ಕೇತನ್ ಅಗರ್‌ವಾಲ್ ಕೊಲೆ ಪ್ರಕರಣ; ಕೊಲೆ ನಡೆದ ಕಂದಕ ನೋಡಲು ಜನರ ದಂಡು: ಲೋಹಗಢ ಕೋಟೆಗೆ ತಾತ್ಕಾಲಿಕ ನಿರ್ಬಂಧ!
Lohagarh Fort
Published on:
Copied
Follow Us
ನವದೆಹಲಿ: ಮಹಾರಾಷ್ಟ್ರದ ಪುಣೆ ಸಮೀಪದ ಐತಿಹಾಸಿಕ ಲೋಹಗಢ ಕೋಟೆಗೆ( Lohagarh Fort) ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಉದ್ಯಮಿ ಕೇತನ್ ಅಗರ್‌ವಾಲ್ ಕೊಲೆ ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಕೋಟೆಯಲ್ಲಿ ಪ್ರವಾಸಿಗರ ಸಂಖ್ಯೆ ಏಕಾಏಕಿ ಹೆಚ್ಚಾಗಿದ್ದು, ತನಿಖೆಗೆ ಅಡ್ಡಿಯಾಗದಂತೆ ಅಧಿಕಾರಿಗಳು ಕೋಟೆಯ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಪ್ರವಾಸಿಗರು ಕೋಟೆಯ ಐತಿಹಾಸಿಕ ಮಹತ್ವ ಅಥವಾ ಪ್ರಕೃತಿ ಸೌಂದರ್ಯ ವೀಕ್ಷಿಸಲು ಮಾತ್ರವಲ್ಲದೆ, ಕೇತನ್ ಅಗರ್‌ವಾಲ್ ಅವರನ್ನು ಕಂದಕಕ್ಕೆ ತಳ್ಳಲಾಗಿದೆ ಎನ್ನಲಾದ ಸ್ಥಳವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಇದರಿಂದ ತನಿಖೆಗೆ ತೊಂದರೆಯಾಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳ
ವರದಿಗಳ ಪ್ರಕಾರ, ರಜಾ ದಿನಗಳಲ್ಲಿ ಸಾಮಾನ್ಯವಾಗಿ ಸುಮಾರು 1,000 ಮಂದಿ ಭೇಟಿ ನೀಡುತ್ತಿದ್ದ ಲೋಹಗಢ ಕೋಟೆಗೆ ಕಳೆದ ಕೆಲವು ದಿನಗಳಿಂದ ಸುಮಾರು 1,500 ಮಂದಿ ಆಗಮಿಸುತ್ತಿದ್ದಾರೆ. ವಾರದ ಸಾಮಾನ್ಯ ದಿನಗಳಲ್ಲೂ 400ರಷ್ಟಿದ್ದ ಪ್ರವಾಸಿಗರ ಸಂಖ್ಯೆ 600ಕ್ಕೂ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐತಿಹಾಸಿಕ ಕೋಟೆ
ಪುಣೆಯಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಲೋಹಗಢ ಕೋಟೆ ಸಮುದ್ರಮಟ್ಟದಿಂದ ಸುಮಾರು 1,033 ಮೀಟರ್ ಎತ್ತರದಲ್ಲಿದೆ. 'ಕಬ್ಬಿಣದ ಕೋಟೆ' ಎಂದೇ ಪ್ರಸಿದ್ಧವಾಗಿರುವ ಈ ಕೋಟೆ ಹಲವು ರಾಜವಂಶಗಳ ಆಳ್ವಿಕೆಗೆ ಸಾಕ್ಷಿಯಾಗಿದೆ.
1648ರಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಈ ಕೋಟೆಯನ್ನು ವಶಪಡಿಸಿಕೊಂಡಿದ್ದರು. ಬಳಿಕ ಪುರಂದರ್ ಒಪ್ಪಂದದ ಸಂದರ್ಭದಲ್ಲಿ ಕೋಟೆ ಮೊಘಲರ ವಶವಾಗಿದ್ದರೂ, 1670ರಲ್ಲಿ ಶಿವಾಜಿ ಮಹಾರಾಜರು ಮತ್ತೆ ವಶಪಡಿಸಿಕೊಂಡು ಸೂರತ್ ದಂಡಯಾತ್ರೆಯಲ್ಲಿ ದೊರೆತ ಸಂಪತ್ತನ್ನು ಇಲ್ಲಿ ಸಂಗ್ರಹಿಸಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.
'ವಿಂಚು ಕಟಾ' ಪ್ರಮುಖ ಆಕರ್ಷಣೆ
ಲೋಹಗಢ ಕೋಟೆಯ ಪ್ರಮುಖ ಆಕರ್ಷಣೆಯಾದ 'ವಿಂಚು ಕಟಾ' (ಚೇಳಿನ ಬಾಲ) ಎಂಬ ಕಲ್ಲಿನ ಕಿರಿದಾದ ಭಾಗ ಪ್ರವಾಸಿಗರನ್ನು ಸೆಳೆಯುತ್ತದೆ. ಮೇಲಿನಿಂದ ನೋಡಿದಾಗ ಅದು ಚೇಳಿನ ಬಾಲದ ಆಕಾರದಲ್ಲಿ ಕಾಣಿಸುವುದರಿಂದ ಈ ಹೆಸರು ಬಂದಿದೆ.
ಬೃಹತ್ ಕಲ್ಲಿನ ದ್ವಾರಗಳು, ಪ್ರಾಚೀನ ಗೋಡೆಗಳು, ಮಳೆಗಾಲದ ಸುಂದರ ದೃಶ್ಯಗಳು ಹಾಗೂ ಪಕ್ಕದ ವಿಸಾಪುರ ಕೋಟೆಗೆ ಸಂಪರ್ಕ ಕಲ್ಪಿಸುವ ಪರ್ವತ ಶ್ರೇಣಿ ಈ ಪ್ರದೇಶವನ್ನು ಟ್ರೆಕ್ಕಿಂಗ್ ಪ್ರಿಯರ ನೆಚ್ಚಿನ ತಾಣವನ್ನಾಗಿ ಮಾಡಿವೆ.
ತಾತ್ಕಾಲಿಕ ನಿರ್ಬಂಧ
ಪೊಲೀಸರ ತನಿಖೆ ಪೂರ್ಣಗೊಳ್ಳುವವರೆಗೆ ಲೋಹಗಢ ಕೋಟೆಗೆ ಸಾರ್ವಜನಿಕರ ಪ್ರವೇಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆ ಮುಗಿದ ಬಳಿಕ ಕೋಟೆಯನ್ನು ಮತ್ತೆ ಪ್ರವಾಸಿಗರಿಗೆ ತೆರೆಯಲಾಗುವುದು ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).