ಕೇರಳದಲ್ಲಿ ವರುಣಾರ್ಭಟ: ಈವರೆಗೆ 8 ಮಂದಿ ಸಾವು, ಹಲವೆಡೆ ಭೂಕುಸಿತ-ಪ್ರವಾಹದ ಭೀತಿ, ಕಬಿನಿಗೆ ಹೆಚ್ಚಿದ ಒಳಹರಿವು! Kerala Heavy Rains
ಕೇರಳದಲ್ಲಿ ವರುಣಾರ್ಭಟ: ಈವರೆಗೆ 8 ಮಂದಿ ಸಾವು, ಹಲವೆಡೆ ಭೂಕುಸಿತ-ಪ್ರವಾಹದ ಭೀತಿ, ಕಬಿನಿಗೆ ಹೆಚ್ಚಿದ ಒಳಹರಿವು! Kerala Heavy Rains
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೇರಳದಲ್ಲಿ ಮಳೆಯ ಅಬ್ಬರಕ್ಕೆ ಎಂಟು ಮಂದಿ ಸಾವು ಮತ್ತು ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೂಕುಸಿತದ ಆತಂಕ
ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿ ಎಂಟು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ರಾಜ್ಯಾದ್ಯಂತ ಒಟ್ಟು ಎರಡು ನೊರಕ್ಕೂ ಹೆಚ್ಚು ಪರಿಹಾರ ಶಿಬಿರಗಳಿಗೆ ಐದು ಸಾವಿರಕ್ಕೂ ಅಧಿಕ ಸಂತ್ರಸ್ತರ ಸ್ಥಳಾಂತರ
ಇಡುಕ್ಕಿ ಜಿಲ್ಲೆಯಲ್ಲಿ ಭೂಕುಸಿತದಿಂದ ಮನೆಗಳಿಗೆ ನುಗ್ಗಿದ ನೀರು ಹಾಗೂ ಅಸ್ತವ್ಯಸ್ತಗೊಂಡ ಪ್ರಮುಖ ರಸ್ತೆಗಳ ಸಂಚಾರ
ವಯನಾಡಿನಲ್ಲಿ ಮುಂದುವರಿದ ಭಾರಿ ಮಳೆಯ ಪ್ರಭಾವದಿಂದ ಮೈಸೂರಿನ ಕಬಿನಿ ಜಲಾಶಯಕ್ಕೆ ಹೆಚ್ಚಾದ ನೀರಿನ ಒಳಹರಿವು
ತಿರುವನಂತಪುರಂ: ದೇವರ ನಾಡು ಹಾಗೂ ಪ್ರವಾಸಿಗರ ಸ್ವರ್ಗ ಕೇರಳದಲ್ಲಿ ಮಳೆರಾಯ ಅಬ್ಬರಿಸಿ, ಬೊಬ್ಬಿರಿಯುತ್ತಿದ್ದು ( Kerala Heavy Rains ) ಈವರೆಗೆ 8 ಮಂದಿ ಸಾವಿಗೀಡಾಗಿದ್ದು, 13ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತದ ಆತಂಕ ಹೆಚ್ಚಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆ ಪ್ರಕಾರ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಐಎಂಡಿ ಮುನ್ಸೂಚನೆಯಂತೆ ಪಟ್ಟನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಮಲಪ್ಪುರಂ, ಕೋಳಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಎರ್ನಾಕುಲಂ, ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಯಲ್ಲಿದೆ.
ಮುಖ್ಯಮಂತ್ರಿ ಕಚೇರಿಯ ಪ್ರಕಾರ, ಭಾರಿ ಮಳೆಯಿಂದ 27 ಮನೆಗಳು ನಾಶವಾಗಿವೆ ಮತ್ತು 196 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ರಾಜ್ಯಾದ್ಯಂತ ಒಟ್ಟು 5,792 ಜನರನ್ನು 209 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹದಿಂದ ತಮ್ಮ ಬದುಕನ್ನು ಕಳೆದುಕೊಂಡ ಸಂತ್ರಸ್ತರಿಗೆ ಎಲ್ಲ ರೀತಿಯ ಅಗತ್ಯ ನೆರವು ನೀಡುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಭರವಸೆ ನೀಡಿದ್ದಾರೆ.
