ಆರೋಗ್ಯಕ್ಕೆ ಕಂಟಕ ಇ-ಸಿಗರೇಟ್

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಜಗತ್ತಿನಾದ್ಯಂತ ಇ-ಸಿಗರೇಟ್ ಸೇವಿಸುವವರ ಪ್ರಮಾಣ ಹೆಚ್ಚುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ ಈ ಸಂಖ್ಯೆ 10 ಕೋಟಿಯ ಗಡಿ ದಾಟಿದೆ. ಮಕ್ಕಳು ದೊಡ್ಡ ಪ್ರಮಾಣದಲ್ಲಿ ಈ ಚಟಕ್ಕೆ ದಾಸರಾಗುತ್ತಿದ್ದಾರೆ. ಜಾಗತಿಕವಾಗಿ 13ರಿಂದ 15 ವರ್ಷದ 1.5 ಕೋಟಿ ಮಕ್ಕಳು ಇ-ಸಿಗರೇಟ್ ಬಳಸುತ್ತಿದ್ದಾರೆ. ಭಾರತದಲ್ಲಿ ಕೇಂದ್ರ ಸರ್ಕಾರ 2019ರಲ್ಲಿ ಇ-ಸಿಗರೇಟ್ ಮೇಲೆ ನಿಷೇಧ ಹೇರಿದ್ದರೂ, ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಆದ್ದರಿಂದ, ಇದರ ಬಳಕೆ ಜಾಸ್ತಿಯಾಗುತ್ತಲೇ ಇರುವುದು ಆತಂಕದ ವಿಚಾರ.

ಟೀನೇಜ್​ನವರಲ್ಲಿ ಹೆಚ್ಚಿದ ಬಳಕ

ಸಾಮಾನ್ಯ ಸಿಗರೇಟ್ ಸೇವನೆಗೂ, ಇ-ಸಿಗರೇಟ್ ಸೇವನೆಗೂ ತುಂಬ ಅಂತರವಿದೆ ಹಾಗೂ ಇ-ಸಿಗರೇಟ್ ಆರೋಗ್ಯಕ್ಕೆ ಕಡಿಮೆ ಹಾನಿ ಮಾಡುತ್ತದೆ ಎಂದು ನಂಬಿಸಿ, ಹದಿಹರೆಯದವರನ್ನು ಮತ್ತು ಯುವಜನತೆಯನ್ನು ದಾರಿತಪ್ಪಿಸುವ, ಇ-ಸಿಗರೇಟಿನ ಚಟವನ್ನು ಅಂಟಿಸುವ ಕೆಲ ಮಾಫಿಯಾಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಆದರೆ, ತಂಬಾಕು ಅಂಶ ಹೊಂದಿರುವ ಮಾಮೂಲಿ ಸಿಗರೇಟಿನ ಸೇವನೆ ಎಷ್ಟು ಅಪಾಯಕಾರಿಯೋ, ನಿಕೋಟಿನ್ ಹೊಂದಿರುವ ಇ-ಸಿಗರೇಟ್ ಸೇವನೆ ಕೂಡ ಅಷ್ಟೇ ಅಪಾಯಕಾರಿ ಎಂಬುದನ್ನು ಆರೋಗ್ಯ ತಜ್ಞರು ಸ್ಪಷ್ಟಮಾತುಗಳಲ್ಲಿ ಹೇಳುತ್ತಾರೆ.

ಹದಿಹರೆಯದ ವಯಸ್ಸಿನವರು ಮೊದಲು ಕುತೂಹಲಕ್ಕೋ ಅಥವಾ ಸ್ನೇಹಿತರ ಸಹವಾಸದಲ್ಲೋ ಇ-ಸಿಗರೇಟ್ ಬಳಕೆ ಆರಂಭಿಸುತ್ತಾರೆ. ಕ್ರಮೇಣ, ಇದು ಮತ್ತೆ ಮತ್ತೆ ಬೇಕೆನಿಸಿ, ವ್ಯಸನವಾಗಿ ಅಂಟಿಕೊಳ್ಳುತ್ತದೆ. ಇ-ಸಿಗರೇಟ್ ಸೇವನೆ ಆರಂಭಿಸಿದ ಒಂದು ವರ್ಷದೊಳಗೇ ಆರೋಗ್ಯದ ಮೇಲೆ ಅದರ ವ್ಯತಿರಿಕ್ತ ಪರಿಣಾಮಗಳು ಕಾಣಿಸಲಾರಂಭಿಸುತ್ತವೆ. ನಿದ್ರೆಯ ಕೊರತೆ, ಮೂಡ್​ಸ್ವಿಂಗ್, ಚಡಪಡಿಕೆಯಿಂದ ಸಮಸ್ಯೆಗಳು ಆರಂಭವಾಗಿ, ಆರೋಗ್ಯದ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಯಾವುದೋ ಸನ್ನಿವೇಶದಲ್ಲಿ ಇ-ಸಿಗರೇಟ್ ಸೇವನೆಯನ್ನು ಆರಂಭಿಸಿದ್ದರೆ, ಆದಷ್ಟು ಬೇಗ ಅದನ್ನು ನಿಲ್ಲಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯತ್ತ ಹೊರಳುವುದು ಅತ್ಯಗತ್ಯ.

