ಒಂದೇ ಚಕ್ರದ ಸೈಕಲ್​ನಲ್ಲಿ 11000 ಕಿ.ಮೀ ಪ್ರಯಾಣ! ಅದೊಂದು ಮಹತ್ವದ ಸಂದೇಶ ಸಾರಲು ಯುವಕನ ಬಿಗ್​ ಚಾಲೆಂಜ್​ | Kerala Cyclist

ಒಂದೇ ಚಕ್ರದ ಸೈಕಲ್​ನಲ್ಲಿ 11000 ಕಿ.ಮೀ ಪ್ರಯಾಣ
ಒಂದೇ ಚಕ್ರದ ಸೈಕಲ್​ನಲ್ಲಿ 11000 ಕಿ.ಮೀ ಪ್ರಯಾಣ
Published on

ಪ್ರಮುಖ ಮುಖ್ಯಾಂಶಗಳು

  • ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ಸನೀದ್‌ ವಿಶಿಷ್ಟ ಸೈಕಲ್‌ ಯಾತ್ರೆ
  • ಈಗಾಗಲೇ 7,000 ಕಿ.ಮೀ. ಕ್ರಮಿಸಿರುವ ಉತ್ಸಾಹಿ ಸಾಹಸಿ
  • ‘ಡ್ರಗ್ಸ್‌ ಬೇಡ, ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ’ ಎಂಬ ಸಂದೇಶ
ತಮಿಳುನಾಡು: ಯುವಜನತೆ ಮಾದಕ ವಸ್ತುಗಳ (ಡ್ರಗ್ಸ್) ಜಾಲಕ್ಕೆ ಬಲಿಯಾಗುವುದನ್ನು ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸಲು ಕೇರಳದ ಯುವಕನೊಬ್ಬ ತೊಟ್ಟಿರುವ ಪಣ ಸದ್ಯ ಹಲವರ ಮೆಚ್ಚುಗೆ, ಪ್ರಶಂಸೆಗೆ ಕಾರಣವಾಗಿದೆ (Kerala Cyclist).
ಮುಂಭಾಗದ ಚಕ್ರವೇ ಇಲ್ಲದ ಒಂದು ವಿಶೇಷ ಸೈಕಲ್‌ನಲ್ಲಿ ಅತ್ಯಂತ ಕಠಿಣ ಸವಾಲು ಕೈಗೊಂಡಿರುವ ಸನೀದ್​, ಕೇರಳದಿಂದ ಹಿಮಾಲಯದ ಎವರೆಸ್ಟ್ ಬೇಸ್ ಕ್ಯಾಂಪ್​ಗೆ ತಲುಪುವ ಗುರಿಯೊಂದಿಗೆ ಹೊರಟಿದ್ದು, ಸದ್ಯ ತಮಿಳುನಾಡಿನ ತಿರುಚಿರಾಪಳ್ಳಿ ತಲುಪಿದ್ದಾರೆ. ಬರೋಬ್ಬರಿ 11,000 ಕಿ.ಮೀ ಸುದೀರ್ಘ ಕಠಿಣ ಹಾದಿಯನ್ನು ಕೇವಲ ಒಂದೇ ಚಕ್ರದ ಸೈಕಲ್‌ನಲ್ಲಿ ಕ್ರಮಿಸುವ ಮೂಲಕ ಸನೀದ್ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಅಂದುಕೊಂಡಂತೆ ಯಶಸ್ವಿಯಾಗಿದ್ದಾರೆ.

