2026ರ ತಮಿಳುನಾಡು ಚುನಾವಣೆಯಿಂದ ಹಿಂದೆ ಸರಿದ ಕಮಲ್ ಹಾಸನ್ ನೇತೃತ್ವದ MNM ಪಕ್ಷ; ಡಿಎಂಕೆಗೆ ಬೇಷರತ್ ಬೆಂಬಲ

ಕಮಲ್ ಹಾಸನ್ ಮತ್ತು ಸಿಎಂ ಎಂ.ಕೆ.ಸ್ಟಾಲಿನ್
ಕಮಲ್ ಹಾಸನ್ ಮತ್ತು ಸಿಎಂ ಎಂ.ಕೆ.ಸ್ಟಾಲಿನ್
Published on
ಚೆನ್ನೈ: ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಮಹತ್ದ ಬೆಳವಣಿಗೆ ನಡೆದಿದ್ದು, ನಟ ಮತ್ತು ರಾಜ್ಯಸಭಾ ಸದಸ್ಯ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನಿಧಿ ಮಯ್ಯಮ್(MNM) ಪಕ್ಷ ಚುನಾವಣೆಯಿಂದ ಹಿಂದೆ ಸರಿದಿದ್ದು, ಡಿಎಂಕೆಗೆ ಬೇಷರತ್ ಬೆಂಬಲವನ್ನು ಘೋಷಣೆ ಮಾಡಿದೆ.
ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳ ನಡುವೆ ಸೀಟು ಹಂಚಿಕೆ ಒಪ್ಪಂದ ನಡೆಯುತ್ತಿರುವ ನಡುವೆಯೂ, ಡಿಎಂಕೆ ನೀಡಿದ ಎರಡು ಸ್ಥಾನ ಮತ್ತು ಆ ಇಬ್ಬರು ಅಭ್ಯರ್ಥಿಗಳು ಡಿಎಂಕೆ ಉದಯಿಸುತ್ತಿರುವ ಸೂರ್ಯ ಚಿಹ್ನೆಯಡಿಯಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಎಂಎನ್​ಎಂ ತಿರಸ್ಕರಿಸಿದ್ದು, ಚುನಾವಣೆಯಲ್ಲಿ ಸ್ಪರ್ಧಿಸದಿರುವ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ.
ಡಿಎಂಕೆ ಬೆಂಬಲದಿಂದ ರಾಜ್ಯಸಭಾ ಸದಸ್ಯರಾಗಿರುವ ಕಮಲ್ ಹಾಸನ್ ಮಾತನಾಡಿದ್ದು, ಪ್ರಸ್ತುತ ಸವಾಲಿನ ರಾಜಕೀಯ ಪರಿಸ್ಥಿತಿಯಲ್ಲಿ, ನಮಗೆ ಹಂಚಿಕೆ ಮಾಡಲಾದ ಸ್ಥಾನಗಳ ಸಂಖ್ಯೆ ಮತ್ತು ಉದಯಿಸುತ್ತಿರುವ ಸೂರ್ಯ ಚಿಹ್ನೆಯಡಿಯಲ್ಲಿ ನಾವು ಸ್ಪರ್ಧಿಸಬೇಕೆಂಬ ಸಲಹೆಯು ಮಕ್ಕಳ್ ನೀಧಿ ಮಯ್ಯಮ್ ಸದಸ್ಯರಿಗೆ ಅಥವಾ ನನಗೆ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಡಿಎಂಕೆಯ ಸ್ಥಾನ ಹಂಚಿಕೆ ಮತ್ತು ಸ್ಪರ್ಧೆ ಬಗ್ಗೆ ಅವರ ಕಡೆಯಿಂದ ಸಮರ್ಥನೆ ಇದೆ. ಅದು ನನಗೆ ಅರ್ಥವಾಗಿದೆ. ಕೋಮುವಾದಿ ಶಕ್ತಿಗಳು ತಮಿಳುನಾಡನ್ನು ವಶಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ತಂತ್ರಗಳನ್ನು ಹೂಡಿರುವ ಪರಿಸ್ಥಿತಿಯಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಬೇಕಾಗಿದೆ. ಅದು ನ್ಯಾಯಯುತವಾಗಿದೆ ಎಂದಿದ್ದಾರೆ.
