ಕೇರಳ ಬಿಜೆಪಿ ಎರಡನೇ ಪಟ್ಟಿ ರಿಲೀಸ್: ಕುಮ್ಮನಂ ರಾಜಶೇಖರನ್ ಸೇರಿ 39 ಅಭ್ಯರ್ಥಿಗಳ ಘೋಷಣೆ! | Kerala Election

Kerala Election | ಕೇರಳ ಬಿಜೆಪಿ ಎರಡನೇ ಪಟ್ಟಿ ರಿಲೀಸ್
Kerala Election | ಕೇರಳ ಬಿಜೆಪಿ ಎರಡನೇ ಪಟ್ಟಿ ರಿಲೀಸ್
Published on
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣಾ (Kerala Election) ಕಣ ರಂಗೇರುತ್ತಿದ್ದು, ಬಿಜೆಪಿ ಗುರುವಾರ (ಮಾರ್ಚ್ 19) ತನ್ನ 39 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಮೂಲಕ ಕೇರಳದ ಆಡಳಿತಾರೂಢ ಎಲ್‌ಡಿಎಫ್‌ಗೆ ಪ್ರಬಲ ಪೈಪೋಟಿ ನೀಡಲು ಕೇಸರಿ ಪಕ್ಷ ಸಜ್ಜಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಧರ್ಮಡಂ ಕ್ಷೇತ್ರದಲ್ಲಿ ಕೆ. ರಂಜಿತ್​​ರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ನೇರ ಸವಾಲು ಹಾಕಿದೆ. ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಅನುಭವಿ ನಾಯಕರು ಹಾಗೂ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದ್ದು, ಮಿಜೋರಾಂನ ಮಾಜಿ ರಾಜ್ಯಪಾಲರಾದ ಕುಮ್ಮನಂ ರಾಜಶೇಖರನ್ ಆರನ್ಮುಲಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ರಾಬಿನ್ ರಾಧಾಕೃಷ್ಣನ್: ಕುಂದರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಅಶ್ವಿನಿ ಎಂ.ಎಲ್: ಕಾಸರಗೋಡು ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಬಿ. ಗೋಪಾಲಕೃಷ್ಣನ್ (ವಕೀಲರು): ಗುರುವಾಯೂರು ಕ್ಷೇತ್ರ.
ಪಿ.ಆರ್. ಶಿವಶಂಕರ್: ಎರ್ನಾಕುಲಂ ಕ್ಷೇತ್ರ.

ಮಹಿಳಾ ಪ್ರಾತಿನಿಧ್ಯಕ್ಕೆ ಒತ್ತು

ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಆರು ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನ ನೀಡಲಾಗಿದ್ದು, ಇದರೊಂದಿಗೆ ಪಕ್ಷದ ಒಟ್ಟು ಮಹಿಳಾ ಅಭ್ಯರ್ಥಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿ ಈ ಬಾರಿ ಹೆಚ್ಚಿನ ಒತ್ತು ನೀಡುತ್ತಿರುವುದು ಸ್ಪಷ್ಟವಾಗಿದೆ.

ರಾಜಶೇಖರನ್ ಚುನಾವಣಾ ಸವಾಲು

ಹಿರಿಯ ನಾಯಕ ಕುಮ್ಮನಂ ರಾಜಶೇಖರನ್ ಅವರಿಗೆ ಈ ಚುನಾವಣೆ ಅತ್ಯಂತ ನಿರ್ಣಾಯಕವಾಗಿದ್ದು, 2019ರ ಲೋಕಸಭೆ ಚುನಾವಣೆಯಲ್ಲಿ ಶಶಿ ತರೂರ್ ವಿರುದ್ಧ ಹಾಗೂ 2021ರ ವಿಧಾನಸಭಾ ಚುನಾವಣೆಯಲ್ಲಿ ನೇಮಮ್ ಕ್ಷೇತ್ರದಿಂದ ಸೋಲನುಭವಿಸಿದ್ದ ಅವರಿಗೆ, ಈ ಬಾರಿ ಗೆಲುವು ಸಾಧಿಸಿ ಬಿಜೆಪಿಯ ಬಲ ಪ್ರದರ್ಶಿಸುವ ಅನಿವಾರ್ಯತೆ ಇದೆ.
2026 ರ ಕೇರಳ ವಿಧಾನಸಭಾ ಚುನಾವಣೆಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಎಣಿಕೆ ನಡೆಯಲಿದೆ. ಈ ಚುನಾವಣೆಯಲ್ಲಿ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ಸ್ಪರ್ಧೆ ನಿರೀಕ್ಷಿಸಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net