Groom Suicide: ಮದುವೆಗೆ ಎರಡೇ ದಿನ ಬಾಕಿ: ನವಜೀವನಕ್ಕೆ ಕಾಲಿಡಬೇಕಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆ!

Groom Suicide
Groom Suicide
Published on
ವಿಶಾಖಪಟ್ಟಣ: ಮನೆ ತುಂಬಾ ನೆಂಟರಿಷ್ಟರು.. ಎಲ್ಲೆಡೆ ಮದುವೆ ಸಂಭ್ರಮ.. ಇನ್ನೆರಡೇ ದಿನಗಳಲ್ಲಿ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕನೊಬ್ಬ ಅನಿರೀಕ್ಷಿತವಾಗಿ(Groom Suicide) ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಇಲ್ಲಿನ ಮಧುರವಾಡ ಸಮೀಪದ ಮಾರಿಕವಲಸೆಯಲ್ಲಿ ನಡೆದಿದೆ.
ಮಾರಿಕವಲಸೆ ನಿವಾಸಿ ಚಂದ್ರಶೇಖರ್ (27) ಮೃತಪಟ್ಟ ದುರ್ದೈವಿ. ಈತ ಸಾಗರ್ ನಗರದ ಖಾಸಗಿ ಸ್ಟುಡಿಯೋವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದನು. ಚಂದ್ರಶೇಖರ್ ಅವರ ವಿವಾಹವು ಇದೇ ಶುಕ್ರವಾರ (ಮೇ 2) ಅದ್ಧೂರಿಯಾಗಿ ನಡೆಯಬೇಕಿತ್ತು. ಮದುವೆಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಆದರೆ, ಬುಧವಾರ ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ಯಾರೂ ಇಲ್ಲದ ವೇಳೆ ಚಂದ್ರಶೇಖರ್ ಕ್ರಿಮಿನಾಶಕ ಸೇವಿಸಿದ್ದಾನೆ.

ಆಸ್ಪತ್ರೆಯಲ್ಲಿ ಕೊನೆಯುಸಿರು

ವಿಷ ಸೇವಿಸಿ ಚಂದ್ರಶೇಖರ್ ನರಳಾಡುತ್ತಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ತಕ್ಷಣ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹಸೆಮಣೆ ಏರಬೇಕಿದ್ದ ಮಗ ಹೆಣವಾಗಿ ಮಲಗಿರುವುದನ್ನು ಕಂಡು ಗ್ರಾಮಸ್ಥರು ಮರುಗುತ್ತಿದ್ದಾರೆ.

ನಿಗೂಢ ಕಾರಣ!

ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಮದುವೆಯ ಮುನ್ನಾದಿನಗಳಲ್ಲೇ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರಿಲೋವ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಲ್ಲೇಶ್ವರ ರಾವ್ ಅವರ ಮಾರ್ಗದರ್ಶನದಲ್ಲಿ ಎಎಸ್ಐ ಶ್ರೀನಿವಾಸರಾವ್ ಪ್ರಕರಣ ದಾಖಲಿಸಿಕೊಂಡಿದ್ದು, ಚಂದ್ರಶೇಖರ್ ಅವರ ಮೊಬೈಲ್ ಕರೆಗಳ ವಿವರ ಮತ್ತು ಆತನ ಆಪ್ತ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
"ಯುವಕನ ಆತ್ಮಹತ್ಯೆಗೆ ಪ್ರೇಮ ಪ್ರಕರಣವೇ ಅಥವಾ ಮದುವೆಯ ಒತ್ತಡವೇ ಅಥವಾ ಇನ್ಯಾವುದೇ ವೈಯಕ್ತಿಕ ಕಾರಣಗಳಿವೆಯೇ ಎಂಬ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ," ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net