ಸವಾಲಿಗೆ ಸನೀದ್​ ಸವಾಲು

ಈ ಕುರಿತು 'ಎಎನ್​ಐ' ಜತೆ ಮಾತನಾಡಿರುವ ಸನೀದ್​, "ನಾನು ಕೇರಳದಿಂದ ಕಾಶ್ಮೀರಕ್ಕೆ ಮುಂಭಾಗದ ಚಕ್ರವಿಲ್ಲದೆ ಸವಾರಿ ಮಾಡಿದ್ದೇನೆ. ಮತ್ತು ಈಗ ಅದೇ ಕೇರಳದಿಂದ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಹೋಗುತ್ತಿದ್ದೇನೆ. ನಾನು ಸಿವಿಲ್ ಇಂಜಿನಿಯರಿಂಗ್ ಮತ್ತು ಇಂಟೀರಿಯರ್ ಡಿಸೈನಿಂಗ್ ಓದಿರುವ ಪದವೀಧರ. ವೃತ್ತಿಪರ ಬೈಕ್ ಸ್ಟಂಟರ್ ಕೂಡ ಆಗಿದ್ದೇನೆ. ಭಾರತೀಯ ಸೇನೆಗೆ ಅವರ ಪರೇಡ್ ಸ್ಟಂಟ್‌ಗಳಿಗಾಗಿ ತರಬೇತಿ ಕೂಡ ನೀಡುತ್ತೇನೆ. ಇಲ್ಲಿಯವರೆಗೆ, ಇದೇ ಸೈಕಲ್​ನಲ್ಲಿ 7,000 ಕಿ.ಮೀ.ಗಳನ್ನು ಪೂರೈಸಿದ್ದೇನೆ ಎಂದರು.
ದಿನಕ್ಕೆ ಸರಾಸರಿ 50 ಕಿ.ಮೀ. ತಲುಪುವುದು ನನ್ನ ಟಾರ್ಗೆಟ್​. ಆಯಾ ಪ್ರದೇಶದ ರಸ್ತೆ ಮತ್ತು ಹವಾಮಾನ ಪರಿಸ್ಥಿತಿಗಳ ಮೇಲೆ ಪ್ರಯಾಣಿಸುವುದು ಸವಾಲಿನ ಸಂಗತಿ. ಸಾಮಾನ್ಯ ಸೈಕ್ಲಿಂಗ್‌ ವಿಷಯದಲ್ಲಿ ನನಗೆ 12 ವರ್ಷಗಳ ಅನುಭವವಿದೆ. ಈ ಪಯಣದ ಮುಖ್ಯ ಹಾಗೂ ಮೂಲ ಉದ್ದೇಶವೇ ಮಾದಕದ್ರವ್ಯದ ಅಗತ್ಯ ನಮ್ಮ ಜನರಿಗಿಲ್ಲ ಎಂದು ಹೇಳುವ ಸಂದೇಶ. ಈ ಸಂದೇಶವನ್ನು ಕೇರಳ, ತಮಿಳುನಾಡು ಮತ್ತು ದೇಶವ್ಯಾಪಿ ಹರಡಲು ಪಣತೊಟ್ಟಿದ್ದೇನೆ. ಇದರಿಂದ ಯಾರಾದರೂ ಬದಲಾದರೆ ಅಥವಾ ಅರಿತರೆ ಅದೇ ನನಗೆ ನಿಜವಾದ ದಾಖಲೆ, ಸಾಧನೆ ಎಲ್ಲ ಎಂದಿದ್ದಾರೆ.
ಜೀವನದಲ್ಲಿ ಸಾಧನೆಗೈಯಲು ಅಥವಾ ವಿಭಿನ್ನವಾಗಿ ಗುರುತಿಸಿಕೊಳ್ಳಲು ಯಾರೊಬ್ಬರಿಗೂ ಡ್ರಗ್ಸ್ ಅಗತ್ಯವಲ್ಲ. ನಿಮಗೆ ಖುಷಿ ಕೊಡುವ ಒಳ್ಳೆಯ ಹವ್ಯಾಸಗಳನ್ನು ಮಾತ್ರ ಬೆಳೆಸಿಕೊಳ್ಳಿ. ನನ್ನ ಈ ಜಾಗೃತಿ ಯಾತ್ರೆಯಿಂದ ಕನಿಷ್ಠ ಒಬ್ಬ ವ್ಯಕ್ತಿ ಮನಸ್ಸು ಬದಲಾಯಿಸಿಕೊಂಡರೂ, ಅದೇ ನನ್ನ ನಿಜವಾದ ವಿಶ್ವದಾಖಲೆ. ಕೇರಳ ಟು ನೇಪಲ್​ ಎಂಬ ಬೋರ್ಡ್​ ಅನ್ನು ತಮ್ಮ ಸೈಕಲ್​ ಮೇಲೆ ಹಾಕಿಕೊಂಡು ಸಾಗುತ್ತಿರುವ ಸನೀದ್ ಅವರ ಜಾಗೃತಿ ಯಾತ್ರೆಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ಹರಿದುಬರುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net