ಕೆನಡಾದಲ್ಲಿ ಕನ್ನಡಿಗನ ಕಗ್ಗೊಲೆ: ಗುಂಡಿನ ದಾಳಿಯಲ್ಲಿ ಮೃತಪಟ್ಟ ನೆಲಮಂಗಲ ನಿವಾಸಿ ಚಂದನ್ ಕುಮಾರ್ | Shootout in Canada

ಗುಂಡೇಟಿಗೆ ಬಲಿಯಾದ ಚಂದನ್​ ಕುಮಾರ್​
ಗುಂಡೇಟಿಗೆ ಬಲಿಯಾದ ಚಂದನ್​ ಕುಮಾರ್​
Published on

ಪ್ರಮುಖ ಮುಖ್ಯಾಂಶಗಳು

  • ಕೆನಡಾದಲ್ಲಿ ನಡೆದ ಶೂಟ್​ಔಟ್​
  • ಗುಂಡಿನ ದಾಳಿಯಲ್ಲಿ ಕನ್ನಡಿಗನ ಸಾವು
  • ಮೃತವ್ಯಕ್ತಿಯನ್ನು ನೆಲಮಂಗಲ ನಿವಾಸಿ ಚಂದನ ಕುಮಾರ್​ ಎಂದು ದೃಢಪಡಿಸಿದ ಕೆನಡಾ ಪೊಲೀಸರು
ಕೆನಡಾ: ಕೆನಡಾದಲ್ಲಿ ನಡೆದ ಗುಂಡಿನ ದಾಳಿ (Shootout in Canada) ಯಲ್ಲಿ ಕರ್ನಾಟಕ ಮೂಲದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೃತ ಯುವಕನನ್ನು ಚಂದನ್ ಕುಮಾರ್ (37) ಎಂದು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.
ಚಂದನ್ ಕುಮಾರ್ ಮೂಲತಃ ನೆಲಮಂಗಲದ ತ್ಯಾಮಗೊಂಡ್ಲು ಗ್ರಾಮದವರಾಗಿದ್ದು, ಹಲವಾರು ವರ್ಷಗಳಿಂದ ಕೆಲಸಕ್ಕಾಗಿ ಕೆನಡಾದ ಟೊರಾಂಟೊದಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ತಾಂತ್ರಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ಚಂದನ್​ ಕೆನಡಾದ ಲಾರ್ಸೆನ್ & ಟೂಬ್ರೊ ಇನ್ಫೋಟೆಕ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಟೊರೊಂಟೊ ಪೊಲೀಸರ ಅಧಿಕೃತ ಪ್ರಕಟಣೆಯ ಪ್ರಕಾರ, ಶನಿವಾರ ಮಧ್ಯಾಹ್ನ ರೆಕ್ಸ್‌ಡೇಲ್ ಬೌಲೆವಾರ್ಡ್ ಮತ್ತು ಹೆದ್ದಾರಿ 27 ಬಳಿಯ ವುಡ್‌ಬೈನ್ ಶಾಪಿಂಗ್ ಸೆಂಟರ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಗುಂಡಿನ ದಾಳಿಯ ವರದಿ ಬಂದ ನಂತರ ಮಧ್ಯಾಹ್ನ 3:31 ರ ಸುಮಾರಿಗೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಕಂಡುಬಂದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು ಎಂದು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಬ್ರಾಂಪ್ಟನ್ ನಿವಾಸಿ ಚಂದನ್ ಕುಮಾರ್ ಎಂದು ಅಧಿಕಾರಿಗಳು ದೃಢಪಡಿಸಿದ್ದು, ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಹಲವಾರು ಸುತ್ತು ಗುಂಡು ಹಾರಿಸಲಾಗಿದೆ, ಆದರೆ ದಾಳಿಗೆ ನಿರ್ದಿಷ್ಟ ಕಾರಣ ಏನೆಂದು ಇಲ್ಲಿವರೆಗೆ ತಿಳಿದು ಬಂದಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದ್ದು ಶಂಕಿತರನ್ನು ಬಂಧಿಸಲಾಗುವುದು ಎಂದು ಕೆನಡಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಚಂದನ್​ ಕುಮಾರ್​ ಅವರ ಸಾವಿನ ಸುದ್ದಿ ತಿಳಿದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಚಂದನ್ ಅವರ ತಂದೆ ನಂದಕುಮಾರ್ ನಿವೃತ್ತ ಶಿಕ್ಷಕರಾಗಿದ್ದು, ತಮ್ಮ ಮಗನ ಸಾವಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಹೇಳಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net