ತಮ್ಮನ ಸಾವಿನ ಸುಳಿವು ಕೊಟ್ಟ ವಾಟ್ಸಾಪ್ ಮೆಸೇಜ್!; Sharjahದಲ್ಲಿ ಉಡುಪಿ ಮೂಲದ ವ್ಯಕ್ತಿ ಹ*ತ್ಯೆ, ಪತ್ನಿ-ಮಗ ನಾಪತ್ತೆ

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Published on
  • ಕುಂದಾಪುರ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಬರ್ಬರ ಹತ್ಯೆ

  • ಓಮನ್ ಮಾರ್ಗದ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಶವ ಪತ್ತೆ

  • ಮೃತನ ಪತ್ನಿ ಟೀನಾ ಮತ್ತು 10ನೇ ತರಗತಿ ಓದುತ್ತಿರುವ ಅವರ ಮಗನಿಗಾಗಿ ಶೋಧ

ಉಡುಪಿ: ಯುನೈಟೆಡ್ ಅಬ್ ಇಮಿರೇಟ್ಸ್‌ನ (ಯುಎಇ) ಶಾರ್ಜಾದಲ್ಲಿ ಕಳೆದ ಜುಲೈ ತಿಂಗಳಲ್ಲಿ ಕುಂದಾಪುರ ನಗರದ ಪಾರಿಜಾತ ಸಮೀಪದ ಹೊನ್ನೇಕೇರಿ ನಿವಾಸಿಯೊಬ್ಬರನ್ನು ಭೀಕರವಾಗಿ ಕೊಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ನಾಪತ್ತೆಯಾಗಿರುವ ಮೃತರ ಪತ್ನಿ ಹಾಗೂ ಪುತ್ರನಿಗಾಗಿ, ಕೊಲೆಗೆ ಕಾರಣ ಏನು ಎನ್ನುವುದರ ತನಿಖೆ ಮುಂದುವರೆಸಲಾಗಿದೆ ಎನ್ನಲಾಗಿದೆ.

ಆಲ್ವಿನ್​ ಪ್ರಕಾಶ್​​​​​​ ಕುಂದರ್​(50) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆಲ್ವಿನ್​ ಸಹೋದರ ಅನಿಲ್​ ಪ್ರಶಾಂತ್​ ಕುಂದರ್ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

14 ವರ್ಷದಿಂದ ಶಾರ್ಜಾದಲ್ಲಿ ಕೆಲಸ

ಕಳೆದ 14 ವರ್ಷದಿಂದ ಆಲ್ವಿನ್​ ಪ್ರಕಾಶ್​​​​​​ ಕುಂದರ್​(50) ಶಾರ್ಜಾದ ಖಾಸಗಿ ವಿಮಾನ ಕಂಪನಿಯಲ್ಲಿ ಸೀನಿಯರ್​ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದರು. ಆಲ್ವಿನ್​ ಪ್ರಕಾಶ್​​​​​​ ಕುಂದರ್​ ದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ, ಕಾರಿನೊಳಗೆ ಎರಡು ಚೀಲದಲ್ಲಿ ಇರಿಸಲಾಗಿತ್ತು ಎನ್ನಲಾಗಿದೆ.

ಜುಲೈನಲ್ಲಿ ನಡೆದ ಕೊಲೆ ತಡವಾಗಿ ಬೆಳಕಿಗೆ

ಕರ್ನಾಟಕದಲ್ಲಿದ್ದ ಸಹೋದರ ಅನಿಲ್​ ಪ್ರಶಾಂತ್​ ಕುಂದರ್​ ಅವರೊಂದಿಗೆ ವಾಟ್ಸಾಪ್​ ಮೂಲಕ ಸಂಪರ್ಕದಲ್ಲಿದ್ದರು. ಅವರೇ ತಮ್ಮನ ಕೊಲೆ ಬಗ್ಗೆ ತನಿಖೆ ನಡೆಸಬೇಕು ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಶಾರ್ಜಾ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಬರುವುದು ಇನ್ನಷ್ಟೇ ಬಾಕಿ.

ಅನುಮಾನ ಮೂಡಿಸಿದ ಮೆಸೇಜ್

ಹಿರಿಯ ಸಹೋದರ ಅನಿಲ್​ ಜು.20ರಂದು ಆಲ್ವಿನ್ ಪ್ರಕಾಶ್ ಎಂದಿನಂತೆ ಕರೆ ಮಾಡಿದ್ದಾರೆ. ಆದರೆ, ಅಂದು ಆಲ್ವಿನ್​ ಯಾವಾಗಲು ಕಳಿಸುವ ವಾಯ್ಸ್​ ನೋಟ್ ಬದಲಾಗಿ ತಾನು ಚೆನ್ನಾಗಿದ್ದೇನೆ ಎಂದು ಟೈಪ್ ಮಾಡಿದ ಮೆಸೇಜ್ ಕಳುಹಿಸಿದ್ದರು. ಆಲ್ವಿನ್​ ಎಂದಿಗೂ ಮೆಸೇಜ್​ ಕಳುಹಿಸಿದ ವ್ಯಕ್ತಿಯಲ್ಲ, ಏನಾಗಿರಬಹುದು ಎನ್ನುವ ಅನುಮಾನ ಅನಿಲ್​ ಅವರಿಗೆ ಮೂಡಿತು.

