ಕೊಲೆ ಮಾಡಿದ್ರೂ ಯಾವುದೇ ಪಶ್ಚಾತಾಪವಿಲ್ಲ: ಮಾಧ್ಯಮಗಳ ಎದುರು ಅಶ್ಲೀಲ ಸನ್ನೆ ಮಾಡಿದ ಜಿಯಾ! ವಿಡಿಯೋ ವೈರಲ್​...Ketan Agarwal Death Case

ಕೊಲೆ ಮಾಡಿದ್ರೂ ಯಾವುದೇ ಪಶ್ಚಾತಾಪವಿಲ್ಲ: ಮಾಧ್ಯಮಗಳ ಎದುರು ಅಶ್ಲೀಲ ಸನ್ನೆ ಮಾಡಿದ ಜಿಯಾ! ವಿಡಿಯೋ ವೈರಲ್​...Ketan Agarwal Death Case
ಕೊಲೆ ಮಾಡಿದ್ರೂ ಯಾವುದೇ ಪಶ್ಚಾತಾಪವಿಲ್ಲ: ಮಾಧ್ಯಮಗಳ ಎದುರು ಅಶ್ಲೀಲ ಸನ್ನೆ ಮಾಡಿದ ಜಿಯಾ! ವಿಡಿಯೋ ವೈರಲ್​...Ketan Agarwal Death Case
Published on

