ವಂದೇ ಮಾತರಂ ವಿವಾದ: ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಹೇಳಿಕೆಗೆ ನಟಿ ಕಂಗನಾ ರಣಾವತ್ ತಿರುಗೇಟು! Kangana Ranaut

Kangana Ranaut ಸಾಂದರ್ಭಿಕ ಚಿತ್ರ
Kangana Ranaut ಸಾಂದರ್ಭಿಕ ಚಿತ್ರ
Published on

ನವದೆಹಲಿ: ವಂದೇ ಮಾತರಂ ಕುರಿತು ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ನೀಡಿರುವ ಹೇಳಿಕೆ ಇದೀಗ ಹೊಸ ಚರ್ಚೆಗೆ ನಾಂದಿ ಹಾಡಿದೆ. ಶರ್ಮಿಳಾ ಅವರ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಂಸದೆ ಕಂಗನಾ ರಣಾವತ್ (

Kangana Ranaut)

ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಲೆಯನ್ನು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿ ನೋಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಶರ್ಮಿಳಾ ಟ್ಯಾಗೋರ್ ಹೇಳಿದ್ದೇನು?

ಇತ್ತೀಚೆಗೆ 'ಐಎಎನ್‌ಎಸ್' (IANS) ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಶರ್ಮಿಳಾ, ದೇಶದಲ್ಲಿ ವಿವಿಧ ಧರ್ಮಗಳನ್ನು ಪಾಲಿಸುವ ಜನರಿದ್ದಾರೆ. ಅವರಲ್ಲಿ ಏಕದೇವೋಪಾಸಕರು, ಅಂದರೆ ಅನೇಕರು ಒಬ್ಬನೇ ದೇವರನ್ನು ನಂಬುವವರು. ವಂದೇ ಮಾತರಂ ಗೀತೆಯ ಕೆಲವು ಚರಣಗಳಲ್ಲಿ ವಿವಿಧ ದೇವತೆಗಳ ಉಲ್ಲೇಖ ಬರುತ್ತದೆ. ಉದಾಹರಣೆಗೆ ವಂದೇ ಕಾಳಿ ಅಥವಾ ವಂದೇ ದುರ್ಗಾ ಎಂಬ ಸಾಲುಗಳನ್ನು ಒಪ್ಪಿಕೊಳ್ಳುವುದು ಏಕದೇವೋಪಾಸನೆ ಮಾಡುವವರಿಗೆ ಕಷ್ಟವಾಗಬಹುದು. ಹೀಗಾಗಿ, ಭಾರತದ ಎಲ್ಲ ಧರ್ಮಗಳ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಈ ಗೀತೆಯ ಮೊದಲ ಎರಡು ಚರಣಗಳು ಅತ್ಯಂತ ಸೂಕ್ತವಾಗಿವೆ ಎಂದು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದರು.

ಕಂಗನಾ ರಣಾವತ್ ನೀಡಿದ ಪ್ರತ್ಯುತ್ತರ

ಶರ್ಮಿಳಾ ಅವರ ಈ ಸಂದರ್ಶನದ ವೀಡಿಯೊವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಕಂಗನಾ, ಶರ್ಮಿಳಾ ಜಿ ತಮ್ಮ ಅನಿಸಿಕೆಯನ್ನು ಹೇಳಿರುವುದನ್ನು ನಾನು ಗೌರವಿಸುತ್ತೇನೆ, ಆದರೆ ಒಬ್ಬ ಕಲಾವಿದೆಯಾಗಿ ಕಾವ್ಯ ಮತ್ತು ಕಲೆಯ ಬಗ್ಗೆ ಅವರ ಚಿಂತನೆ ಇಷ್ಟೊಂದು ಸೀಮಿತವಾಗಿರುವುದು ನನಗೆ ಆಘಾತ ತಂದಿದೆ ಎಂದು ಬರೆದುಕೊಂಡಿದ್ದಾರೆ. ಯಾವುದೇ ಕವಿತೆ ಅಥವಾ ಗೀತೆಯಲ್ಲಿ ಬಳಕೆಯಾಗುವ ಪದಗಳು ಕೇವಲ ರೂಪಕಗಳು. ಕವಿ ಅಥವಾ ಕಲಾವಿದ ತನ್ನ ಕಲ್ಪನೆಯ ಮೂಲಕ ಅಪೂರ್ವ ಹೋಲಿಕೆಗಳನ್ನು ನೀಡುತ್ತಾ ಕೃತಿಯ ಸೌಂದರ್ಯವನ್ನು ಹೆಚ್ಚಿಸುತ್ತಾನೆ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.

