ಸಂಸದೀಯ ಸಮಿತಿ ಮುಂದೆ ಜಸ್ಟೀಸ್ ಹಾಜರ್​..ಪೊಲೀಸ್ ಮತ್ತು ಅಗ್ನಿಶಾಮಕ ದಳದ ವಿರುದ್ಧ ವರ್ಮಾ ಗಂಭೀರ ಆರೋಪ | Justice Varma

 Justice Varma
Justice Varma
Published on
ದೆಹಲಿ: ನ್ಯಾಯಮೂರ್ತಿ ಯಶವಂತ್ ವರ್ಮಾ ಸಂಸದೀಯ ತನಿಖಾ ಸಮಿತಿಯ ಮುಂದೆ ತಮ್ಮ ಉತ್ತರವನ್ನು ಸಲ್ಲಿಸಿದ್ದು, ಅವರ ವಿರುದ್ಧ ಆರಂಭಿಸಲಾದ ಮಹಾಭಿಯೋಗ ಪ್ರಕ್ರಿಯೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನ್ಯಾಯಮೂರ್ತಿ ವರ್ಮಾ ತಮ್ಮ ಪ್ರತಿಕ್ರಿಯೆಯಲ್ಲಿ, ಸರ್ಕಾರಿ ಅಧಿಕಾರಿಗಳು ಆಪಾದಿತ ಅಪರಾಧದ ಸ್ಥಳವನ್ನು ಸುರಕ್ಷಿತವಾಗಿರಿಸುವಲ್ಲಿ ವಿಫಲವಾದಾಗ ಏಕೆ ಮಹಾಭಿಯೋಗವನ್ನು ಎದುರಿಸಬೇಕು ಎಂದು ಪ್ರಶ್ನಿಸಿದ್ದಾರೆ ಎನ್ನುವುದು ಮೂಲಗಳ ಮಾಹಿತಿ. ಕಳೆದ ವರ್ಷ ಮಾರ್ಚ್ 14 ರಂದು ನ್ಯಾಯಮೂರ್ತಿ ವರ್ಮಾರ ಅಧಿಕೃತ ನಿವಾಸದಲ್ಲಿ ಸುಟ್ಟ ಕರೆನ್ಸಿ ನೋಟುಗಳು ಪತ್ತೆಯಾದ ಬಳಿಕ ಘಟನೆಗಳಿಂದ ಈ ಮಹಾಭಿಯೋಗ ಪ್ರಕ್ರಿಯೆಗಳು ಹುಟ್ಟಿಕೊಂಡಿವೆ.
ಘಟನಾ ಸ್ಥಳಕ್ಕೆ ತಾವು ಮೊದಲು ತಲುಪಿಲ್ಲ, ಅದಾಗಲೇ ಅಲ್ಲಿ ತುಂಬಾ ಜನ ಸೇರಿದ್ದರು ಎಂದು ನ್ಯಾಯಮೂರ್ತಿ ವರ್ಮಾ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಆ ಪ್ರದೇಶವನ್ನು ಸುರಕ್ಷಿತಗೊಳಿಸಲು ಮತ್ತು ಸೀಲ್ ಮಾಡಲು ವಿಫಲವಾಗಿ, ಆ ಆರೋಪವನ್ನು ತಮ್ಮ ಮೇಲೆ ಹೊರಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ಬೆಂಕಿಗೆ ಸಂಬಂಧಿಸಿದ ಘಟನೆಗಳಲ್ಲಿ, ಪೊಲೀಸರು ನಿರ್ದಿಷ್ಟ ಕಾರ್ಯವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದು ಅವರು ಉಲ್ಲೇಖಿಸಿದ್ದು, ಆದರೆ ಈ ಪ್ರಕರಣದಲ್ಲಿ ಅವುಗಳನ್ನು ಅನುಸರಿಸಲಾಗಿಲ್ಲ ಎಂದಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಇಬ್ಬರೂ ಸ್ಥಳದಲ್ಲಿದ್ದರು, ಆದರೆ ಭದ್ರತೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿಲ್ಲ, ಆ ಸಮಯದಲ್ಲಿ ಸ್ಥಳದಿಂದ ಯಾವುದೇ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ವರ್ಮಾ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

ಸಿಜೆಐ ತನಿಖೆಯಲ್ಲಿ ಕಂಡು ಬಂದಿದ್ದೇನು..?

ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ಮೂವರು ಸದಸ್ಯರ ಸಮಿತಿಯ ಮೂಲಕ ಆಂತರಿಕ ತನಿಖೆಯನ್ನು ಪ್ರಾರಂಭಿಸಿದ್ದರು, ಇದರಲ್ಲಿ ನ್ಯಾಯಮೂರ್ತಿ ವರ್ಮಾರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ವರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ ಬಳಿಕ, ಅವರ ಪ್ರತಿಕ್ರಿಯೆಯೊಂದಿಗೆ ತನಿಖೆಯ ವರದಿಯನ್ನು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ರವಾನಿಸಲಾಯಿತು.
ಆಗಸ್ಟ್ 12 ರಂದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಬಹುಪಕ್ಷಗಳ ಪ್ರಸ್ತಾವನೆಯನ್ನು ಅಂಗೀಕರಿಸಿದರು ಮತ್ತು ತನಿಖಾ ಸಮಿತಿಯನ್ನು ರಚಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net