ಆದರೆ ಎಂಎನ್​ಎಂ ಸ್ವಯಂಸೇವಕರಿಗೆ ಪಕ್ಷದ ಟಾರ್ಚ್​ಲೈಟ್ ಚಿಹ್ನೆಯೊಂದಿಗೆ ಭಾವನಾತ್ಮಕ ಸಂಬಂಧವಿದೆ. ಕಳೆದ ಒಂಬತ್ತು ವರ್ಷಗಳಿಂದ ಯಾವುದೇ ವೈಯಕ್ತಿಕ ಲಾಭವನ್ನು ನಿರೀಕ್ಷಿಸದೆ ನನ್ನೊಂದಿಗೆ ನಿಂತಿರುವ ನನ್ನ ಸ್ವಯಂಸೇವಕರ ಭಾವನೆಗಳನ್ನು ನಾನು ನಿರ್ಲಕ್ಷಿಸಲು ಸಾಧ್ಯವಿಲ್ಲ ಮತ್ತು ನಿರ್ಲಕ್ಷಿಸುವುದಿಲ್ಲ. ಹಾಗಾಗಿ ಚುನಾವಣೆಯಲ್ಲಿ ಸ್ಪರ್ಧಿಸದೇ ಡಿಎಂಕೆಗೆ ಬೇಷರತ್ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಕಮಲ್ ಹಾಸನ್ ಅವರ ನಿರ್ಧಾರಕ್ಕೆ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಎಂ.ಕೆ.ಸ್ಟಾಲಿನ್, ಕಮಲ್ ಹಾಸನ್ ಅಣ್ಣಾ ಅರಿವಲಯಂನಲ್ಲಿ ತಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಂಎನ್ಎಂ ಸ್ಪರ್ಧಿಸುವುದಿಲ್ಲ. ಆದರೆ ಡಿಎಂಕೆ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೇಷರತ್ತಾದ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ನಾವು ಎರಡು ರಾಜಕೀಯ ಚಳುವಳಿಗಳ ನಾಯಕರಾಗಿ ಮಾತ್ರವಲ್ಲದೆ, ಉತ್ತಮ ಸ್ನೇಹಿತರಂತೆ ಸಂವಹನ ನಡೆಸಿದ್ದೇವೆ ಮತ್ತು ನಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಇದು ತ್ಯಾಗವಲ್ಲ, ಆದರೆ ಕರ್ತವ್ಯ, ಆದರೆ ವಾಸ್ತವದಲ್ಲಿ, ಅವರು ಮಾಡಿದ್ದು ನಿಜಕ್ಕೂ ತ್ಯಾಗ. ಹಾಸನ್ ಅವರ ನಿರ್ಧಾರದಿಂದ ತುಂಬಾ ಪ್ರಭಾವಿತನಾಗಿದ್ದೇನೆ. ಅವರಿಗೆ ಮತ್ತು ಎಂಎನ್ಎಂ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಸ್ವಹಿತಾಸಕ್ತಿಯನ್ನು ಬದಿಗಿಟ್ಟು ತಮಿಳುನಾಡಿನ ಕಲ್ಯಾಣಕ್ಕೆ ಆದ್ಯತೆ ನೀಡುವ ಅವರ ಉದಾರ ನಿರ್ಧಾರವನ್ನು ಇತಿಹಾಸವು ಹೊಗಳುತ್ತದೆ ಎಂದು ಬರೆದುಕೊಂಡಿದ್ದಾರೆ.
ಏತನ್ಮಧ್ಯೆ, ಡಿಎಂಕೆ ಮೈತ್ರಿಕೂಟ ತನ್ನ ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಿದೆ. ಕಾಂಗ್ರೆಸ್ 28, ವಿಸಿಕೆ 8, ಡಿಎಂಡಿಕೆ 10, ಸಿಪಿಐ 5, ಸಿಪಿಎಂ 5, ಎಂಡಿಎಂಕೆ 4 ಹಾಗೂ ಐಯುಎಂಎಲ್, ಎಂಎಂಕೆ, ಕೆಎಂಡಿಕೆಗೆ ತಲಾ ಎರಡು ಸ್ಥಾನಗಳನ್ನು ಹಂಚಿಕೆ ಮಾಡಿದ್ದು, ಉಳಿದ ಎಲ್ಲಾ ಸ್ಥಾನಗಳಲ್ಲಿ ಡಿಎಂಕೆ ಸ್ಪರ್ಧಿಸಲಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net