ಕೇರಳ UDF ಮೈತ್ರಿಕೂಟದಲ್ಲಿ ಬಿಕ್ಕಟ್ಟು; ಸಚಿವರ ಖಾತೆ ಹಂಚಿಕೆ ವಿಳಂಬ...ಉನ್ನತ ಶಿಕ್ಷಣ, ಮೀನುಗಾರಿಕೆ ಇಲಾಖೆಗೆ ಮುಸುಕಿನ ಗುದ್ದಾಟ! | Kerala Cabinet

Kerala Cabinet | ಕೇರಳ UDF ಮೈತ್ರಿಕೂಟದಲ್ಲಿ ಬಿಕ್ಕಟ್ಟು
Kerala Cabinet | ಕೇರಳ UDF ಮೈತ್ರಿಕೂಟದಲ್ಲಿ ಬಿಕ್ಕಟ್ಟು
Published on
Kerala Cabinet: ಕೇರಳದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ನೇತೃತ್ವದ ನೂತನ ಸರ್ಕಾರ ನಿನ್ನೆ (ಸೋಮವಾರ ಮೇ 18) ಅಸ್ತಿತ್ವಕ್ಕೆ ಬಂದಿದ್ದು, ವಿ ಡಿ ಸತೀಶನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಮೈತ್ರಿಕೂಟದ ಪಾಲುದಾರರ ನಡುವೆ ಸಚಿವ ಸಂಪುಟದ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ತಲೆದೋರಿವೆ ಎನ್ನಲಾಗಿದ್ದು, ಇದರ ಪರಿಣಾಮವಾಗಿ ಹೊಸ ಸಂಪುಟದ ಇಲಾಖೆಗಳ ಅಧಿಕೃತ ಪ್ರಕಟಣೆ ವಿಳಂಬವಾಗಿದೆ ಎಂದು ವರದಿಯಾಗಿದೆ.
ಯುಡಿಎಫ್​​ ಮಿತ್ರಪಕ್ಷಗಳ ನಡುವೆ ಕೆಲವು ಪ್ರಮುಖ ಇಲಾಖೆಗಳ ಹಂಚಿಕೆಯ ಕುರಿತು ಅಸಮಾಧಾನ ಮೂಡಿದ್ದು, ಇದನ್ನು ಬಗೆಹರಿಸಲು ಹಿರಿಯ ನಾಯಕರುಗಳಿಂದ ತೀವ್ರ ಕಸರತ್ತು ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಷಯವಾಗಿ ಕಾಂಗ್ರೆಸ್ ಹಿರಿಯ ನಾಯಕ ಕೆ. ಮುರಳೀಧರನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಉನ್ನತ ಶಿಕ್ಷಣ ಮತ್ತು ಮೀನುಗಾರಿಕೆ ಇಲಾಖೆಗಳನ್ನು ಯಾರಿಗೆ ನೀಡಬೇಕು ಎಂಬ ವಿಷಯದಲ್ಲಿ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯಗಳಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಈ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಮತ್ತು ಸಚಿವರ ಪೋರ್ಟ್‌ಫೋಲಿಯೊಗಳ ಅಧಿಸೂಚನೆಯನ್ನು ಸಂಜೆಯ ವೇಳೆಗೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಕೆಲವು ಸಚಿವರ ಇಲಾಖೆಗಳಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇರುವುದರಿಂದ ಈ ವಿಳಂಬ ಉಂಟಾಗಿದ್ದು, ಮಿತ್ರಪಕ್ಷಗಳ ಕಳವಳವನ್ನು ದೂರ ಮಾಡಲು ಕಾಂಗ್ರೆಸ್ ಪಕ್ಷದವರ ಖಾತೆಗಳಲ್ಲೇ ಕೆಲವು ಮಾರ್ಪಾಡುಗಳು ಮಾಡಿಕೊಳ್ಳಬೇಕಾಗುತ್ತದೆ ಎಂದು ಮುರಳೀಧರನ್ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸತೀಶನ್ ನೇತೃತ್ವದ 21 ಸದಸ್ಯರ ಈ ಸಂಪುಟದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದ 11 ಸಚಿವರು, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನಿಂದ ಐದು ಸಚಿವರು ಸ್ಥಾನ ಪಡೆದಿದ್ದಾರೆ. ಇನ್ನುಳಿದ ಐದು ಸ್ಥಾನಗಳನ್ನು ಕೇರಳ ಕಾಂಗ್ರೆಸ್ (ಜಾಕೋಬ್), ಕೇರಳ ಕಾಂಗ್ರೆಸ್ (ಜೋಸೆಫ್) ಮತ್ತು ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ (RSP) ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ.
ಈ ಸಚಿವರ ಪೋರ್ಟ್‌ಫೋಲಿಯೊಗಳ ಅಂತಿಮ ಪಟ್ಟಿಯನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಸಲ್ಲಿಸಿ, ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದ ನಂತರವಷ್ಟೇ ಇಲಾಖೆಗಳ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ಖಾತೆ ಹಂಚಿಕೆಯ ವಿಳಂಬಕ್ಕೆ ಮೈತ್ರಿ ಪಕ್ಷಗಳ ಒತ್ತಡ ಮಾತ್ರವಲ್ಲದೆ, ವಿವಿಧ ಸಮುದಾಯಗಳ ಪ್ರಭಾವವೂ ಕಾರಣವಾಗಿದ್ದು, ಪ್ರಮುಖ ಇಲಾಖೆಗಳ ಹಂಚಿಕೆಗಾಗಿ ಸಮುದಾಯಗಳ ಗುಂಪುಗಳಿಂದಲೂ ಸರ್ಕಾರದ ಮೇಲೆ ತೀವ್ರ ಒತ್ತಡವಿದೆ ಎನ್ನಲಾಗಿದೆ.

