140 ಕ್ಷೇತ್ರ... ಟಫ್​ ಫೈಟ್​... ಕೇರಳದಲ್ಲಿ ಇತಿಹಾಸ ಬದಲಿಸುತ್ತಾ ಯುಡಿಎಫ್..? ಸಮೀಕ್ಷೆ ನೀಡಿದ ಶಾಕಿಂಗ್ ರಿಪೋರ್ಟ್ ಇಲ್ಲಿದೆ! | Matrize Survey

Matrize Survey | ಕೇರಳದಲ್ಲಿ ಇತಿಹಾಸ ಬದಲಿಸುತ್ತಾ ಯುಡಿಎಫ್..?
Matrize Survey | ಕೇರಳದಲ್ಲಿ ಇತಿಹಾಸ ಬದಲಿಸುತ್ತಾ ಯುಡಿಎಫ್..?
Published on
Matrize Survey: ಕೇರಳ ಚುನಾವಣೆಗೆ ಇನ್ನೇರಡು ದಿನ ಬಾಕಿ ಉಳಿದಿದ್ದು, ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ, ಯಾವುದೇ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಗದೆ ಬಿಜೆಪಿ ಕಿಂಗ್‌ಮೇಕರ್ ಆಗುವ ಸಾಧ್ಯತೆಯಿದೆ ಎಂದು ಮ್ಯಾಟ್ರಿಜ್ ಸಂಸ್ಥೆ ಭವಿಷ್ಯ ನುಡಿದಿದೆ.
140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಈ ಬಾರಿ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (LDF) ಮತ್ತು ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ (UDF) ನಡುವೆ ಅತ್ಯಂತ ನಿಕಟವಾದ ಪೈಪೋಟಿ ಏರ್ಪಡಲಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದ್ದು, ಈ ಸಮೀಕ್ಷೆಯ ಪ್ರಮುಖ ಅಂಶವೆಂದರೆ, ರಾಜ್ಯದಲ್ಲಿ ಯಾವುದೇ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯುವ ಸಾಧ್ಯತೆ ಇಲ್ಲ ಎನ್ನುವುದು.
ಅಂಕಿಅಂಶಗಳ ಪ್ರಕಾರ ಯುಡಿಎಫ್ 67-73 ಸ್ಥಾನಗಳನ್ನು ಪಡೆಯುವ ಮೂಲಕ ಅತಿ ದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮುವ ನಿರೀಕ್ಷೆಯಿದ್ದರೆ, ಎಲ್‌ಡಿಎಫ್ 62-68 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ವಿಶೇಷವಾಗಿ, 5 ರಿಂದ 8 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಹೊಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು, ಸರ್ಕಾರ ರಚನೆಯಲ್ಲಿ ನಿರ್ಣಾಯಕವಾದ ಪಾತ್ರ ವಹಿಸುವ ಸಾಧ್ಯತೆಯಿದೆ. ಇತರ ಪಕ್ಷಗಳು 0-3 ಸ್ಥಾನಗಳಿಗೆ ಸೀಮಿತವಾಗಬಹುದು ಎಂದು ಅಂದಾಜಿಸಲಾಗಿದೆ.

