ವಿ ಡಿ ಸತೀಶನ್ ಮೊದಲ ಸಂಪುಟ ಸಭೆಯಲ್ಲೇ ಧಮಾಕಾ...ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಆಶಾ ಕಾರ್ಯಕರ್ತೆಯರ ಭತ್ಯೆ ಹೆಚ್ಚಳ! | Kerala Cabinet Decisions

Kerala Cabinet Decisions | ಕೇರಳ ನೂತನ ಮುಖ್ಯಮಂತ್ರಿ ವಿ ಡಿ ಸತೀಶನ್
Kerala Cabinet Decisions | ಕೇರಳ ನೂತನ ಮುಖ್ಯಮಂತ್ರಿ ವಿ ಡಿ ಸತೀಶನ್
Published on
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಹತ್ತು ವರ್ಷಗಳ ಬಳಿಕ ಮತ್ತೆ ಗದ್ದುಗೆ ಏರಿದೆ. ಸೋಮವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ ಡಿ ಸತೀಶನ್, ತಮ್ಮ ಚೊಚ್ಚಲ ಸಚಿವ ಸಂಪುಟ ಸಭೆಯಲ್ಲೇ (Kerala Cabinet Decisions) ಜನಸಾಮಾನ್ಯರನ್ನು ಆಕರ್ಷಿಸುವ ಮಹತ್ವದ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ.
ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ, ವೃದ್ಧರ ಯೋಗಕ್ಷೇಮಕ್ಕಾಗಿ ನೂತನ ಇಲಾಖೆ ಸ್ಥಾಪನೆ ಹಾಗೂ ಆಶಾ ಕಾರ್ಯಕರ್ತೆಯರ ಮಾಸಿಕ ಭತ್ಯೆ ಹೆಚ್ಚಳದಂತಹ ಪ್ರಮುಖ ತೀರ್ಮಾನಗಳಿಗೆ ಸಿಎಂ ಸತೀಶನ್​ ಸಹಿ ಹಾಕಿದ್ದಾರೆ.

ಆಶಾ ಹಾಗೂ ಅಂಗನವಾಡಿ ಸಿಬ್ಬಂದಿಗೆ ಆರ್ಥಿಕ ಬೂಸ್ಟ್‌

ಸಚಿವಾಲಯದ ಮುಂಭಾಗದಲ್ಲಿ ಸುದೀರ್ಘ ದಿನಗಳ ಕಾಲ ಪ್ರತಿಭಟನೆ ನಡೆಸಿದ್ದ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಮಣಿದಿರುವ ನೂತನ ಸರ್ಕಾರ, ಅವರ ಮಾಸಿಕ ಭತ್ಯೆಯನ್ನು 3,000 ರೂಪಾಯಿಗಳಷ್ಟು ಹೆಚ್ಚಿಸಿದೆ. ಇದರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಶಾಲೆಗಳ ಅಡುಗೆ ಸಿಬ್ಬಂದಿ, ಪ್ರೀ-ಪ್ರೈಮರಿ ಶಿಕ್ಷಕರು ಹಾಗೂ ಆಯಾಗಳ ಮಾಸಿಕ ವೇತನದಲ್ಲೂ ತಲಾ 1,000 ರೂಪಾಯಿಗಳನ್ನು ಹೆಚ್ಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಹಿರಿಯ ನಾಗರಿಕರ ಗೌರವಯುತ ಜೀವನ ಮತ್ತು ಆರೈಕೆಯನ್ನು ಖಚಿತಪಡಿಸಲು ಪ್ರತ್ಯೇಕ ಇಲಾಖೆಯೊಂದನ್ನು ಘೋಷಿಸಿದ ಮುಖ್ಯಮಂತ್ರಿಗಳು, ವಯೋವೃದ್ಧರನ್ನು ನಡೆಸಿಕೊಳ್ಳುವ ರೀತಿಯೇ ಸಮಾಜದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದರು. ಮತ್ತೊಂದೆಡೆ, 2023ರ ನವ ಕೇರಳ ಯಾತ್ರೆಯ ಅವಧಿಯಲ್ಲಿ ಯೂತ್ ಕಾಂಗ್ರೆಸ್ ಪದಾಧಿಕಾರಿಗಳ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದ ಮರುತನಿಖೆಗೆ ವಿಶೇಷ ತನಿಖಾ ತಂಡವನ್ನು (SIT) ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭ

ಇದಕ್ಕೂ ಮುನ್ನ ನಡೆದ ಅದ್ಧೂರಿ ಸಮಾರಂಭದಲ್ಲಿ ಕೇರಳದ ಗವರ್ನರ್ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವಿ.ಡಿ. ಸತೀಶನ್ ನೇತೃತ್ವದ ಸಚಿವರ ತಂಡಕ್ಕೆ ಪ್ರಮಾಣ ವಚನ ಬೋಧಿಸಿದರು. ಈ ಕ್ಷಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ನಾಯಕ ರಾಹುಲ್ ಗಾಂಧಿ, ವಯನಾಡ್​ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೆ.ಸಿ. ವೇಣುಗೋಪಾಲ್ ಸಾಕ್ಷಿಯಾದರು.
ನೂತನ ಸರ್ಕಾರಕ್ಕೆ ಶುಭ ಹಾರೈಸಿದ ರಾಹುಲ್ ಗಾಂಧಿ, ಇದು ಜನರ ಆಶೋತ್ತರಗಳ ಸರ್ಕಾರ ಎಂದು ಬಣ್ಣಿಸಿದರು. ಸಂಪುಟದ ನಿರ್ಧಾರದಂತೆ ಹಿರಿಯ ಶಾಸಕ ಜಿ. ಸುಧಾಕರನ್​​ರನ್ನು ಪ್ರೊ-ಟೆಂ ಸ್ಪೀಕರ್ ಆಗಿ ನೇಮಿಸಲಾಗಿದ್ದು, ಮೇ 21 ರಂದು ನೂತನ ಶಾಸಕರ ಪ್ರಮಾಣ ವಚನ ಹಾಗೂ ಮೇ 22 ರಂದು ಸ್ಪೀಕರ್ ಆಯ್ಕೆಗಾಗಿ ಜಂಟಿ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net