2023ರಲ್ಲಿ ಸಾವಿಗೆ ಶರಣಾದ ವ್ಯಕ್ತಿಗೆ 2024ರಲ್ಲಿ ಮದುವೆ! ಹಣಕ್ಕಾಗಿ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋದು ಇದಕ್ಕೇನಾ? Marriage

2023ರಲ್ಲಿ ಸಾವಿಗೆ ಶರಣಾದ ವ್ಯಕ್ತಿಗೆ 2024ರಲ್ಲಿ ಮದುವೆ! ಹಣಕ್ಕಾಗಿ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋದು ಇದಕ್ಕೇನಾ? Marriage
2023ರಲ್ಲಿ ಸಾವಿಗೆ ಶರಣಾದ ವ್ಯಕ್ತಿಗೆ 2024ರಲ್ಲಿ ಮದುವೆ! ಹಣಕ್ಕಾಗಿ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋದು ಇದಕ್ಕೇನಾ? Marriage
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ಯೋಜನೆಗಳ ಹಣ ಪಡೆಯಲು ಜನ ಎಂತೆಂತಹ ದಾರಿ ಹಿಡಿಯುತ್ತಾರೆ ಅನ್ನೋದಕ್ಕೆ ತಾಜಾ ಉದಾಹರಣೆ
  • ಹಣದ ಆಸೆಗೆ ಬಿದ್ದವರು ಕಣ್ಣಿಗೆ ಕಾಣುವ ಬದುಕಿರುವವರನ್ನಷ್ಟೇ ಅಲ್ಲ, ಕೊನೆಯುಸಿರೆಳೆದವರನ್ನೂ ಬಿಡುತ್ತಿಲ್ಲ
  • ಇಲ್ಲೊಬ್ಬ ವ್ಯಕ್ತಿ ಸತ್ತು ಒಂದು ವರ್ಷ ಕಳೆಯುವಷ್ಟರಲ್ಲಿ, ಆತನಿಗೆ ಮತ್ತೊಮ್ಮೆ ಮದುವೆ ಮಾಡಿಸಿದ ಕಿರಾತಕರು
  • ಸರ್ಕಾರದ 'ಕಲ್ಯಾಣಲಕ್ಷ್ಮಿ' ಯೋಜನೆಯ ಹಣವನ್ನು ಲೂಟಿ ಮಾಡಿರುವ ಮಹಾ ವಂಚನೆಯೊಂದು ಬಯಲು
Marriage : ಸರ್ಕಾರದ ಯೋಜನೆಗಳ ಹಣ ಪಡೆಯಲು ಜನ ಎಂತೆಂತಹ ದಾರಿ ಹಿಡಿಯುತ್ತಾರೆ ಅನ್ನೋದಕ್ಕೆ ಇಲ್ಲೊಂದು ಆಘಾತಕಾರಿ ಉದಾಹರಣೆ ಸಿಕ್ಕಿದೆ. ಹಣದ ಆಸೆಗೆ ಬಿದ್ದ ಕಿಲಾಡಿಗಳು ಕಣ್ಣಿಗೆ ಕಾಣುವ ಬದುಕಿರುವವರನ್ನಷ್ಟೇ ಅಲ್ಲ, ಕೊನೆಯುಸಿರೆಳೆದವರನ್ನೂ ಬಿಡುತ್ತಿಲ್ಲ! ಇಲ್ಲೊಬ್ಬ ವ್ಯಕ್ತಿ ಸತ್ತು ಒಂದು ವರ್ಷ ಕಳೆಯುವಷ್ಟರಲ್ಲಿ, ಆತನಿಗೆ ಮತ್ತೊಮ್ಮೆ ಮದುವೆ ಮಾಡಿಸಿ ಸರ್ಕಾರದ 'ಕಲ್ಯಾಣಲಕ್ಷ್ಮಿ' ಯೋಜನೆಯ ಹಣವನ್ನು ಲೂಟಿ ಮಾಡಿರುವ ಮಹಾ ವಂಚನೆಯೊಂದು ಬಯಲಾಗಿದೆ. ಅಧಿಕಾರಿಗಳು ಶಾಮೀಲಾಗಿ ಮೃತ ವ್ಯಕ್ತಿಯನ್ನೇ ಕಾಗದದ ಮೇಲೆ ಬದುಕಿಸಿ, ನಕಲಿ ದಾಖಲೆ ಸೃಷ್ಟಿಸಿದ ಈ ಕಿರಾತಕರ ಕರಾಳ ಕಥೆ ಭಾರಿ ಸಂಚಲನ ಮೂಡಿಸಿದೆ!"
ಹೌದು, ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ ಮಣುಗೂರು ಮುನ್ಸಿಪಾಲಿಟಿ ವ್ಯಾಪ್ತಿಯ ಶಿವಲಿಂಗಪುರಂ ಗ್ರಾಮದ ನಿವಾಸಿಯಾದ ಪಟ್ನಾಲ ಸಾಯಿ ಕುಮಾರ್ ಎಂಬುವವರು 2019 ರಲ್ಲಿ ಇದುನೂರಿ ಸಾಯಿ ಪ್ರಸನ್ನ ಎಂಬಾಕೆಯನ್ನು ವಿವಾಹವಾದರು. ಈ ದಂಪತಿಗೆ ಒಬ್ಬ ಮಗನಿದ್ದಾನೆ. ಆದರೆ, ತೀವ್ರ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಸಾಯಿ ಕುಮಾರ್ ಅವರು ಸೆಪ್ಟೆಂಬರ್ 19, 2023 ರಂದು ಆತ್ಮಹತ್ಯೆ ಮಾಡಿಕೊಂಡರು.
ಸಾಯಿ ಕುಮಾರ್ ಆತ್ಮಹತ್ಯೆ ಸಂಬಂಧ ಮಣುಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಇದೀಗ ಇದೇ ಮೃತ ವ್ಯಕ್ತಿಗೆ ಒಂದು ವರ್ಷದ ನಂತರ ಮದುವೆ ಮಾಡಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ 'ಕಲ್ಯಾಣಲಕ್ಷ್ಮಿ' ಯೋಜನೆಯ ಹಣವನ್ನು ಲೂಟಿ ಮಾಡಿರುವ ಮಹಾ ಹಗರಣವೊಂದು ಭದ್ರಾದ್ರಿ ಜಿಲ್ಲೆಯಲ್ಲಿ ಬಯಲಿಗೆ ಬಂದು ಭಾರಿ ಸಂಚಲನ ಮೂಡಿಸಿದೆ.