ಇ-ಸಿಗರೇಟ್​ನ ಪಿಡುಗು ಕೆಲವೇ ದೇಶಗಳಿಗೆ ಸೀಮಿತವಾಗಿಲ್ಲ. ಈ ಸಮಸ್ಯೆ ಜಾಗತಿಕವಾಗಿ ಹಬ್ಬಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಜಾಗತಿಕವಾಗಿ ಇ-ಸಿಗರೇಟ್ ಬಳಸುವವರ ಸಂಖ್ಯೆ 10 ಕೋಟಿಯನ್ನು ದಾಟಿದೆ. ಇನ್ನು ಕಳವಳದ ವಿಚಾರವೆಂದರೆ ಈ ಪೈಕಿ 1.5 ಕೋಟಿ ಜನರು 13ರಿಂದ 15 ವರ್ಷದ ಕಿಶೋರರು. ಬಹುತೇಕ ದೇಶಗಳಲ್ಲಿ ಹದಿಹರೆಯದ ವಯಸ್ಸಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಚಟಕ್ಕೆ ದಾಸರಾಗುತ್ತಿದ್ದಾರೆ. ಕೆಲವರು ಸ್ಮಾರ್ಟ್ ಹಾಗೂ ಸ್ಟೈಲಿಶ್ ಚಾಯಿಸ್ ಕಾರಣ ಇ-ಸಿಗರೇಟ್ ಮೊರೆ ಹೋಗುತ್ತಾರೆ. ಆದರೆ, ಇದರಲ್ಲಿರುವ ನಿಕೋಟಿನ ಅಂಶದಿಂದ ಕ್ರಮೇಣ ವ್ಯಸನಕ್ಕೆ ದಾಸರಾಗುತ್ತಾರೆ.

ಹಣ್ಣುಗಳು, ಮಿಂಟ್ ಸೇರಿದಂತೆ ವಿವಿಧ ಫ್ಲೇವರ್​ಗಳಲ್ಲಿ ಇ-ಸಿಗರೇಟ್ ಲಭ್ಯವಾಗುವುದರಿಂದ, ಇವು ಹದಿಹರೆಯದವರನ್ನು ಬೇಗ ಆಕರ್ಷಿಸುತ್ತವೆ. ಕೆಲವರು ‘ಇದು ಸಾಮಾನ್ಯ ಸಿಗರೇಟ್​ಗಿಂತ ಸೇಫ್’ ಎಂಬ ಭ್ರಮೆಯನ್ನು ಬಿತ್ತುತ್ತಿರುವುದು ಕೂಡ ಯುವಕರು ಇ-ಸಿಗರೇಟ್​ನತ್ತ ವಾಲಲು ಕಾರಣವಾಗುತ್ತಿದೆ.

ತಜ್ಞರು ಏನಂತಾರೆ?

ಇ-ಸಿಗರೇಟ್ ಸಾಮಾನ್ಯ ಸಿಗರೇಟ್​ನಷ್ಟೇ ಹಾನಿಕಾರಕ ಮತ್ತು ಅಪಾಯಕಾರಿ. ಇ-ಸಿಗರೇಟ್​ನಲ್ಲಿರುವ ನಿಕೋಟಿನ್ ಮತ್ತು ಫ್ಲೇವರ್​ಗಳು ಹೃದಯ, ಶ್ವಾಸಕೋಶ ಮತ್ತು ಮಿದುಳಿಗೆ ಹಾನಿ ಒದಗಿಸುತ್ತವೆ. ದೀರ್ಘಾವಧಿಯ ಕಾಲ ಇ-ಸಿಗರೇಟ್​ನ ಸೇವನೆ ಯಿಂದ ಕ್ಯಾನ್ಸರ್​ನ ಅಪಾಯವೂ ಇದೆ. ಹಾಗಾಗಿ, ಎಲ್ಲ ಬಗೆಯ ಸಿಗರೇಟ್​ನಿಂದ ದೂರವಿರುವುದೇ ಆರೋಗ್ಯಕ್ಕೆ ಒಳ್ಳೆಯದು.

