

ಮುಂಬೈ: ದೀಪಾವಳಿ ಹಬ್ಬದಂದು ಬಾಲಿವುಡ್ ನಟಿ, ನಟ ಸೈಫ್ ಅಲಿ ಖಾನ್ ಪತ್ನಿ, ಕರೀನಾ ಕಪೂರ್ ಖಾನ್ ಹಸಿರು ಬಣ್ಣದ ಸುಂದರ, ಸುಮಾರು 200 ವರ್ಷ ಹಳೆಯ ಪೆಂಡೆಂಟ್ವೊಂದನ್ನು ಧರಿಸಿ ಸೋಷಿಯಲ್ ಮೀಡಿಯಾನಲ್ಲಿ ಟ್ರೆಂಡಿಂಗ್ನಲ್ಲಿದ್ದರು.
ಆದರೆ, ಈಗ ಈ ಪುರಾತನ ಪೆಂಡೆಂಟ್ ಧಾರಣೆ ಈಗ ನಟಿಗೆ ಕಾನೂನಿನ ಸಂಕಷ್ಟವನ್ನು ತಂದಿದೆ. ನಟಿ ಕರೀನಾ ಧರಿಸಿದ್ದ ಪೆಂಡೆಂಟ್ನಲ್ಲಿ ಇಸ್ಲಾಂ ಧರ್ಮ ಗ್ರಂಥ ಕುರಾನ್ನ ಕೆಲ ಸಾಲುಗಳಿದ್ದು, ಹೀಗಾಗಿ ಇದನ್ನು ಧರಿಸುವುದು ಅಪರಾಧವಾಗಿದ್ದು, ನಟಿ ಕೂಡಲೇ ಕ್ಷಮೆ ಕೇಳಬೇಕೆಂದು ಕಾಂಗ್ರೆಸ್ ನಾಯಕ ಅಬ್ಬಾಸ್ ಹಫೀಜ್ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ನಟಿ ಕರೀನಾ ಕಪೂರ್ ಈ ಪೆಂಡೆಂಟ್ ಅನ್ನು ತಮ್ಮ ಮನೆಯಲ್ಲಿ ನಡೆದ ದೀಪಾವಳಿ ಪಾರ್ಟಿಯಲ್ಲಿ ಧರಿಸಿದ್ದು, ಇದನ್ನು ರಿಹಾ ಕಪೂರ್ ಎಂಬಾಕೆ ಈ ಫೋಟೊಗಳನ್ನು ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೊಂಡಿದ್ದರು.
ಈ ಪೆಂಡೆಂಟ್ನಲ್ಲಿ ಪವಿತ್ರ ಕುರಾನಿನಲ್ಲಿರುವ ಕೆಲ ಸಾಲುಗಳನ್ನು ಕೆತ್ತನೆ ಮಾಡಲಾಗಿದೆ. ಇದನ್ನು ಭೋಪಾಲ್ನ ಬೇಗಂ (ಮಹಾರಾಣಿ) ಧರಿಸುತ್ತಿದ್ದರು. ಹೀಗಾಗಿ ಇದನ್ನು ಒಂದು ಆಭರಣದ ರೀತಿಯಲ್ಲಿ ಧರಿಸುವುದು ಸರಿಯಲ್ಲ. ಇದರಿಂದ ಮುಸ್ಲಿಂ ಸಮುದಾಯದ ಗೌರವಕ್ಕೆ ಧಕ್ಕೆ ಉಂಟಾಗಿದ್ದು, ನಟಿ ಕೂಡಲೇ ಕ್ಷಮೆ ಕೇಳಬೇಕೆಂದು ಅಬ್ಬಾಸ್ ಹಫೀಜ್ ಆಗ್ರಹಿಸಿದ್ದಾರೆ.
ಹಾಗೆಯೇ, ಈ ಪೆಂಡೆಂಟ್ನಲ್ಲಿ ಕುರಾನಿನ ಕೆಲ ಪವಿತ್ರ ಸಾಲುಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಇದನ್ನು ಇತರರು ಯಾವುದೇ ಧಾರ್ಮಿಕ ವಿಧಿವಿಧಾನವನ್ನು ಪಾಲಿಸದೇ ಮುಟ್ಟಿರುವ ಸಾಧ್ಯತೆ ಬಗ್ಗೆಯೂ ಹಫೀಜ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ, ಧಾರ್ಮಿಕ ಪರಂಪರೆ ಹೊಂದಿರುವ ಪೆಂಡೆಂಟ್ಅನ್ನು ಫ್ಯಾಶನ್ಗಾಗಿ ನಟಿ ಧರಿಸಿರುವುದು ಸರಿಯಲ್ಲ. ಹೀಗಾಗಿ ಸಾಧ್ಯವಾದಷ್ಟು ಬೇಗ ಕ್ಷಮೆ ಕೇಳುವಂತೆ ಕಾಂಗ್ರೆಸ್ ನಾಯಕ, ಕರೀನಾಳಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಆದರೆ, ಈ ಲೀಗಲ್ ನೋಟಿಸ್ಗೆ ನಟಿ ಕರೀನಾ ಕಪೂರ್ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲವೆಂದು ತಿಳಿದುಬಂದಿದೆ. ನಟಿ ಪೆಂಡೆಂಟ್ಅನ್ನು ಧರಿಸುವ ಮೂಲಕ ಖ್ಯಾತಿ ಪಡೆದ ಕೆಲವೇ ದಿನಗಳಲ್ಲಿ ಕಾನೂನು ಸಂಕಷ್ಟವನ್ನು ಎದುರಿಸುವಂತಾಗಿದೆ. ಈಗ ಕರೀನಾ, ಕ್ಷಮೆ ಕೇಳುತ್ತಾರಾ? ಅಥವಾ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುತ್ತಾರಾ ಎನ್ನವುದಕ್ಕೆ ಕಾಲವೇ ಉತ್ತರಿಸಲಿದೆ, (ಏಜೆನ್ಸೀಸ್).