ಬಡವರಿಗಾಗಿ ಜಾರಿಗೆ ತಂದಿರುವ ಸರ್ಕಾರದ 'ಕಲ್ಯಾಣಲಕ್ಷ್ಮಿ' ಯೋಜನೆಯ ಹಣವನ್ನು ಲೂಟಿ ಮಾಡಲು ಕೆಲವರು ಅತ್ಯಂತ ಹೀನಾಯವಾದ ವಂಚನೆಯ ಹಾದಿ ಹಿಡಿದಿದ್ದಾರೆ. 2023ರಲ್ಲೇ ಮೃತಪಟ್ಟಿದ್ದ ಸಾಯಿ ಕುಮಾರ್, ಒಂದು ವರ್ಷದ ನಂತರ ಅಂದರೆ ಮೇ 20, 2024 ರಂದು ಸಾಯಿ ಪ್ರಸನ್ನ ಅವರನ್ನು ಮರುವಿವಾಹವಾಗಿದ್ದಾರೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಭುರ್ಗಂಪಾಡು ಉಪನೋಂದಣಾಧಿಕಾರಿ ಕಚೇರಿಯು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಈ ನಕಲಿ ಮದುವೆ ಪ್ರಮಾಣಪತ್ರವನ್ನು ದೃಢೀಕರಿಸಿ ನೀಡಿದೆ.
ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಸೂಕ್ತ ಪರಿಶೀಲನೆ ನಡೆಸದೆಯೇ ಈ ನಕಲಿ ದಾಖಲೆಗಳನ್ನು ಅನುಮೋದಿಸಿದ್ದರಿಂದ, ಸಾಯಿ ಪ್ರಸನ್ನ ಅವರ ತಾಯಿ ಸತ್ಯವತಿ ಅವರ ಹೆಸರಿನಲ್ಲಿ ಕಲ್ಯಾಣಲಕ್ಷ್ಮಿ ಯೋಜನೆಯ ಚೆಕ್ ಕೂಡ ಬಿಡುಗಡೆಯಾಗಿದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ವಿವಾಹವಾಗುವ ದಂಪತಿ ಮತ್ತು ವಯಸ್ಕ ಸಾಕ್ಷಿದಾರರ ಸಹಿ ಇಲ್ಲದೆಯೇ ಈ ವಿವಾಹ ಪ್ರಮಾಣಪತ್ರವನ್ನು ಹೇಗೆ ನೀಡಲಾಯಿತು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿ ಮೂಡಿದೆ.
ಮೃತ ವ್ಯಕ್ತಿಯ ಹೆಸರಿನಲ್ಲಿ ನಡೆದಿರುವ ಈ ಕಲ್ಯಾಣಲಕ್ಷ್ಮಿ ಯೋಜನೆಯ ಮಹಾ ವಂಚನೆಯು ಸ್ಥಳೀಯವಾಗಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ನಕಲಿ ದಾಖಲೆಗಳ ಹಗರಣದ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದು, ತನಿಖೆ ನಡೆದರೆ ಇಂತಹ ಇನ್ನೂ ಅನೇಕ ಅಕ್ರಮಗಳು ಮತ್ತು ಇಲಾಖೆಯ ಒಳಗಿರುವ ಭ್ರಷ್ಟ ಅಧಿಕಾರಿಗಳ ಕೈವಾಡ ಬೆಳಕಿಗೆ ಬರಲಿದೆ ಎಂದು ಒತ್ತಾಯಿಸಿದ್ದಾರೆ.

ಏನಿದು ಕಲ್ಯಾಣಲಕ್ಷ್ಮೀ ಯೋಜನೆ?

'ಕಲ್ಯಾಣಲಕ್ಷ್ಮಿ' ಯೋಜನೆಯು ತೆಲಂಗಾಣ ಸರ್ಕಾರವು ಬಡ ಕುಟುಂಬಗಳ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯಡಿ ಮದುವೆಯಾಗುವ ಅರ್ಹ ಯುವತಿಯ ಕುಟುಂಬಕ್ಕೆ ಸರ್ಕಾರದಿಂದ 1,01,116 ರೂಪಾಯಿ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ. ಮುಖ್ಯವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಕುಟುಂಬಗಳ ಹೆಣ್ಣುಮಕ್ಕಳ ಮದುವೆ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು ಮತ್ತು ಬಾಲ್ಯವಿವಾಹಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಕಲ್ಯಾಣ ಯೋಜನೆಯನ್ನು ರೂಪಿಸಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net