ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ. ಸೂರ್ಯಕಾಂತ್ | Justice Surya Kant

ನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯಕಾಂತ್ ಪ್ರಮಾಣವಚನ
ನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯಕಾಂತ್ ಪ್ರಮಾಣವಚನ
Published on
ನವದೆಹಲಿ: ಭಾರತದ ಸುಪ್ರೀಂಕೋರ್ಟ್​​ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯಕಾಂತ್(Justice Surya Kant) ಇಂದು(ನ. 24) ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.  2027 ಫೆಬ್ರವರಿ 9ರವರೆಗೆ ಸೇವೆ ಸಲ್ಲಿಸಲಿದ್ದಾರೆ. 
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು. 
ಭಾನುವಾರ(ನ. 23) ಸಿಜೆಐ ಗವಾಯಿ ನಿವೃತ್ತಿ ಹೊಂದಿದ ಹಿನ್ನೆಲೆ ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸುವ ಸಂಪ್ರದಾಯದ ಪ್ರಕಾರ ನ್ಯಾ. ಸೂರ್ಯಕಾಂತ್ ಹೆಸರನ್ನು ಶಿಫಾರಸ್ಸು ಮಾಡಿದ್ದರು.
ಸಿಜೆಐ ಗವಾಯಿ ಅವರ ಶಿಫಾರಸಿನ ಮೇರೆಗೆ ಸಂವಿಧಾನದ 124ನೇ ವಿಧಿಯ ಷರತ್ತು (2) ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸಿ ರಾಷ್ಟ್ರಪತಿಗಳು ನ್ಯಾ. ಸೂರ್ಯ ಕಾಂತ್ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿದ್ದಾರೆ.

ನ್ಯಾ. ಸೂರ್ಯಕಾಂತ್ ಯಾರು? 

1962 ಫೆಬ್ರವರಿ 10ರಂದು ಹರಿಯಾಣದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನ್ಯಾಯಮೂರ್ತಿ ಸೂರ್ಯಕಾಂತ್, 1984ರಲ್ಲಿ ಹಿಸಾರ್‌ನಲ್ಲಿ ತಮ್ಮ ಕಾನೂನು ವೃತ್ತಿಯನ್ನು ಪ್ರಾರಂಭಿಸಿದ್ದರು. ಬಳಿಕ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಲು ಚಂಡೀಗಢಕ್ಕೆ ತೆರಳಿದರು.
2000 ಜುಲೈ ತಿಂಗಳಲ್ಲಿ ಹರಿಯಾಣದ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದ ಅವರು 2001ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. 2004 ಜನವರಿ 9ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ನಂತರ 2018  ಅಕ್ಟೋಬರ್​ನಿಂದ 2019 ಮೇ  24,ರವರೆಗೆ ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆಯುವವರೆಗೆ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. ನವೆಂಬರ್ 2024 ರಿಂದ ಸುಪ್ರೀಂ ಕೋರ್ಟ್ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net