂರುದಾರರಾಗಿದ್ದರೆ, ಆ ದೂರು ಸುಳ್ಳು, ದುರುದ್ದೇಶಪೂರಿತ ಅಥವಾ ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ನ್ಯಾಯಾಲಯವು ಅಧಿಕೃತವಾಗಿ ಘೋಷಿಸುವವರೆಗೆ ಆ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಆಯೋಗಕ್ಕೆ ನಿರ್ಬಂಧ ಇರಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net