ಮತ ಹಂಚಿಕೆಯ ಲೆಕ್ಕಾಚಾರ

ಮತ ಹಂಚಿಕೆಯ ವಿಚಾರದಲ್ಲಿ ಯುಡಿಎಫ್ ಶೇ. 42 ರಷ್ಟು ಮತಗಳನ್ನು ಪಡೆಯುವ ಮೂಲಕ ಮುನ್ನಡೆ ಸಾಧಿಸಬಹುದು ಎಂದು ಅಂದಾಜಿಸಲಾಗಿದ್ದು, ಎಲ್‌ಡಿಎಫ್ ಶೇ. 39 ಮತ್ತು ಎನ್‌ಡಿಎ ಶೇ. 15 ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಪ್ರಾದೇಶಿಕವಾಗಿ ನೋಡುವುದಾದರೆ, ಮಲಬಾರ್ ಭಾಗದಲ್ಲಿ ಯುಡಿಎಫ್ ಮೇಲುಗೈ ಸಾಧಿಸುವ ಮುನ್ಸೂಚನೆ ಇದ್ದು ಅಲ್ಲಿ 25-27 ಸ್ಥಾನಗಳನ್ನು ಗೆಲ್ಲಬಹುದು, ಆದರೆ ಎಲ್‌ಡಿಎಫ್ ಅಲ್ಲಿ 20-22 ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು ಎನ್ನಲಾಗಿದೆ.
ದಕ್ಷಿಣ ಕೇರಳದಲ್ಲಿ ಎರಡೂ ಪ್ರಮುಖ ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿ ಇದ್ದು, ಎಲ್‌ಡಿಎಫ್ 23-26 ಸ್ಥಾನಗಳನ್ನು ಹಾಗೂ ಯುಡಿಎಫ್ 20-23 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಈ ಮೂಲಕ ಕೇರಳವು ಈ ಬಾರಿ ಸಾಂಪ್ರದಾಯಿಕ ದ್ವಿಮುಖ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆಯತ್ತ ವಾಲಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ರಾಜಕೀಯ ಸಮೀಕರಣಗಳನ್ನು ಗಮನಿಸಿದರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಉತ್ಸಾಹದಲ್ಲಿದೆ. ಇದಕ್ಕಾಗಿ ಸಿಪಿಐ(ಎಂ), ಸಿಪಿಐ, ಕೇರಳ ಕಾಂಗ್ರೆಸ್ (ಎಂ), ಆರ್‌ಜೆಡಿ ಮತ್ತು ಎನ್‌ಸಿಪಿ (ಶರದ್ ಪವಾರ್) ಸೇರಿದಂತೆ ಹಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇತ್ತ 2011ರ ನಂತರ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಮುಸ್ಲಿಂ ಲೀಗ್ ಮತ್ತು ಆರ್‌ಎಸ್‌ಪಿಯಂತಹ ಪಕ್ಷಗಳ ಬಲದೊಂದಿಗೆ ಕಣಕ್ಕಿಳಿದಿದೆ. ಇನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಈ ಬಾರಿ ಬಿಡಿಜೆಎಸ್ ಮತ್ತು ಟ್ವೆಂಟಿ20 ಪಕ್ಷದೊಂದಿಗೆ ಕೈಜೋಡಿಸಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಲು ಮುಂದಾಗಿದೆ.

ಹಿಂದಿನ ಚುನಾವಣೆಗಳ ಫಲಿತಾಂಶ ಇಲ್ಲಿದೆ

2021ರಲ್ಲಿ ಎಲ್‌ಡಿಎಫ್ 99 ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು. ಆಗ ಯುಡಿಎಫ್ ಕೇವಲ 41 ಸ್ಥಾನಗಳಿಗೆ ಸೀಮಿತವಾಗಿತ್ತು ಮತ್ತು ಬಿಜೆಪಿ ಖಾತೆಯನ್ನೇ ತೆರೆದಿರಲಿಲ್ಲ. 2016ರಲ್ಲೂ ಎಲ್‌ಡಿಎಫ್ 77 ಸ್ಥಾನಗಳೊಂದಿಗೆ ಸ್ಪಷ್ಟ ಮುನ್ನಡೆ ಸಾಧಿಸಿತ್ತು. ಆದರೆ ಈ ಬಾರಿಯ ಸಮೀಕ್ಷೆಗಳು ಸಂಪೂರ್ಣ ಭಿನ್ನವಾದ ಚಿತ್ರಣವನ್ನು ನೀಡುತ್ತಿದ್ದು, ಈ ಎಲ್ಲಾ ಕುತೂಹಲಗಳಿಗೆ ತೆರೆಬೀಳಲು ಏಪ್ರಿಲ್ 9 ರಂದು ನಡೆಯಲಿರುವ ಮತದಾನ ಮತ್ತು ಮೇ 4 ರಂದು ನಡೆಯಲಿರುವ ಮತ ಎಣಿಕೆಯ ಫಲಿತಾಂಶಕ್ಕಾಗಿ ಕಾಯಬೇಕಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net