ಕಳೆದ ಒಂದು ವರ್ಷದಿಂದ ಜಾಗತಿಕವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಪ್ರಭಾವ ಹೆಚ್ಚಾಗುತ್ತಿದ್ದು, ಅಮೆರಿಕವೊಂದರಲ್ಲೇ ಪ್ರತಿ ತಿಂಗಳು ಸರಾಸರಿ 16,000 ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. 2026ರ ಏಪ್ರಿಲ್ ತಿಂಗಳ ಒಟ್ಟು ಉದ್ಯೋಗ ಕಡಿತದಲ್ಲಿ ಶೇಕಡ 26ರಷ್ಟು ಪಾಲು ಎಐ ತಂತ್ರಜ್ಞಾನದ್ದೇ ಆಗಿದೆ ಎಂಬ ಆಘಾತಕಾರಿ ಸಂಗತಿ, ಮಾಹಿತಿ-ತಂತ್ರಜ್ಞಾನ ವಲಯವನ್ನು ಬೆಚ್ಚಿಬೀಳಿಸಿದೆ. ಟೆಕ್ ದೈತ್ಯ ಮೆಟಾ ಹಾಗೂ ಮೈಕ್ರೋಸಾಫ್ಟ್- ಈ ಎರಡು ಕಂಪನಿಗಳೇ 20 ಸಾವಿರ ಸಿಬ್ಬಂದಿಯನ್ನು ತೆಗೆದು ಹಾಕಿವೆ. ಅಮೆಜಾನ್, ಗೂಗಲ್, ಒರಾಕಲ್, ಸೇಲ್ಸ್ಫೋರ್ಸ್, ನೈಕಿ, ಸ್ನಾ್ಯಪ್ ಸೇರಿದಂತೆ ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡಿವೆ. ಮೆಟಾ ಕಂಪನಿಯಂತೂ ಮುಂಬರುವ ದಿನಗಳಲ್ಲಿ ಮತ್ತೆ 8 ಸಾವಿರ ಸಿಬ್ಬಂದಿಯನ್ನು ಕೈ ಬಿಡುವ ಯೋಜನೆ ಹಾಕಿಕೊಂಡಿದೆಯಲ್ಲದೆ, 6 ಸಾವಿರ ಹುದ್ದೆಗಳಿಗೆ ಹೊಸದಾಗಿ ನೇಮಕಾತಿ ಮಾಡದಿರಲು ನಿರ್ಧರಿಸಿದೆ. ಮೈಕ್ರೋಸಾಫ್ಟ್ ಕಂಪನಿ ತನ್ನ ಅಮೆರಿಕದ ಉದ್ಯೋಗಿಗಳಲ್ಲಿ ಶೇಕಡ 7 ಮಂದಿಗೆ ಸ್ವಯಂನಿವೃತ್ತಿ ಪಡೆದುಕೊಳ್ಳುವಂತೆ ಹೇಳಿದೆ. ನೈಕಿ 1,400 ಹುದ್ದೆಗಳನ್ನೇ ರದ್ದು ಮಾಡಿದೆ.