ಭಾರೀ ಮಳೆಯಿಂದ ಹಠಾತ್ ನೆರೆ, ಭೂಕುಸಿತ, ರಸ್ತೆ ಜಲಾವೃತ ಹಾಗೂ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಎಲ್ಲ ಜಿಲ್ಲಾಡಳಿತಗಳಿಗೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳನ್ನು ತುರ್ತು ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗಿದ್ದು, ಭೂಕುಸಿತ ಮತ್ತು ಪ್ರವಾಹದ ಅಪಾಯ ಹೆಚ್ಚಿರುವ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಇಡುಕ್ಕಿಯಲ್ಲಿ ಭೂಕುಸಿತ, ಹಲವು ಮನೆಗಳಿಗೆ ನೀರು
ಇಡುಕ್ಕಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂಕುಸಿತ ಮತ್ತು ಪ್ರವಾಹಗಳಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಉಪ್ಪುಥಾರಾದಲ್ಲಿ ನೆಲಕುಸಿತ ಸಂಭವಿಸಿ ಪೊಲೀಸ್ ಜೀಪ್‌ಗೆ ಹಾನಿಯಾಗಿದೆ. ಕೊಕ್ಕಾಯರ್ ಪ್ರದೇಶದಲ್ಲಿ ಪುಲ್ಲಕಾಯರ್ ನದಿ ಉಕ್ಕಿ ಹರಿದದ್ದರಿಂದ ತಗ್ಗಿನಲ್ಲಿದ್ದ ಸೇತುವೆ ಜಲಾವೃತಗೊಂಡಿದೆ. ಸುತ್ತಮುತ್ತಲಿನ ಸುಮಾರು ಆರು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ಸಂಚಾರ ಅಸ್ತವ್ಯಸ್ತ
ಭಾರೀ ಮಳೆಯಿಂದ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ಥವಾಗಿದೆ. ಭೂಕುಸಿತದಿಂದ ಕಟ್ಟಪ್ಪನ–ವಝವಾರ ರಸ್ತೆ ಬಂದ್ ಆಗಿದ್ದು, ವಂಡಿಪೆರಿಯಾರ್ ಸಮೀಪ ಚೊಟ್ಟುಪಾರ ತೊರೆಯಲ್ಲಿ ನೀರಿನ ಮಟ್ಟ ಏರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ–183ರ ಸಂಚಾರಕ್ಕೂ ತೊಂದರೆಯಾಗಿದೆ. ಇದಲ್ಲದೆ, ಕೋಳಿಕ್ಕೋಡ್, ಮಲಪ್ಪುರಂ ಹಾಗೂ ಪಾಲಕ್ಕಾಡ್ ಜಿಲ್ಲೆಗಳಲ್ಲಿಯೂ ಪ್ರವಾಹ ಹಾಗೂ ಸಣ್ಣ ಪ್ರಮಾಣದ ಭೂಕುಸಿತಗಳಾಗಿವೆ.
ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ, ನದಿ ತೀರ ಹಾಗೂ ಗುಡ್ಡಗಾಡು ಪ್ರದೇಶಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಕೇರಳ ಸರ್ಕಾರ ಮತ್ತು ಹವಾಮಾನ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿವೆ.
ಕಬಿನಿಗೆ ಹೆಚ್ಚಾದ ಒಳಹರಿವು
ಕೇರಳದ ವಯನಾಡು ಹಾಗೂ ಸುತ್ತಮುತ್ತಲಿನ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಪ್ರಮುಖ ಜಲಮೂಲವಾದ ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ವಯನಾಡಿನ ಭಾರಿ ಮಳೆಯ ಪ್ರಭಾವದಿಂದ ಜಲಾಶಯದ ನೀರಿನ ಮಟ್ಟದಲ್ಲೂ ಕೂಡ ಭರ್ಜರಿ ಏರಿಕೆ ಕಂಡುಬರುತ್ತಿದ್ದು, ಕಬಿನಿ ಜಲಾಶಯವು ಭರ್ತಿಯಾಗುವ ಹಂತದತ್ತ ಸಾಗುತ್ತಿರುವುದರಿಂದ ನದಿ ಪಾತ್ರದ ಜನರಲ್ಲಿ ಹಾಗೂ ಕೃಷಿ ವಲಯದಲ್ಲಿ ನಿರಾಳತೆಯ ಜತೆಗೆ ಮುನ್ನೆಚ್ಚರಿಕೆಯ ವಾತಾವರಣ ನಿರ್ಮಾಣವಾಗಿದೆ, (ಏಜೆನ್ಸೀಸ್).