ಏನಿದು ಇ-ಸಿಗರೇಟ್?

ಇ-ಸಿಗರೇಟ್ ಅಥವಾ ಇಲೆಕ್ಟ್ರಾನಿಕ್ ಸಿಗರೇಟ್ ಬ್ಯಾಟರಿ ಮೂಲಕ ನಿರ್ವಹಿಸುವ ಸಾಧನವಾಗಿದೆ. ಇದರಲ್ಲಿರುವ ನಿಕೋಟಿನ್, ವಿವಿಧ ಫ್ಲೇವರ್​ಗಳ ಲಿಕ್ವಿಡ್ ಮತ್ತು ಕೆಲ ರಾಸಾಯನಿಕಗಳು ಬಿಸಿಯಾಗಿ, ಹೊಗೆ ಬರುವಂತೆ ಮಾಡಲಾಗುತ್ತದೆ (ಈ ಹೊಗೆ ಕೂಡ ಸಾಮಾನ್ಯ ಸಿಗರೇಟಿನ ಹೊಗೆಯಂತೆಯೇ ತೀವ್ರ ಮತ್ತು ದಟ್ಟವಾಗಿರುತ್ತದೆ). ಈ ಹೊಗೆಯನ್ನು ಬಳಕೆದಾರ ಉಸಿರಾಟದ ಮೂಲಕ ಒಳಗೆ ಎಳೆದೆಕೊಳ್ಳುತ್ತಾನೆ. ಅದು ಶ್ವಾಸಕೋಶದವರೆಗೂ ತಲುಪುತ್ತದೆ. ಹಾಗಾಗಿ, ತಂಬಾಕು ಅಂಶ ಇರುವ ಸಾಮಾನ್ಯ ಸಿಗರೇಟ್ ಸೇವನೆಯ ಅನುಭವವನ್ನು ಬಳಕೆದಾರ ಪಡೆಯುತ್ತಾನೆ. ಆದರೆ, ಇದು ಹಾನಿಕಾರಕ ಲಿಕ್ವಿಡ್ ಮತ್ತು ರಾಸಾಯನಿಕಗಳನ್ನು ಮತ್ತು ನಿಕೋಟಿನ್ ಹೊಂದಿರುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಹದಿಹರೆಯದ ಮಕ್ಕಳ ಮಿದುಳು ಇನ್ನು ಬೆಳವಣಿಗೆಯ ಹಂತದಲ್ಲಿರುತ್ತದೆ. ಆದರೆ, ಹದಿಹರೆಯ ವಯಸ್ಸಿನವರು ಇ-ಸಿಗರೇಟ್ ಸೇವನೆ ಆರಂಭಿಸಿದರೆ ಮಿದುಳಿನ ಬೆಳವಣಿಗೆ ಕುಂಠಿತವಾಗುವ ಅಪಾಯವಿರುತ್ತದೆ.

ಆರೋಗ್ಯದ ಮೇಲೆ ದುಷ್ಪರಿಣಾಮ

  • ಶ್ವಾಸಕೋಶದಲ್ಲಿ ಸೋಂಕು.
  • ಅಧಿಕ ರಕ್ತದೊತ್ತಡ.
  • ಹೃದಯಕ್ಕೆ ಸಂಬಂಧಿತ ಕಾಯಿಲೆ.
  • ಮಿದುಳಿನ ಕಾರ್ಯಕ್ಷಮತೆಯ ಮೇಲೆ ದುಷ್ಪರಿಣಾಮ.
  • ಆಮ್ಲಜನಕದ ಪೂರೈಕೆ ಕಡಿಮೆ ಆಗುವುದು.
  • ಡಿಎನ್​ಎ ಡ್ಯಾಮೇಜಾಗುವ ಅಪಾಯ.
  • ರೋಗನಿರೋಧಕ ಶಕ್ತಿ ಕಡಿಮೆಯಾಗುವುದು.
  • ಟಿನೇಜ್​ನಲ್ಲಿ ಮಿದುಳಿನ ಬೆಳವಣಿಗೆ ಕುಂಠಿತಗೊಳ್ಳುವುದು.
  • ನಿದ್ರೆಯ ಗುಣಮಟ್ಟ ಕುಸಿತ.
  • ಮೂಡ್ ಪದೇಪದೆ ಬದಲಾಗುವುದು.
  • ಕೋಪ/ಉದ್ವಿಗ್ನತೆ/ಚಡಪಡಿಕೆ.
  • ಗರ್ಭದಲ್ಲಿರುವ ಮಗುವಿನ ಬೆಳವಣಿಗೆ ಮೇಲೆ ದುಷ್ಪರಿಣಾಮ.