ಶಕ್ತಿಯ ಸಂಕೇತ ಮತ್ತು ರಾಷ್ಟ್ರೀಯ ಚೇತನ

ಬಂಕಿಂ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ 'ವಂದೇ ಮಾತರಂ' ಗೀತೆಯು ಸ್ವಾತಂತ್ರ್ಯ ಸಂಗ್ರಾಮದ ಆತ್ಮದಂತಿದೆ ಎಂದಿರುವ ಕಂಗನಾ, ಈ ಗೀತೆಯ ಮೂಲಕ ದೇಶವಾಸಿಗಳ ಒಳಗಿರುವ 'ಶಕ್ತಿ'ಯನ್ನು ಜಾಗೃತಗೊಳಿಸಲು ಕರೆ ನೀಡಿದ್ದರೇ ಹೊರತು, ಅದನ್ನು ಕೇವಲ ಧಾರ್ಮಿಕ ಆಚರಣೆಗೆ ತಗ್ಗಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಇದೇ ವೇಳೆ ಸ್ವಾಮಿ ವಿವೇಕಾನಂದರ ಹೇಳಿಕೆಯನ್ನು ನೆನಪಿಸಿಕೊಂಡ ಅವರು, ವಿವೇಕಾನಂದರು ಕಬ್ಬಿಣದ ಮೈಕಟ್ಟು ಮತ್ತು ನರಗಳಲ್ಲಿ ಸಿಡಿಲ ತೇಜಸ್ಸು ಇರುವ ಯುವಕರು ಬೇಕು ಎಂದಾಗ ಅವರು ವಾತಾವರಣದ ವರದಿ ನೀಡುತ್ತಿರಲಿಲ್ಲ, ಬದಲಿಗೆ ಆಂತರಿಕ ಚೈತನ್ಯವನ್ನು ಜಾಗೃತಗೊಳಿಸುವಂತೆ ಕೇಳಿಕೊಳ್ಳುತ್ತಿದ್ದರು ಎಂದು ವಿವರಿಸಿದ್ದಾರೆ.

ಹಿಂದೂ-ಮುಸ್ಲಿಂ ಮಾನಸಿಕತೆಯಿಂದ ಹೊರಬರಲು ಕರೆ

ದಯವಿಟ್ಟು ಪ್ರತಿಯೊಂದನ್ನೂ ಹಿಂದೂ-ಮುಸ್ಲಿಂ ಕಣ್ಣೋಟದಿಂದ ನೋಡುವುದನ್ನು ಬಿಡಿ ಎಂದಿರುವ ಕಂಗನಾ, ವೈದ್ಯರು ಕೂಡ ನಮ್ಮ ದೇಹದ ಆಂತರಿಕ ಬಲವನ್ನು 'ಶಕ್ತಿ' ಎಂದೇ ಕರೆಯುತ್ತಾರೆ ಎಂದು ಉದಾಹರಿಸಿದ್ದಾರೆ. ನಾವು ಪ್ರತಿಯೊಬ್ಬರನ್ನೂ ನಮ್ಮವರೆಂದು ಅಪ್ಪಿಕೊಳ್ಳೋಣ ಎಂದು ಕರೆ ನೀಡಿದ ಅವರು, ಶರ್ಮಿಳಾ ಟ್ಯಾಗೋರ್ ಅವರ ಮೇಲಿರುವ ತಮ್ಮ ವೈಯಕ್ತಿಕ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net