3 ತಿಂಗಳಿನಿಂದ ಸರ್ಕಾರ ನಡೆಸಿದ್ದು ದೀದಿ ಅಲ್ಲ... ಬಂಗಾಳ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಕಲ್ಯಾಣ್ ಬ್ಯಾನರ್ಜಿ ಹೇಳಿಕೆ! Kalyan Banerjee

Kalyan Banerjee (ಚಿತ್ರ X)
Kalyan Banerjee (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತೃಣಮೂಲ ಕಾಂಗ್ರೆಸ್ (TMC) ಮತ್ತು ಬಿಜೆಪಿ ನಡುವಿನ ಸಂಘರ್ಷ ತಾರಕಕ್ಕೇರಿದೆ
  • ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಕಡಾಖಂಡಿತವಾಗಿ ತಿಳಿಸಿದ್ದಾರೆ
  • ಕಳೆದ ಮೂರು ತಿಂಗಳಿನಿಂದ ದೇಶಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ
  • ಈ ಅವಧಿಯಲ್ಲಿ ಸರ್ಕಾರವನ್ನು ವಾಸ್ತವವಾಗಿ ಯಾರು ನಡೆಸುತ್ತಿದ್ದಾರೆ? ಅದು ಮುಖ್ಯ ಕಾರ್ಯದರ್ಶಿಗಳು ಮಾತ್ರ
Kalyan Banerjee: ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತೃಣಮೂಲ ಕಾಂಗ್ರೆಸ್ (TMC) ಮತ್ತು ಬಿಜೆಪಿ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ಹೇಳಿಕೆಗಳು ಮತ್ತು ಅದಕ್ಕೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ನೀಡಿರುವ ಸಮರ್ಥನೆ ಹೊಸ ಸಂಚಲನ ಮೂಡಿಸಿದೆ. ಬಿಜೆಪಿಯ ಗೆಲುವನ್ನು 'ಕಾನೂನುಬದ್ಧ' ಎಂದು ಒಪ್ಪದ ಮಮತಾ ಬ್ಯಾನರ್ಜಿ, ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಕಡಾಖಂಡಿತವಾಗಿ ತಿಳಿಸಿದ್ದಾರೆ.

ಟಿಎಂಸಿ ಸಂಸದ ಕಲ್ಯಾಣ್​ ಹೇಳಿದ್ದೇನು? 

ಕಳೆದ ಮೂರು ತಿಂಗಳಿನಿಂದ ದೇಶಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಸರ್ಕಾರವನ್ನು ವಾಸ್ತವವಾಗಿ ಯಾರು ನಡೆಸುತ್ತಿದ್ದಾರೆ? ಅದು ಮುಖ್ಯ ಕಾರ್ಯದರ್ಶಿಗಳು ಮಾತ್ರ. ಹಾಗಾದರೆ, ಕಳೆದ 3 ತಿಂಗಳಿನಿಂದ ಮಮತಾ ಬ್ಯಾನರ್ಜಿ ಅಧಿಕೃತವಾಗಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಹಾಗಿದ್ದಾಗ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ. ಈ ವೇಳೆ ಎಲ್ಲಾ ಅಭ್ಯರ್ಥಿಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಎಲ್ಲಾ ಎಣಿಕೆ ಏಜೆಂಟ್‌ಗಳ ಮೇಲೆ ಸಿಐಎಸ್‌ಎಫ್ ಮತ್ತು ಸಿಆರ್‌ಪಿಎಫ್ ಕ್ರೂರವಾಗಿ ಹಲ್ಲೆ ನಡೆಸಿ ಹೊರಗೆ ಹಾಕಲಾಯಿತು. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆ.  ಎಣಿಕೆಯಲ್ಲಿ ಪಾರದರ್ಶಕತೆ ಇಲ್ಲ. ಇದು ಪ್ರಜಾಪ್ರಭುತ್ವದ ಮೇಲಿನ ಕ್ರೂರ ದಾಳಿ. ಅವರು ಎಣಿಕೆಯಲ್ಲಿ ಎಲ್ಲವನ್ನೂ ಲೂಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಮುಲಾಜಿಲ್ಲದೆ ಕಿತ್ತೊಗೆಯಿರಿ ಎಂದ ಮಹೇಶ್ ಜೇಠ್ಮಲಾನಿ

ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಚುನಾವಣಾ ಆಯೋಗವು ಫಲಿತಾಂಶವನ್ನು ಪ್ರಮಾಣೀಕರಿಸಿದ ಕ್ಷಣದಿಂದಲೇ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ ಮತ್ತು ಅವರು ಸದ್ಯ ಮುಖ್ಯಮಂತ್ರಿ ಕಚೇರಿಯನ್ನು ಅತಿಕ್ರಮಿಸಿದ್ದಾರೆ ಎಂದರು. ದೀದಿ ವಿನಮ್ರವಾಗಿ ರಾಜೀನಾಮೆ ನೀಡುವ ಬದಲು ಹಠಕ್ಕೆ ಬಿದ್ದು ಕುರ್ಚಿಗೆ ಅಂಟಿಕೊಳ್ಳುತ್ತಿರುವುದು ಸ್ವತಃ ತಮಗೆ ತಾವೇ ಮಾಡಿಕೊಳ್ಳುತ್ತಿರುವ ಅವಮಾನವಾಗಿದ್ದು, ರಾಜ್ಯಪಾಲರು ಯಾವುದೇ ಮುಲಾಜಿಲ್ಲದೆ ತಕ್ಷಣವೇ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಮಮತಾ ಬ್ಯಾನರ್ಜಿ ಕಚೇರಿಯನ್ನು ಖಾಲಿ ಮಾಡಲು ನಿರಾಕರಿಸಿದರೆ, ರಾಜ್ಯಪಾಲರು ಪೊಲೀಸರನ್ನು ಕಳುಹಿಸಿ ಅವರನ್ನು ಹೊರಹಾಕುವ ಅಧಿಕಾರ ಹೊಂದಿದ್ದಾರೆ ಎಂದು ಜೇಠ್ಮಲಾನಿ ವಿವರಿಸಿದ್ದು, ಯಾವುದೇ ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವು ರಾಜ್ಯಪಾಲರ ಇಚ್ಛೆಯ ಮೇರೆಗೆ ಅಧಿಕಾರದಲ್ಲಿರುತ್ತದೆ ಎಂಬ ಸಾಂವಿಧಾನಿಕ ನಿಯಮವನ್ನು ಅವರು ನೆನಪಿಸಿದ್ದಾರೆ. ಮೇ 7 ರಂದು ಬಂಗಾಳ ವಿಧಾನಸಭೆಯ ಅವಧಿ ಕೊನೆಗೊಳ್ಳಲಿದ್ದು, ಈ ಹಂತದಲ್ಲಿ ಮಮತಾ ಅವರ ಹಠಮಾರಿತನವು ಅವರನ್ನು ಸಾಂವಿಧಾನಿಕವಾಗಿ ವಜಾಗೊಳಿಸುವ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ರಾಜೀನಾಮೆ ನೀಡಲ್ಲ ಎಂದಿದ್ದ ದೀದಿ..

ಈ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ನಿಕಟಪೂರ್ವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಚುನಾವಣಾ ಆಯೋಗದ ಮೂಲಕ ಬಿಜೆಪಿ ನಮ್ಮನ್ನು ಅಧಿಕೃತವಾಗಿ ಸೋಲಿಸಿರಬಹುದು, ಆದರೆ ನೈತಿಕವಾಗಿ ನಾವೇ ಗೆದ್ದಿದ್ದೇವೆ ಎಂದು ವಾದಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೀದಿ, ತಾವು ರಾಜಭವನಕ್ಕೆ ಹೋಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ತಮಗೆ ಯಾವುದೇ ಅಧಿಕಾರದ ಕುರ್ಚಿ ಇಲ್ಲದಿದ್ದರೂ ಸಾಮಾನ್ಯ ವ್ಯಕ್ತಿಯಾಗಿ ಹೋರಾಟ ಮುಂದುವರಿಸುವುದಾಗಿ ಮತ್ತು ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವುದಾಗಿ ತಿಳಿಸಿದ್ದಾರೆ. ದೀದಿಯ ಈ ನಿಲುವು ರಾಜ್ಯದಲ್ಲಿ ಮತ್ತಷ್ಟು ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net