ಕೇಂದ್ರದಿಂದ ನಿಷೇಧ

ಭಾರತದಲ್ಲಿ ಇ-ಸಿಗರೇಟ್ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ 2019ರಲ್ಲಿ ಇ-ಸಿಗರೇಟ್​ನ್ನು ಸಂಪೂರ್ಣವಾಗಿ ನಿಷೇಧಿಸಿ, ನಿಯಮವನ್ನು ಜಾರಿಗೆ ತಂದಿದೆ. ಇ-ಸಿಗರೇಟ್​ನ ಮಾರಾಟ, ತಯಾರಿಕೆ, ಸಂಗ್ರಹ, ಜಾಹೀರಾತನ್ನು ಕಾನೂನುವಿರೋಧಿ ಎಂದು ಘೋಷಿಸಲಾಗಿದೆ. ಇದರನ್ವಯ, ಮೊದಲ ಬಾರಿ ಅಪರಾಧಕ್ಕೆ 1 ವರ್ಷದ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ, ಮತ್ತೊಮ್ಮೆ ಅಪರಾಧ ಎಸಗಿದರೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ.ಗಳ ದಂಡ ವಿಧಿಸಲಾಗುತ್ತದೆ. ಆದರೂ, ದೇಶದ ಕೆಲವೆಡೆ ಕದ್ದುಮುಚ್ಚಿ ಇದರ ಬಳಕೆ ನಡೆಯುತ್ತಿದೆ. ಕೆಲ ಜಾಲಗಳು ಶಾಲೆ-ಕಾಲೇಜುಗಳನ್ನೇ ಗುರಿಯಾಗಿಸಿ ಇ-ಸಿಗರೇಟ್​ನ್ನು ಪೂರೈಸುತ್ತಿವೆ. ಶಾಲೆ ಅಥವಾ ಕಾಲೇಜಿನ ಕ್ಯಾಂಪಸ್ ಹೊರಗಡೆ ಇಂಥ ಕೃತ್ಯಗಳು ನಡೆಯುವುದರಿಂದ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಗಳು ಕೂಡ ಏನೂ ಮಾಡಲಾಗದೆ ಕೈಚೆಲ್ಲಿ ಕುಳಿತಿವೆ. ವಿದೇಶಿ ಮೂಲದ ಕೆಲ ಆನ್​ಲೈನ್ ವೇದಿಕೆಗಳಿಂದ ಯುವಕರು ಇತರ ಉತ್ಪನ್ನದ ಹೆಸರಲ್ಲಿ ಇ-ಸಿಗರೇಟ್ ತರಿಸಿಕೊಳ್ಳುವ ನಿದರ್ಶನಗಳು ಇವೆ. ಸಾಮಾಜಿಕ ಮಾಧ್ಯಮಗಳಿಂದ ಪ್ರಭಾವಿತರಾಗಿ ಕೆಲವರು ಈ ಚಟಕ್ಕೆ ಅಂಟಿಕೊಳ್ಳುತ್ತಿದ್ದಾರೆ.

ಬೆಚ್ಚಿಬೀಳಿಸುವ ವರದಿ

ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸನ್ ವರದಿಯ ಪ್ರಕಾರ, 2022ರಲ್ಲಿ ಭಾರತದಲ್ಲಿ 18ರಿಂದ 30 ವಯೋಮಾನದ 840 ಯುವಕರ ಸಮೀಕ್ಷೆ ಮಾಡಲಾಯಿತು. ಈ ಪೈಕಿ 23% ಯುವಕರು ಕನಿಷ್ಠ ಒಂದು ಬಾರಿ ಇ-ಸಿಗರೇಟ್ ಸೇವನೆ ಮಾಡಿದ ಸಂಗತಿ ಬೆಳಕಿಗೆ ಬಂತು. ಇದರಲ್ಲಿ 8% ಯುವಕರಂತೂ ಪ್ರತಿನಿತ್ಯ ಇ-ಸಿಗರೇಟ್ ಸೇವಿಸುತ್ತಿರುವವರು. ಎರಡನೇ ದರ್ಜೆ ನಗರಗಳಿಗೆ ಹೋಲಿಸಿದರೆ ಮಹಾನಗರಗಳಲ್ಲಿ ಇದರ ಬಳಕೆ ಪ್ರಮಾಣ ಹೆಚ್ಚಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಕೊಲ್ಕತ್ತ, ಜೈಪುರ, ಅಹಮದಾಬಾದ್​ನಂಥ ನಗರಗಳಲ್ಲಿ ಇ-ಸಿಗರೇಟ್ ಬಳಕೆ ವ್ಯಾಪಕವಾಗಿದೆ ಎಂದು ಸಮೀಕ್ಷೆ ವಿವರಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಎರಡನೇ ಹಂತದ ನಗರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಇ-ಸಿಗರೇಟ್ ಹಾವಳಿ ವಿಸ್ತಾರ ವಾಗುತ್ತಿರುವುದು ತೀವ್ರ ಕಳವಳಕಾರಿ ಸಂಗತಿ.