ಪ್ರಮುಖ ಮುಖ್ಯಾಂಶಗಳು

  • ಉದ್ಯಮಿ ಕೇತನ್ ಕೊಲೆ ಆರೋಪಿ ಜಿಯಾ ಮಾಧ್ಯಮಗಳ ಎದುರು ಅಸಭ್ಯ ವರ್ತನೆ, ವಿಡಿಯೋ ವೈರಲ್!
  • ಭಾವಿ ಪತಿಯನ್ನು ಕಂದಕಕ್ಕೆ ತಳ್ಳಿ ಕೊಂದರೂ ಮುಖದಲ್ಲಿಲ್ಲ ಪಶ್ಚಾತಾಪ
  • ಮಾಧ್ಯಮಗಳಿಗೆ ಮಧ್ಯದ ಬೆರಳು ತೋರಿಸಿ ವಿಕೃತಿ ಮೆರೆದ ಜಿಯಾ
  • ಲೋಹಗಢ್ ಕೋಟೆ ಕೊಲೆ ಪ್ರಕರಣದ ಕಿರಾತಕ ಜೋಡಿ ಇಂದು ವಡಗಾಂವ್ ನ್ಯಾಯಾಲಯಕ್ಕೆ
Ketan Agarwal Death Case : ಪುಣೆಯ ಯುವ ಉದ್ಯಮಿ ಕೇತನ್ ಅಗರ್ವಾಲ್ (25) ಅವರ ಭೀಕರ ಹತ್ಯೆ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದರ ತನಿಖೆಯ ನಡುವೆಯೇ ಆರೋಪಿ ಜಿಯಾ ಗೋಯಲ್, ಮಾಧ್ಯಮ ಪ್ರತಿನಿಧಿಗಳ ಎದುರು ಅಸಭ್ಯವಾಗಿ ವರ್ತಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಕೇತನ್​ ಅಗರ್ವಾಲ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಾವೆಗಳನ್ನು ಸಂಗ್ರಹಿಸಲು ಪೊಲೀಸರು ಆರೋಪಿ ಜಿಯಾ ಗೋಯೆಲ್​ ಅವರನ್ನು ಅವರ ಮನೆಗೆ ಕರೆತಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಭದ್ರತೆಯೊಂದಿಗೆ ತನ್ನ ಮನೆಯಿಂದ ಹೊರಬರುತ್ತಿದ್ದಾಗ, ಜಿಯಾ ಹೊರಗೆ ನೆರೆದಿದ್ದ ಮಾಧ್ಯಮ ಸಿಬ್ಬಂದಿಯತ್ತ ತನ್ನ ಮಧ್ಯದ ಬೆರಳನ್ನು ತೋರಿಸಿ ವಿಕೃತ ಹಾಗೂ ಅಸಭ್ಯ ಸನ್ನೆಯನ್ನು ಮಾಡಿದ್ದಾಳೆ.
ಅಷ್ಟೊಂದು ಭೀಕರ ಕೃತ್ಯ ಎಸಗಿದರು ಕೂಡ ಜಿಯಾ ಮುಖದಲ್ಲಿ ಯಾವುದೇ ಪಶ್ಚಾತಾಪ ಕಾಣುತ್ತಿಲ್ಲ. ಸದ್ಯ ವೈರಲ್​ ಆಗಿರುವ ವಿಡಿಯೋ ನೋಡಿದ ನೆಟ್ಟಿಗರು ಜಿಯಾಳ ವರ್ತನೆಯನ್ನು ಖಂಡಿಸುತ್ತಿದ್ದಾರೆ ಮತ್ತು ಆಕೆಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಅಂದಹಾಗೆ, ಮಹಾರಾಷ್ಟ್ರದ ಪುಣೆ ಸಮೀಪದ ಲೋಹಗಢ್ ಕೋಟೆಯಲ್ಲಿ ಜೂನ್ 18 ರಂದು ಯುವ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ನಡೆಯಿತು. ಆತ ಕೋಟೆಯ ಮೇಲಿಂದ ಬಿದ್ದು ಸಾವಿಗೀಡಾಗಿದ್ದರಿಂದ ಆರಂಭದಲ್ಲಿ ಯಾವುದೇ ಅನುಮಾನ ಇರಲಿಲ್ಲ. ಅಲ್ಲದೆ, ಆತ ಕಾಲು ಜಾರಿ ಬಿದ್ದಿದ್ದಾನೆ ಎಂದು ಆತನ ನಿಶ್ಚಿತ ವಧು ಜಿಯಾ ಪೊಲೀಸರಿಗೆ ತಿಳಿಸಿದ್ದರಿಂದ, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು. ಆದರೆ, ಕೇತನ್ ಸಾವಿನ ನಂತರವೂ ಜಿಯಾ ಯಾವುದೇ ದುಃಖವಿಲ್ಲದೇ ಆರಾಮಾಗಿ ಓಡಾಡಿಕೊಂಡು ಇದ್ದಿದ್ದರಿಂದ ಪೊಲೀಸರಲ್ಲಿ ಸಣ್ಣ ಸಂಶಯ ಮೂಡಿತು. ಬಳಿಕ ಪೊಲೀಸರು ನಡೆಸಿದ ತೀವ್ರ ತನಿಖೆಯ ವೇಳೆ, ಜಿಯಾಳ ಅಸಲಿ ಮುಖವಾಡ ಕಳಚಿ ಬಿದ್ದಿತು. ತನ್ನ ಪ್ರಿಯಕರ ಚೇತನ್ ಚೌಧರಿಯೊಂದಿಗೆ ಸೇರಿ ಕೇತನ್‌ನನ್ನು ಕೋಟೆಯಿಂದ ಕೆಳಗೆ ತಳ್ಳಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ಪ್ರಸ್ತುತ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.
ಕುಟುಂಬಸ್ಥರು ಜಿಯಾ ಮತ್ತು ಕೇತನ್ ಮದುವೆಯನ್ನು ಮುಂಬರುವ ನವೆಂಬರ್ ತಿಂಗಳಿನಲ್ಲಿ ನಿಶ್ಚಯಿಸಿದ್ದರು. ಆದರೆ, ಜಿಯಾ ಆಗಲೇ ಚೇತನ್‌ನನ್ನು ಪ್ರೀತಿಸುತ್ತಿದ್ದರಿಂದ, ತಮ್ಮ ಸಂಬಂಧಕ್ಕೆ ಕೇತನ್ ಅಡ್ಡಿಯಾಗಿದ್ದಾನೆ ಎಂಬುದನ್ನು ಅರಿತ ಇವರಿಬ್ಬರು ಆತನನ್ನು ಕೊಲೆ ಮಾಡಲು ಕ್ರೂರ ಸಂಚು ರೂಪಿಸಿದರು.
ಜಿಯಾ ಜೂನ್ 14 ರಂದು ಕೇತನ್‌ನನ್ನು ಕೊಲೆ ಮಾಡಲು ಮೊದಲ ಬಾರಿ ಪ್ರಯತ್ನಿಸಿದಳು. ಅಂದು ಆಕೆ ಕೇತನ್‌ನನ್ನು ಕೋಟೆಗೆ ಕರೆದೊಯ್ದು ಕಂದಕದ ಅಂಚಿಗೆ ತಳ್ಳಿದ್ದಳು. ಆದರೆ, ಅದೃಷ್ಟವಶಾತ್ ಬೆಟ್ಟದ ಇಳಿಜಾರಿನಲ್ಲಿದ್ದ ದಟ್ಟ ಪೊದೆಯನ್ನು ಹಿಡಿದುಕೊಂಡು ಕೇತನ್ ಪ್ರಾಣಾಪಾಯದಿಂದ ಪಾರಾಗಿದ್ದನು. ಇದರಿಂದ ಗಾಬರಿಗೊಂಡ ಜಿಯಾ, ಅಲ್ಲಿ ಹಾವು ಇರುವುದನ್ನು ಕಂಡು ತಾನು ಕೂಗಾಡಿದ್ದಾಗಿ ಸುಳ್ಳು ಹೇಳಿ, ಕೇತನ್‌ನನ್ನು ಅಪ್ಪಿಕೊಂಡು ಆತನ ಗಮನ ಬೇರೆಡೆ ಸೆಳೆದು ತನ್ನ ಮೊದಲ ಕೊಲೆ ಯತ್ನವನ್ನು ಮುಚ್ಚಿಹಾಕಿದ್ದಳು.
ಮೊದಲ ಪ್ರಯತ್ನ ವಿಫಲವಾದ ನಂತರ, ಜಿಯಾ ಜೂನ್ 18 ರಂದು ಕೇತನ್‌ನನ್ನು ಮತ್ತೊಮ್ಮೆ ಬಲವಂತವಾಗಿ ಕೋಟೆಗೆ ಕರೆತಂದಿದ್ದಳು. ಈ ಬಾರಿ ಆಕೆ ತನ್ನ ಪ್ರಿಯಕರ ಚೇತನ್‌ನನ್ನೂ ಜೊತೆಗೆ ಕರೆಸಿಕೊಂಡಿದ್ದಳು. ತದನಂತರ ಇಬ್ಬರೂ ಸೇರಿ ಕೇತನ್‌ನನ್ನು ಹಿಂದಿನಿಂದ ತಳ್ಳಿ ಕೊಲೆ ಮಾಡಿದ್ದಾರೆ. ಸದ್ಯ ಆರೋಪಿಗಳಾದ ಜಿಯಾ ಮತ್ತು ಚೇತನ್‌ನನ್ನು ಇಂದು ಮಧ್ಯಾಹ್ನ 2.30 ಕ್ಕೆ ವಡಗಾಂವ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಹೆಚ್ಚಿನ ವಿಚಾರಣೆಗಾಗಿ ಇಬ್ಬರ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸುವಂತೆ ಪುಣೆ ಗ್ರಾಮಾಂತರ ಪೊಲೀಸರು ಕೋರಲಿದ್ದಾರೆ ಎಂದು ವರದಿಗಳು ತಿಳಿಸಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net