ಅಡ್ರೆಸ್​ ಇಲ್ಲದಿದ್ದರೂ 25 ವರ್ಷದ ಹಳೆಯ ಸಾಲ ತೀರಿಸಲು ಊರು ಹುಡುಕಿ ಬಂದ ಗೆಳೆಯ; ಸ್ನೇಹ ಅಂದ್ರೆ ಹೀಗಿರ್ಬೇಕು ಎಂದ ನೆಟ್ಟಿಗರು..Kerala-Telangana friends

Kerala Telangana friends
Kerala Telangana friends
Published on
ಹೌದು, ಕೇರಳದ ಪಾಲಕ್ಕಾಡ್​​​​ ಮೂಲದ ಮೊಹಮ್ಮದ್​ ಇಸ್ಮಾಯಿಲ್​ ಎಂಬುವವರು 25 ವರ್ಷದ ಹಿಂದೆ ಧರ್ಮಪುರಿಯ ಎಡ್ಲಾ ಲಚ್ಚಣ್ಣ ಎಂಬುವವರ ಬಳಿ 25 ಸಾವಿರ ರೂಪಾಯಿ ಪಡೆದುಕೊಂಡಿದ್ದನ್ನು ವಾಪಸ್​ ನೀಡಲು ಬಂದ ಘಟನೆ ತೆಲಂಗಾಣದ ಜಗ್ತಿಯಾಲ್​ ಜಿಲ್ಲೆಯ ಧರ್ಮಪುರಿಯಲ್ಲಿ ನಡೆದಿದೆ. ಮೊಹಮ್ಮದ್​ ಅವರ ಪ್ರಮಾಣಿಕತೆ, ಕೃತಜ್ಞತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏನಾಗಿತ್ತು ಈ ಹಿಂದೆ?

25 ವರ್ಷದ ಹಿಂದೆ ಮೊಹಮ್ಮದ್ ಇಸ್ಮಾಯಿಲ್ ಮತ್ತು ಧರ್ಮಪುರಿಯ ಎಡ್ಲಾ ಲಚಣ್ಣ ಇಬ್ಬರು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಎಡ್ಲಾ ಅವರ ಬಳಿ ಇಸ್ಮಾಯಿಲ್​ ಅವರು ಹಣ ತೆಗೆದುಕೊಂಡಿದ್ದರು. ಭಾರತಕ್ಕೆ ಮರಳಿದ ತಕ್ಷಣ 25 ಸಾವಿರ ವಾಪಸ್​ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ, ಇಬ್ಬರು ಭಾರತಕ್ಕೆ ಮರಳಿದರೂ ಕಾರಣಾಂತರದಿಂದ ಭೇಟಿ ಮಾಡೋದು ಸಾಧ್ಯವಾಗಲಿಲ್ಲ. ಕಾಲಾನಂತರದಲ್ಲಿ ಎಡ್ಲಾ ಲಚಣ್ಣ ರ ಮೊಬೈಲ್​ ನಂಬರ್​​, ವಿಳಾಸ ಎಲ್ಲವೂ ನಾಶವಾಗಿತ್ತು. ಆದರೆ ಹಣ ಪಡೆದುಕೊಂಡಿದ್ದನ್ನು ಹೇಗೆ ವಾಪಸ್ ಮಾಡೋದು ಎಂದು ಪರಿತಪಿಸುತ್ತಿದ್ದರು.

ಗೆಳೆಯನ ಪ್ರಾಮಾಣಿಕತೆಗೆ ಫಿದಾ

ಇಸ್ಮಾಯಿಲ್​ ಅವರ ಬಳಿ ವಿಳಾಸವೇ ಇರಲಿಲ್ಲ ಆದರೆ ಹಣ ಹೇಗಾದರೂ ತಲುಪಿಸಲೇ ಬೇಕು ಎನ್ನುವ ಛಲವಿತ್ತು. ಹೀಗಾಗಿ ಗೆಳೆಯನನ್ನು ಹುಡುಕಿ ಧರ್ಮಪುರಿಗೆ ಕಾಲಿಟ್ಟರು. ಅಲ್ಲಿ ಜನರ ಬಗ್ಗೆ ಆತನ ಬಗ್ಗೆ ಹೇಳುತ್ತಾ, ಕೇಳುತ್ತಾ ಕೊನೆಗೆ ಮನೆಯನ್ನು ಹುಡುಕಿದರು. ಅವರ ಮನೆಯನ್ನು ಹುಡುಕಿ ಬಾಗಿಲು ತಟ್ಟಿದಾಗ ಅವರು ಗಲ್ಫ್​ಗೆ ತೆರಳಿರುವುದು ತಿಳಿದು ಬಂತು.
ಎಡ್ಲಾ ಲಚ್ಚಣ್ಣರ ಮೊಬೈಲ್​​ ನಂಬರ್​ ಪಡೆದುಕೊಂಡು ಕರೆ ಮಾಡಿ ಮಾತನಾಡಿದರು. ಮಿತ್ರನ ಧ್ವನಿ ಕೇಳಿ ಆತ ಸಂತಸಪಟ್ಟರು. ಕಣ್ಣಾಲಿ ತುಂಬಿ ಬಂತು. ಬಳಿಕ 25 ಸಾವಿರವನ್ನು ಅವರ ಕುಟುಂಬಸ್ಥರಿಗೆ ಕೊಟ್ಟು ಗೆಳೆಯನನ್ನು ಭೇಟಿಯಾಗದೆ ಇದ್ದದ್ದನ್ನು ನೆನೆದು ಬೇಸರ ಮಾಡಿಕೊಂಡರು. ಆದರೆ ಮಾತು ಕೊಟ್ಟಂತೆ ನಡೆದುಕೊಂಡು ಸಂತೃಪ್ತರಾಗಿ ತಮ್ಮ ಊರಿನತ್ತ ಹೊರಟರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net