ಇ-ಸಿಗರೇಟ್​ನಲ್ಲಿರುವ ಅಪಾಯಕಾರಿ ರಾಸಾಯನಿಕಗಳು

  • ನಿಕೋಟಿನ್-ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.
  • ಹೆವಿ ಮೆಟಲ್ಸ್-ಮೂತ್ರಕೋಶ ಮತ್ತು ಮಿದುಳಿಗೆ ಹಾನಿಕಾರಕ.
  • ಅಲ್ಟ್ರಾ ಫೈನ್ ಪಾರ್ಟಿಕಲ್ಸ್-ಹೃದಯ ಸಂಬಂಧಿ ಕಾಯಿಲೆಯ ಅಪಾಯ.
  • ಫ್ಲೇವರಿಂಗ್ ಏಜೆಂಟ್ಸ್- ಗಂಟಲಿನಲ್ಲಿ ಉರಿ
  • ಬೆಂಜಿನ್-ಕ್ಯಾನ್ಸರ್​ಕಾರಕ ಅಂಶಗಳು

ಪರಿಹಾರಗಳು

ಇ-ಸಿಗರೇಟ್ ಚಟಕ್ಕೆ ಅಂಟಿಕೊಂಡಿದ್ದರೂ, ಇದರಿಂದ ಹೊರಬರುವುದು ಅಸಾಧ್ಯವೇನಲ್ಲ. ಇದಕ್ಕಾಗಿ ಆರೋಗ್ಯಕರ ಜೀವನಶೈಲಿಯತ್ತ ಹೊರಳಬೇಕು.

  • ಯೋಗ ಮತ್ತು ದೀರ್ಘ ಉಸಿರಾಟವನ್ನು ಅಭ್ಯಸಿಸಬೇಕು.
  • ಇ-ಸಿಗರೇಟ್ ಸೇವನೆ ಮಾಡಬೇಕು ಎಂಬ ತಹತಹಿಕೆ ಕಾಡಿದ್ದಲ್ಲಿ ಕೂಡಲೇ ಒಂದು ಲೋಟ ನೀರು ಕುಡಿದು, ದೀರ್ಘ ಉಸಿರು ತೆಗೆದುಕೊಳ್ಳಿ.
  • ದಿನನಿತ್ಯ ವ್ಯಾಯಾಮ ಮತ್ತು ವಾಕಿಂಗ್​ನ್ನು ರೂಢಿಸಿಕೊಳ್ಳುವುದು ಪೂರಕ. ಇದರಿಂದ ಮನಸ್ಸಿನ ನಿಯಂತ್ರಣ ಸಾಧ್ಯವಲ್ಲದೆ, ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಿ, ಸಕಾರಾತ್ಮಕ ಚಿಂತನೆ ಅಳವಡಿಸಿಕೊಳ್ಳಲು ಸಾಧ್ಯ.
  • ನಿಕೋಟಿನ್ ರಿಪ್ಲೇಸ್​ವೆುಂಟ್ ಥೆರೆಪಿ ತೆಗೆದುಕೊಳ್ಳಬಹುದು.
  • ವೈದ್ಯರು ಮತ್ತು ಆಪ್ತ ಸಮಾಲೋಚಕರ ನೆರವನ್ನು ಪಡೆಯಬಹುದು.
  • ಇ-ಸಿಗರೇಟ್ ಸೇವನೆ ತ್ಯಜಿಸಿದ ಬಳಿಕ ದೇಹ ನಿಧಾನವಾಗಿ ಡಿಟಾಕ್ಸ್ ಆಗಲು ಆರಂಭಿಸುತ್ತದೆ. ಪೂರ್ಣವಾಗಿ ಚೇತರಿಸಿಕೊಂಡು, ಆರೋಗ್ಯ ಸುಧಾರಿಸಲು ಮೂರರಿಂದ ಆರು ತಿಂಗಳ ಅವಧಿ ಬೇಕಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net