ಸಿಎಂ ಕುರ್ಚಿಗೂ ನಡೆದಿತ್ತು ಹಗ್ಗಜಗ್ಗಾಟ..

ಇದಕ್ಕೂ ಮುನ್ನ, ಮುಖ್ಯಮಂತ್ರಿ ಯಾರಾಗಬೇಕು ಎಂಬ ಭಿನ್ನಾಭಿಪ್ರಾಯದ ಕಾರಣದಿಂದಾಗಿಯೇ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ 10 ದಿನಗಳ ಬಳಿಕ ಸಿಎಂ ಹೆಸರನ್ನು ಪ್ರಕಟಿಸಲಾಗಿತ್ತು ಎನ್ನುವುದು ಗಮನಿಸಬೇಕಾದ ಸಂಗತಿ.
ಸಂಪುಟದಲ್ಲಿ ಲ್ಯಾಟಿನ್ ಕ್ಯಾಥೋಲಿಕ್ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಅಸಮಾಧಾನ ಮತ್ತು ಮೀನುಗಾರಿಕೆ ಇಲಾಖೆಯ ಹಂಚಿಕೆಯ ಕುರಿತ ಕಳವಳಗಳ ನಡುವೆ ಮುಖ್ಯಮಂತ್ರಿ ಸತೀಶನ್ ಆರ್ಚ್ ಬಿಷಪ್ ಥಾಮಸ್ ಜೆ ನೆಟ್ಟೊರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಲ್ಯಾಟಿನ್ ಕ್ಯಾಥೋಲಿಕ್ ಸಮುದಾಯವು ಹೆಚ್ಚಾಗಿ ಕರಾವಳಿ ತೀರದಲ್ಲಿ ವಾಸಿಸುತ್ತಿದ್ದು, ಅವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಈ ಮೀನುಗಾರಿಕೆ ಇಲಾಖೆಯ ಹಂಚಿಕೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಮಹತ್ವದ ತಿರುವು ಪಡೆದುಕೊಂಡಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net