ಮತ್ತೆ ಸಾಕಷ್ಟು ಕರೆ ಮಾಡಿದಾಗ ರಿಸೀವ್​ ಮಾಡದೆ ಇದ್ದುದ್ದನ್ನು ಗಮನಿಸಿ, ಆಲ್ವಿನ್​ ಸ್ನೇಹಿತ ಮನೋಹರ್ ಅವರನ್ನು ಸಂಪರ್ಕಿಸಿ ವಿಚಾರಿಸಲು ತಿಳಿಸಿದರು. ಮನೋಹರ್ ಅವರು ಆಲ್ವಿನ್ ವಾಸವಿದ್ದ ಫ್ಲಾಟ್‌ಗೆ ತೆರಳಿದಾಗ, ಪ್ರಕಾಶ್ ಭಾರತಕ್ಕೆ ತೆರಳಿದ್ದಾರೆ ಎಂದು ಸೆಕ್ಯುರಿಟಿ ಗಾರ್ಡ್ ತಿಳಿಸಿದ್ದಾನೆ. ಕಂಪನಿಯ ಎಚ್​ಆರ್ ವಿಭಾಗವೂ ಇದೇ ಮಾಹಿತಿ ನೀಡಿದೆ.

ಪಾಸ್‌ಪೋರ್ಟ್ ನಿಂದ ಸಿಕ್ತು ಸತ್ಯಾಂಶ

ಮರುದಿನ ಅನಿಲ್ ಮತ್ತೆ ಕಂಪನಿಯನ್ನು ಸಂಪರ್ಕಿಸಿ ಆಲ್ವಿನ್ ಭಾರತಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿ ಪರಿಶೀಲಿಸುವಂತೆ ಕೋರಿದರು. ಆಗ ಕಂಪನಿಯವರು ಪಾಸ್‌ಪೋರ್ಟ್ ದಾಖಲೆಗಳನ್ನು ಪರಿಶೀಲಿಸಿದಾಗ ಆಲ್ವಿನ್ ಶಾರ್ಜಾದಲ್ಲೇ ಇರುವುದು ಗೊತ್ತಾಯಿತು. ತಕ್ಷಣವೇ ನಾಪತ್ತೆ ದೂರು ದಾಖಲಿಸಲಾಯಿತು. ಪೊಲೀಸ್ ತನಿಖೆಯ ವೇಳೆ, ಓಮನ್ ಕಡೆಗೆ ತೆರಳುವ ಮಾರ್ಗದಲ್ಲಿ ನಿಲ್ಲಿಸಿದ್ದ ಕಾರಿನ ಒಳಗೆ ಶವವು ಪತ್ತೆಯಾಗಿದೆ.

ಎದೆಗೆ ಚೂರಿ ಹಾಕಿ ಕೊಂದು ದೇಹವನ್ನು ಒಂಬತ್ತು ಭಾಗಗಳಾಗಿ ಕತ್ತರಿಸಿ ಎರಡು ಚೀಲಗಳಲ್ಲಿ ಪ್ಯಾಕ್ ಮಾಡಿ ಡಿಕ್ಕಿಯಲ್ಲಿಟ್ಟಿದ್ದರು. ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಈ ಸೋಮವಾರವಷ್ಟೇ ಕುಟುಂಬಸ್ಥರಿಗೆ ದೇಹವನ್ನು ಹಸ್ತಾಂತರಿಸಲಾಗಿದೆ ಎನ್ನುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಗ-ಹೆಂಡತಿ ನಾಪತ್ತೆ

ಆಲ್ವಿನ 20 ವರ್ಷದ ಹಿಂದೆ ಉಡುಪಿ ಮೂಲದ ಪತ್ನಿ ಟೀನಾ ಕುಂದರ್​​​ ಅವರನ್ನು ಮದುವೆ ಮಾಡಿಕೊಂಡಿದ್ದರು. ಅವರು ಸಹ ಶಾರ್ಜಾದಲ್ಲಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಮಗ ಅದೇ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ. ಆದರೆ ಆಲ್ವಿನ್​ ಕೊಲೆಯಾದ ನಂತರ ಪತ್ನಿ ಹಾಗೂ ಮಗನ ಸುಳಿವು ಸಿಗುತ್ತಿಲ್ಲ ಎನ್ನಲಾಗಿದೆ.

ಆಲ್ವಿನ್​ ಉಳಿದುಕೊಂಡಿದ್ದ ಕಟ್ಟಡದಿಂದ ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆ ಹೊರಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿದೆ. ತಮ್ಮನ ಪತ್ನಿಗೆ ಕೊಲೆಯಾದ ಬಗ್ಗೆ ಮಾಹಿತಿ ಇದೆ. ಕೊಲೆ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಅನಿಲ್​ ಪೊಲೀಸರಿಗೆ ತಿಳಿಸಿದ್ದಾರೆ. ಈವರೆಗೆ ಶಾರ್ಜಾ ಪೊಲೀಸ್ ಇಲಾಖೆ ಅಥವಾ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ/ಕಾನ್ಸುಲೇಟ್ ವತಿಯಿಂದ ಉಡುಪಿ ಜಿಲ್ಲಾ ಪೊಲೀಸರಿಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ಸಿಕ್ಕಿಲ್ಲ ಎನ್ನಲಾಗಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net