ಬಿಜೆಪಿಗೆ ಅಣ್ಣಾಮಲೈ ದಿಢೀರ್ ರಾಜೀನಾಮೆ! ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ: ಇಂದು ಸಂಜೆ ಅಮಿತ್ ಶಾ ಭೇಟಿ | Annamalai

Annamalai
Annamalai
Published on
ಚೆನ್ನೈ/ನವದೆಹಲಿ: ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಭಾರಿ ರಾಜಕೀಯ ಸಚಲನ ಸೃಷ್ಟಿಯಾಗಿದೆ. ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ(Annamalai) ಅವರು ಮಂಗಳವಾರ ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ನವದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾದ ಅಣ್ಣಾಮಲೈ, ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಇಂದು ಸಂಜೆ 4 ಗಂಟೆಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದು, ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಆ ಜಾಗಕ್ಕೆ ನಯಿನಾರ್ ನಾಗೇಂದ್ರನ್ ಅವರು ಬಂದಾಗಿನಿಂದಲೂ ಅಣ್ಣಾಮಲೈ ಪಕ್ಷದಲ್ಲಿ ತಟಸ್ಥರಾಗಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗಿನ ಪ್ರಮುಖ ಸಭೆಯಲ್ಲಿ, ತಮಗೆ ಬಿಜೆಪಿಯಲ್ಲಿ ಭವಿಷ್ಯ ಕಾಣಿಸುತ್ತಿಲ್ಲ ಎಂದು ಅಣ್ಣಾಮಲೈ ಮುಕ್ತವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಸೌಹಾರ್ದಯುತವಾಗಿಯೇ ಪಕ್ಷದಿಂದ ಹೊರನಡೆಯಲು ಇಚ್ಛಿಸಿರುವ ಅವರು, "ನನ್ನ ಸ್ವಂತ ರಾಜಕೀಯ ಹಾದಿಯನ್ನು ನಾನೇ ರೂಪಿಸಿಕೊಳ್ಳಲು ಬಯಸುತ್ತೇನೆ" ಎಂದು ಹೈಕಮಾಂಡ್‌ಗೆ ತಿಳಿಸಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಆದಾಗ್ಯೂ, ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಕಸರತ್ತು ನಡೆಸುತ್ತಿದ್ದು, ರಾಷ್ಟ್ರೀಯ ಮಟ್ಟದ ಜವಾಬ್ದಾರಿ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ಸೂಚನೆ ಬರುವವರೆಗೂ ದೆಹಲಿ ಬಿಟ್ಟು ಕದಲದಂತೆ ಅಣ್ಣಾಮಲೈಗೆ ಸೂಚಿಸಲಾಗಿದೆ.

ನಟ ವಿಜಯ್ ಎಂಟ್ರಿಯಿಂದ ಬದಲಾದ ಲೆಕ್ಕಾಚಾರ!

ಇತ್ತೀಚೆಗಷ್ಟೇ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಟ್ಟು ನೇರವಾಗಿ ಮುಖ್ಯಮಂತ್ರಿ ಗದ್ದುಗೆಗೇರಿದ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಉದಯದ ಬಳಿಕ ತಮಿಳುನಾಡಿನ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದೆ ಎಂದು ಅಣ್ಣಾಮಲೈ ಭಾವಿಸಿದ್ದಾರೆ. "ಇಂದು ವಿಜಯ್ ಅವರನ್ನು ಎದುರಿಸಲು ರಾಜ್ಯದಲ್ಲಿ ಯಾವುದೇ ಪ್ರಬಲ ನಾಯಕರಿಲ್ಲ. ದ್ರಾವಿಡ ರಾಜಕಾರಣದ ಯುಗ ಮುಗಿಯುತ್ತಾ ಬಂದಿದೆ. ಕೇವಲ ಭಾಷೆಯನ್ನೇ ಇಟ್ಟುಕೊಂಡು ಮಾಡುವ ರಾಜಕೀಯ ಇನ್ನು ಮುಂದೆ ನಡೆಯುವುದಿಲ್ಲ" ಎಂದು ಅಣ್ಣಾಮಲೈ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಮಧುರೈನಲ್ಲಿ ಅಣ್ಣಾಮಲೈ ಬೆಂಬಲಿಗರು ಭಾರಿ ಪೋಸ್ಟರ್‌ಗಳನ್ನು ಹಾಕಿದ್ದು, "ತಮಿಳುನಾಡನ್ನು ರಕ್ಷಿಸಲು ಅಣ್ಣಾಮಲೈ ತಮ್ಮ ಮುಂದಿನ ಹೊಸ ಅವತಾರ ಎತ್ತಬೇಕು" ಎಂದು ಒತ್ತಾಯಿಸಿದ್ದಾರೆ. ಇದು ಅವರು ಸ್ವಂತ ಪಕ್ಷ ಸ್ಥಾಪಿಸುವ ಮುನ್ಸೂಚನೆಯೇ ಎಂಬ ಚರ್ಚೆ ಶುರುವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net